More

    ಚುನಾವಣೆಗೆ ಸಿದ್ಧಗೊಂಡ ಕೋಡಿ ಗ್ರಾಮಸ್ಥರು, ಮಾರ್ಚ್ 29ರಂದು ಮತದಾನ

    ಕೋಟ: ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಡಿ.22ರಂದು ಸಾರ್ವತ್ರಿಕವಾಗಿ ಚುನಾವಣೆ ನಡೆದಿದ್ದರೂ ಉಡುಪಿ ಜಿಲ್ಲೆಯ ಕೋಡಿ ಪಂಚಾಯಿತಿಯಲ್ಲಿ ಹಕ್ಕುಪತ್ರ ಹಾಗೂ ಜಟ್ಟಿ ಕಾಮಗಾರಿ ವಿಳಂಬ ವಿರೋಧಿಸಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದರು. ಸದ್ಯ ಮತ್ತೆ ಮಾರ್ಚ್ 29ಕ್ಕೆ ಚುನಾವಣೆ ಘೋಷಣೆಯಾಗಿದ್ದು, ಮತ್ತೆ ಚುನಾವಣೆಗೆ ಅಣಿಯಾಗುವ ಕುರಿತು ಗ್ರಾಮಸ್ಥರು ಗುರುವಾರ ಸಭೆ ನಡೆಸಿದರು.

    ಕೋಡಿ ಹೊಸಬೆಂಗ್ರೆ ಲೈಟ್‌ಹೌಸ್ ಬಳಿ ನಡೆದ ಸಭೆಯಲ್ಲಿ ಹಕ್ಕುಪತ್ರದ ಕುರಿತಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಸ್ಪಂದಿಸುತ್ತಿದ್ದು ಈ ಬಾರಿ ಚುನಾವಣೆಯಿಂದ ಹಿಂದೆ ಸರಿಯದಂತೆ ತೀರ್ಮಾನಿಸಲಾಗಿದೆ. ಅಲ್ಲದೆ ಅಭಿವೃದ್ಧಿ ವ್ಯವಸ್ಥೆ ಕುಂಠಿತಗೊಳ್ಳಬಾರದು ಎಂಬ ನಿಟ್ಟಿನಲ್ಲಿ ಚುನಾವಣೆಯಲ್ಲಿ ಭಾಗಿಯಾಗಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೋಡಿ ಭಾಗದ ಹಿರಿಯ ಮುಖಂಡ ಲಕ್ಷ್ಮಣ್ ಸುವರ್ಣ ನೇತೃತ್ವದಲ್ಲಿ ಸಭೆ ನಡೆಯಿತು.
    ಗ್ರಾಮದ ಮುಖಂಡರಾದ ಜಗನಾಥ್ ಅಮೀನ್, ಅಶೋಕ ತಿಂಗಳಾಯ, ಶಂಕರ್ ಬಂಗೇರ, ಚಂದ್ರ ಕಾಂಚನ್, ಕೋಡಿ ಬೇಂಗ್ರೆಯಿಂದ ನಾಗರಾಜ್ ಕುಂದರ್, ಮನೋಹರ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

    ಅವಿರೋಧ ಆಯ್ಕೆ?
    ಸಭೆಯಲ್ಲಿ ಅವಿರೋಧ ಆಯ್ಕೆ ಕುರಿತು ಚರ್ಚಿಸಲಾಯಿತು. ಸ್ಥಳೀಯ ಶಾಸಕರು, ಸಚಿವರು, ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಚುನಾವಣೆಗೆ ಹೋಗದೆ ಅವಿರೋಧ ಆಯ್ಕೆಗೊಳಿಸುವ ಕುರಿತು ಚರ್ಚೆ ನಡೆಯಿತು. ಪ್ರತಿಬಾರಿ ಜನರಿಗೆ ಚುನಾವಣೆ ಕಿರಿಕಿರಿ ತಪ್ಪಿಸುವ ದಿಸೆಯಲ್ಲಿ 6.6 ಸ್ಥಾನಗಳ ಹೊಂದಾಣಿಕೆಯ ಕುರಿತು ಸಭೆಯಲ್ಲಿ ಗ್ರಾಮಸ್ಥರ ಪರವಾಗಿ ಸ್ಥಳೀಯ ಮುಖಂಡರು ಚರ್ಚಿಸಿದರು. ಈ ಮಧ್ಯೆ ಎರಡು ಎರಡು ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಸಿದ್ಧತೆ ನಡೆಸಿದ್ದಾರೆ.

    ಜಿಲ್ಲಾಧಿಕಾರಿ ಮನವಿಗೆ ಸ್ಪಂದಿಸಿದ ಗ್ರಾಮಸ್ಥರು
    ಗ್ರಾಪಂ ಚುನಾವಣೆ ಬಹಿಷ್ಕರಿಸಿದ ಸಂದರ್ಭದಲ್ಲಿ ಕೋಡಿ ಗ್ರಾಮಕ್ಕೆ ಡಿ.11ರಂದು ಜಿಲ್ಲಾಧಿಕಾರಿ ಸಭೆ ನಡೆಸಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು. ಇದಾದ ನಂತರ ಇದೇ ಮೊದಲ ಬಾರಿಗೆ ಗ್ರಾಮಸ್ಥರು ಜಿಲ್ಲಾಧಿಕಾರಿ, ತಹಸೀಲ್ದಾರ್ ಕಾರ್ಯ ವೈಖರಿಯನ್ನು ಸಭೆಯಲ್ಲಿ ಶ್ಲಾಘಿಸಿದರಲ್ಲದೆ, ಅಧಿಕಾರಿಗಳ ಮನವಿಗೆ ಸ್ಪಂದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts