More

    3 ವರ್ಷಗಳಲ್ಲಿ ಕೊಡಚಾದ್ರಿ ಕೇಬಲ್ ಕಾರ್

    ಕೊಲ್ಲೂರು: ಹದಿನೈದೇ ನಿಮಿಷಗಳಲ್ಲಿ ಕೊಲ್ಲೂರಿಂದ ಕೊಡಚಾದ್ರಿ ನೆತ್ತಿ ಏರಬಹುದಾದ ಒಂದು ಸಾವಿರ ಕೋಟಿ ರೂ.ವೆಚ್ಚದ ಕೇಬಲ್ ಕಾರ್ ವ್ಯವಸ್ಥೆ ಇನ್ನು ಮೂರು ವರ್ಷಗಳಲ್ಲಿ ಕಾರ್ಯಗತವಾಗಲಿದೆ.

    ನೂರು ಎಕರೆ ಜಾಗ ಮೀಸಲಿಡುವಂತೆ ಸಂಪುಟ ಸಭೆ ತೀರ್ಮಾನಿಸಿದ್ದು, ಕೊಲ್ಲೂರಿಂದ ಹೋಗಲು ಮತ್ತು ಕೊಡಚಾದ್ರಿಯಿಂದ ಕೆಳಗಿಳಿಯಲು ಹಳ್ಳಿಬೇರು, ದಳಿ, ಸಲಗೇರಿ ಎಂಬ ಮೂರು ಜಾಗಗಳನ್ನು ಗುರುತಿಸಲಾಗಿದೆ. ಕಡಿಮೆ ಮರಗಳಿರುವ ಜಾಗ ನೋಡಿ ಅಂತಿಮ ನಿರ್ಧಾರ ಮಾಡಲಾಗುವುದು. ಕೇಬಲ್ ಕಾರ್ ಹಾದುಹೋಗುವ ಜಾಗ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತಿದ್ದು, ಕ್ಲಿಯರೆನ್ಸ್‌ಗೆ ಕಳುಹಿಸಲಾಗಿದೆ. ಕೆಲವೇ ತಿಂಗಳಲ್ಲಿ ಕಾಮಗಾರಿ ಆರಂಭವಾಗಿ ಮೂರು ವರ್ಷದೊಳಗೆ ಚಾಲನೆ ಸಿಗಲಿದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಪ್ರಯಾಣಿಕರಿಗೇನು ಏನು ಲಾಭ?: ಕೊಲ್ಲೂರು-ಕೊಡಚಾದ್ರಿ ನಡುವೆ ರಸ್ತೆ ಮಾರ್ಗಕ್ಕೆ ಇರುವ ದೂರ 32 ಕಿ.ಮೀ. ಕೇಬಲ್ ಕಾರಿನಲ್ಲಿ ಸಾಗಿದರೆ ಈ ಅಂತರ ಕೇವಲ 11 ಕಿ.ಮೀ. ಪರಿಸರದ ರಮ್ಯ ನೋಟಗಳ ನಡುವೆ ರೋಚಕ ಪಯಣವಷ್ಟೇ ಅಲ್ಲ, ಪ್ರಯಾಣದ ಸಮಯವೂ ಉಳಿತಾಯ. ಪ್ರಕೃತಿ ಸೌಂದರ್ಯಕ್ಕೆ ಧಕ್ಕೆ ಆಗದಂತೆ ಅಭಿವೃದ್ಧಿ ಪಡಿಸಬಹುದಾದ ವಿಧಾನಗಳ ಕುರಿತು ಪ್ರವಾಸೋದ್ಯಮ ಇಲಾಖೆ ಕೇಬಲ್ ಕಾರ್ ಯೋಜನೆ ಬಗ್ಗೆ ಸಮೀಕ್ಷೆ ನಡೆಸಿದೆ. ಸಲ್ಲಿಸಿದ ವರದಿಯ ಆಧಾರದಲ್ಲಿ ವಿಧಾನಸಭೆ ಅಧಿವೇಶನ ಯೋಜನೆಗೆ ಜಾಗ ಬಿಟ್ಟು ಕೊಡುವ ಜತೆಗೆ ತಾತ್ವಿಕ ಒಪ್ಪಿಗೆಯನ್ನೂ ಸೂಚಿಸಿದೆ.

    ಪ್ರಕೃತಿ ವಿರೋಧಿ ಯೋಜನೆಗೆ ವಿರೋಧ: ಕೇಬಲ್ ಕಾರ್ ಯೋಜನೆ ಮೂಲಕ ಪ್ರವಾಸಿಗರ ಸೆಳೆಯುವ ಪ್ರಯತ್ನ ಒಂದೆಡೆಯಾದರೆ ಪರಿಸರ ಸೂಕ್ಷ್ಮಪ್ರದೇಶವಾದ ಕೊಡಚಾದ್ರಿ ಸಂಪರ್ಕಕ್ಕೆ ಕೇಬಲ್ ಕಾರ್ ಯೋಜನೆ ಅವೈಜ್ಞಾನಿಕ ಎಂಬ ವಿರೋಧವೂ ಕೇಳಿಬರುತ್ತಿದೆ. ಕೊಡಚಾದ್ರಿ ಧಾರ್ಮಿಕ ಕೇಂದ್ರವೇ ಹೊರತು ಪ್ರವಾಸಿತಾಣವಲ್ಲ ಎಂಬ ನೆಲೆಯಲ್ಲಿ ವಿರೋಧದ ಧ್ವನಿ ಕೇಳಿಬರುತ್ತಿದೆ. ಕೇಬಲ್ ಕಾರ್ ಯೋಜನೆ ಜಾರಿಯಾದರೆ, ಪ್ರಶಾಂತ ಪರಿಸರ ಪ್ರಕ್ಷುಬ್ಧವಾಗುತ್ತದೆ. ಔಷಧೀಯ ಸಸ್ಯಗಳು, ಕಾಡಿನ ಸೂಕ್ಷ್ಮಪ್ರಬೇಧಗಳು ನಾಶವಾಗುತ್ತವೆ. ನಿಟ್ಟೂರು ಕೊಲ್ಲೂರು ಜೀಪ್ ಸಂಘಟನೆ, ಕೊಡಚಾದ್ರಿ ಉಳಿಸಿ ಹೋರಾಟ ಸಮಿತಿ ಪಶ್ಚಿಮಘಟ್ಟ ಉಳಿಸಿ ಹೋರಾಟ ಸಮಿತಿ, ಪರಿಸರ ಹೋರಾಟಗಾರರು ಕೇಬಲ್ ಕಾರ್ ಯೋಜನೆ ವಿರುದ್ಧ ಹೋರಾಟದ ಕಣಕ್ಕಿಳಿಯಲಿದ್ದಾರೆ ಎಂದು ಕೊಡಚಾದ್ರಿ ಉಳಿಸಿ ಹೋರಾಟ ಸಮಿತಿ ಸ್ಥಾಪಕ ಕೇಮಾರು ಈಶವಿಠಲದಾಸ ಸ್ವಾಮೀಜಿ ತಿಳಿಸಿದ್ದಾರೆ.

    ಕೊಡಚಾದ್ರಿ ರೋಪ್ ವೇ ಯೋಜನೆಗೆ ಅಧಿವೇಶನದಲ್ಲಿ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಹಲವು ಇಲಾಖೆಗಳಲ್ಲಿ ಈ ಯೋಜನೆಯ ಕೆಲಸಗಳು ನಡೆಯುತ್ತಿವೆ. ನಿರ್ಮಾಣ ಯೋಜನೆಯ ಪ್ರಸ್ತಾವನೆ ರಚಿಸಿದ್ದು, ಹಲವು ಇಲಾಖೆಗಳ ಜತೆಗೆ ಮಾತುಕತೆ ನಡೆದಿದೆ. ಈ ಯೋಜನೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ನಾಶ ಆಗುವುದಿಲ್ಲ. ರೋಪ್ ವೇಯಿಂದ ಪ್ರವಾಸೋದ್ಯಮವೂ ಅಭಿವೃದ್ಧಿ ಆಗಲಿದೆ.
    – ಬಿ.ವೈ.ರಾಘವೇಂದ್ರ, ಸಂಸದ, ಶಿವಮೊಗ್ಗ ಲೋಕಸಭೆ

    ಸಾವಿರ ಕೋಟಿ ರೂ.ವೆಚ್ಚದಲ್ಲಿ ಕೇಬಲ್ ಕಾರ್ ಯೋಜನೆ ಕೈಗೆತ್ತಿಕೊಳ್ಳಲಿದ್ದು, ಡಿಪಿಆರ್ ಮುಗಿಯುವ ಹಂತದಲ್ಲಿದೆ. ಇದು ಕನಿಷ್ಠ ಎರಡು ವರ್ಷದ ಪ್ರಾಜೆಕ್ಟ್. ನನ್ನ ಅವಧಿಯಲ್ಲಿ ಕಾಮಗಾರಿ ಮುಗಿಸುವ ಉದ್ದೇಶವಿದೆ. ಪರಿಸರಕ್ಕೆ ಹಾನಿ ಆಗದಂತೆ ಯೋಜನೆ ರೂಪಿಸಲಾಗುತ್ತಿದೆ.
    – ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕ, ಬೈಂದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts