More

    ಮತದಾನ ಮಾಡುವುದು ಸಂವಿಧಾನಬದ್ಧ ಕರ್ತವ್ಯ

    ಮಡಿಕೇರಿ: ಪ್ರಜಾಪ್ರಭುತ್ವವನ್ನು ಬಲಪಡಿಸಲು 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ಮತದಾನ ಮಾಡುವುದು ಸಂವಿಧಾನಬದ್ಧ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಹೇಳಿದರು.
    ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
    ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಆಡಳಿತ ವ್ಯವಸ್ಥೆಯಲ್ಲಿ ಚುನಾವಣೆ ಮತ್ತು ಪ್ರಕೃತಿ ವಿಕೋಪ ನಿರ್ವಹಣಾ ಕರ್ತವ್ಯಗಳು ಅತ್ಯಂತ ಪ್ರಮುಖ ಜವಾಬ್ದಾರಿಗಳಾಗಿವೆ. ಹದಿನೆಂಟು ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿ ತಪ್ಪದೇ ಮತ ಚಲಾಯಿಸಬೇಕು. ಚುನಾವಣಾ ಪದ್ಧತಿಯಲ್ಲಿಯೂ ಸಾಕಷ್ಟು ಸುಧಾರಣೆಯಾಗಿದ್ದು, ವಿದ್ಯುನ್ಮಾನ ಮತಯಂತ್ರ, ಮತವನ್ನು ಯಾರಿಗೆ ಚಲಾಯಿಸಲಾಗಿದೆ ಎಂಬ ಬಗ್ಗೆ ಖಚಿತ ಪಡಿಸಿಕೊಳ್ಳಲು ವಿವಿಪ್ಯಾಟ್ ಬಂದಿದೆ ಎಂದರು.
    ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸ ಮಾತನಾಡಿ, ಯುವ ಜನರು ಮತದಾನದ ಮಹತ್ವವನ್ನು ಅರಿತು, ಯಾವುದೇ ಆಮಿಷಕ್ಕೆ ಒಳಗಾಗದೆ ಮುಕ್ತ ಮತ್ತು ನಿರ್ಭೀತವಾಗಿ ಮತ ಚಲಾವಣೆ ಮಾಡಬೇಕು ಎಂದು ತಿಳಿಸಿದರು.
    ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಿ.ವಿ.ಸ್ನೇಹಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಚ್ಚಾಡೊ, ಚುನಾವಣಾ ತಹಸೀಲ್ದಾರ್ ಕುಸುಮಾ, ಚುನಾವಣಾ ಶಿರಸ್ತೇದಾರರಾದ ಪ್ರಕಾಶ್, ಪ್ರವೀಣ್‌ಕುಮಾರ್, ಅನಿಲ್‌ಕುಮಾರ್, ಸಿನೋಜ್ ಮತ್ತಿತರರು ಇದ್ದರು.
    ಉತ್ತಮವಾಗಿ ಕೆಲಸ ನಿರ್ವಹಿಸಿದವರಿಗೆ ಸನ್ಮಾನ
    ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಮತದಾನದ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಮತದಾರರನ್ನು ಕಡ್ಡಾಯ ಹಾಗೂ ನೈತಿಕ ಮತದಾನ ಮಾಡುವಂತೆ ಪ್ರೇರೇಪಿಸಿದ ಜಿಲ್ಲಾ ರಾಯಭಾರಿಗಳಾದ ಎಸ್.ಕೆ.ಈಶ್ವರಿ, ಭಾಗೀರಥಿ ಹುಲಿತಾಳ್ ಅವರನ್ನು ಸನ್ಮಾನಿಸಲಾಯಿತು.
    ಜಿಲ್ಲಾ ಮಟ್ಟದ ಉತ್ತಮ ಮತದಾರರ ಸಾಕ್ಷರತಾ ಸಂಘ ನಿರ್ವಹಿಸಿದ ತಿತಿಮತಿ ಸರ್ಕಾರಿ ಪ್ರೌಢಶಾಲೆಯ ಕವಿತಾ, ಮೂರ್ನಾಡಿನ ಮಾರುತಿ ಪದವಿ ಪೂರ್ವ ಕಾಲೇಜಿನ ಪಿ.ವಿ.ರಾಜಶ್ರೀ, ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪುಟ್ಟರಾಜು ಹಾಗೂ ಉತ್ತಮ ಬೂತ್ ಮಟ್ಟದ ಅಧಿಕಾರಿಗಳಾದ ನಗರದ ಎಫ್‌ಎಂಸಿ ಕಾಲೇಜು ಬಳಿಯ ಅಂಗನವಾಡಿ ಕಾರ್ಯಕರ್ತೆ ಚಿನ್ನಮ್ಮ, ಮಾಚಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಧರ್ಮಲಿಂಗಂ, ಕಲ್ಯಂದೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಎಸ್.ಸುಮಾಮಣಿ ಅವರನ್ನು ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts