More

    ಜ್ಞಾನ ವೃದ್ಧಿಗೆ ಪುಸ್ತಕಗಳ ಓದು ಸಹಕಾರಿ

    ಬೆಳಗಾವಿ: ಜ್ಞಾನ ವೃದ್ಧಿಗೆ ಪುಸ್ತಕಗಳು ಸಹಕಾರಿಯಾಗಿವೆ. ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಬೆಳವಣಿಗೆಯಲ್ಲಿ ಪುಸ್ತಕಗಳ ಪಾತ್ರ ಪ್ರಮುಖವಾಗಿತ್ತು ಎಂದು ಖ್ಯಾತ ನಾಟಕಕಾರ ಡಾ. ಡಿ.ಎಸ್.ಚೌಗಲೆ ಹೇಳಿದ್ದಾರೆ.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬುದ್ಧ ರಕ್ಷಿತ ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ ಬಸವರಾಜ ಕಟ್ಟೀಮನಿ ಸಭಾಗೃಹದಲ್ಲಿ ಶುಕ್ರವಾರ
    ಆಯೋಜಿಸಿದ್ದ ‘ಡಾ.ಬಿ.ಆರ್.ಅಂಬೇಡ್ಕರ್ ಓದು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚಾಗುವುದರ ಜತೆಗೆ ವಿವೇಚನಾಶಕ್ತಿಯೂ ವೃದ್ಧಿಸುತ್ತದೆ ಎಂದು ತಿಳಿಸಿದರು.

    ಹಿರಿಯ ಪತ್ರಕರ್ತ ಹೃಷಿಕೇಶ್ ಬಹದ್ದೂರ್‌ದೇಸಾಯಿ ಮಾತನಾಡಿ, ಧರ್ಮಗಳ ಕಟ್ಟುಪಾಡು ಬಿಟ್ಟು ನಾಗರಿಕಪ್ರಜ್ಞೆ ಬೆಳೆಸಿಕೊಳ್ಳುವುದರಿಂದ ಪ್ರಜಾಪ್ರಭುತ್ವದ ಬೆಳವಣಿಗೆಯಾಗುತ್ತದೆ. ಪ್ರಜ್ಞಾಪ್ರಭುತ್ವದಿಂದ ಮಾನವತಾವಾದಿ ಶಕ್ತಿ ಬರುತ್ತದೆ ಎಂದು ಅಂಬೇಡ್ಕರ್ ಅವರ ಮಾತುಗಳನ್ನು ಸ್ಮರಿಸಿದರು. ಜೀವನದಲ್ಲಿ ಓದು ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ಆದಾಗ್ಯೂ ಇಂದಿನ ಪೀಳಿಗೆಗೆ ಪುಸ್ತಕ ಓದಿ ಎಂದು ಪೀಡಿಸುವುದು ಅಷ್ಟೊಂದು ಒಳ್ಳೆಯ ಸಂಗತಿಯಲ್ಲ. ಅವರವರ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಬಳಸಿಕೊಂಡು ವಿಷಯ ತಿಳಿಸುವ ಕಾರ್ಯ ಮಾಡಬೇಕಿದೆ.

    ಹಲವಾರು ಪುಸ್ತಕಗಳು ಡಿಜಿಟಲ್ ಗ್ರಂಥಾಲಯದಲ್ಲಿ ಲಭ್ಯವಿದ್ದು, ಯುವ ಜನತೆ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬುದ್ಧ ರಕ್ಷಿತ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಬಾಬಾಸಾಹೇಬ ಕಾಂಬಳೆ, ಮಲ್ಲೇಶ ಚೌಗಲೆ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸ್ವಾಗತಿಸಿದರು. ಬಸವರಾಜ ತಳವಾರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts