More

    ಲಾರ್ಡ್ಸ್ ಟೆಸ್ಟ್‌ನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಶತಕ; ರೋಹಿತ್, ಕೊಹ್ಲಿ ಜತೆ ಭರ್ಜರಿ ಜತೆಯಾಟ

    ಲಂಡನ್: ಮಳೆ ಅಡಚಣೆಯ ಬಳಿಕ ಪ್ರತಿಷ್ಠಿತ ಲಾರ್ಡ್ಸ್ ಅಂಗಳದಲ್ಲಿ ಕರ್ನಾಟಕದ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ (127*ರನ್, 248 ಎಸೆತ, 12 ಬೌಂಡರಿ, 1 ಸಿಕ್ಸರ್) ಸಿಡಿಸಿದ ಭರ್ಜರಿ ಶತಕ ಹಾಗೂ ರೋಹಿತ್ ಶರ್ಮ (83 ರನ್, 145 ಎಸೆತ, 11 ಬೌಂಡರಿ, 1 ಸಿಕ್ಸರ್) ದಿಟ್ಟ ಬ್ಯಾಟಿಂಗ್‌ನಿಂದ ಭಾರತ ತಂಡ, ನಾಟಿಂಗ್‌ಹ್ಯಾಂನಲ್ಲಿ ಕೈತಪ್ಪಿದ್ದ ಗೆಲುವನ್ನು 2ನೇ ಟೆಸ್ಟ್ ಪಂದ್ಯದಲ್ಲಿ ಒಲಿಸಿಕೊಳ್ಳುವ ನಿಟ್ಟಿನಲ್ಲಿ ಉತ್ತಮ ಆರಂಭವನ್ನು ಕಂಡಿದೆ. ಆತಿಥೇಯ ಇಂಗ್ಲೆಂಡ್ ವಿರುದ್ಧ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ, ದಿನದಂತ್ಯಕ್ಕೆ 90 ಓವರ್‌ಗಳಲ್ಲಿ 3 ವಿಕೆಟ್‌ಗೆ 276 ರನ್ ಪೇರಿಸಿ ಸುಸ್ಥಿತಿಯಲ್ಲಿದೆ. ರೋಹಿತ್-ರಾಹುಲ್ ಜೋಡಿ ಮೊದಲ ವಿಕೆಟ್‌ಗೆ 126 ರನ್ ಕಲೆಹಾಕಿ ಭದ್ರ ಅಡಿಪಾಯ ಹಾಕಿಕೊಟ್ಟಿತು. ಬಳಿಕ ನಾಯಕ ವಿರಾಟ್ ಕೊಹ್ಲಿ (42 ರನ್, 103 ಎಸೆತ, 3 ಬೌಂಡರಿ) ಜತೆಗೂಡಿ 117 ರನ್ ಜತೆಯಾಟವಾಡುವ ಮೂಲಕ ಕೆಎಲ್ ರಾಹುಲ್ ತಂಡವನ್ನು ಸದೃಢಗೊಳಿಸಿದರು. ದಿನದಂತ್ಯ ಮುಕ್ತಾಯಕ್ಕೆ ಕೆಲ ಓವರ್ ಬಾಕಿ ಇದ್ದಾಗ ಕೊಹ್ಲಿ, ರಾಬಿನ್‌ಸನ್ ಎಸೆತದಲ್ಲಿ ರೂಟ್‌ಗೆ ಕ್ಯಾಚ್ ನೀಡಿ ಔಟಾದರು. ಶತಕವೀರ ರಾಹುಲ್, ಉಪನಾಯಕ ಅಜಿಂಕ್ಯ ರಹಾನೆ (1*) ಜತೆ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ರಾಹುಲ್-ರೋಹಿತ್ ಉತ್ತಮ ಅಡಿಪಾಯ
    ಕನ್ನಡಿಗ ಕೆಎಲ್ ರಾಹುಲ್ ಹಾಗೂ ಅನುಭವಿ ರೋಹಿತ್ ಶರ್ಮ ಜೋಡಿಗೆ ಇನಿಂಗ್ಸ್‌ನ ಆರಂಭದಲ್ಲೇ ಮಳೆ ಸಿಂಚನದ ಸ್ವಾಗತ ಲಭಿಸಿತು. ತೇವಾಂಶದಿಂದ ಕೂಡಿದ ಪಿಚ್‌ನಲ್ಲಿ ಇಂಗ್ಲೆಂಡ್ ವೇಗಿಗಳ ಕರಾರುವಾಕ್ ದಾಳಿಯನ್ನು ಈ ಜೋಡಿ ಎಚ್ಚರಿಕೆಯಿಂದ ಎದುರಿಸಿತು. ರಾಹುಲ್ ರನ್ ಗಳಿಸುವ ಬದಲಿಗೆ ಕ್ರೀಸ್‌ನಲ್ಲೇ ಹೆಚ್ಚು ಹೊತ್ತು ನಿಲ್ಲುವ ಪ್ರಯತ್ನ ಮಾಡಿದರು. 14 ಓವರ್‌ಗಳಲ್ಲಿ 22 ರನ್ ಗಳಿಸಿದ್ದ ವೇಳೆ ಭಾರತದ ಇನಿಂಗ್ಸ್‌ಗೆ ಮಳೆ ಅಡ್ಡಿಪಡಿಸಿತು. ಇದರಿಂದ ಭೋಜನ ವಿರಾಮವನ್ನು ನಿಗದಿತ ಅವಧಿಗೂ ಮೊದಲೇ ಘೋಷಿಸಲಾಯಿತು. ಆಟ ಪುನರಾರಂಭಗೊಂಡ 2ನೇ ಓವರ್‌ನಲ್ಲೇ ರೋಹಿತ್ ಶರ್ಮ, ಸ್ಯಾಮ್ ಕರ‌್ರನ್ ಓವರ್‌ನಲ್ಲಿ 4 ಬೌಂಡರಿ ಸಿಡಿಸಿದರು. ಸುದೀರ್ಘ ಅವಧಿವರೆಗೆ ಇನಿಂಗ್ಸ್ ಕಟ್ಟಲು ಈ ಜೋಡಿ ಯತ್ನಿಸಿತು. ಆರಂಭಿಕ ಹಂತದಲ್ಲೇ ಭಾರತಕ್ಕೆ ಬ್ರೇಕ್ ಹಾಕುವ ಯೋಜನೆಯಲ್ಲಿದ್ದ ಇಂಗ್ಲೆಂಡ್ ವೇಗಿಗಳಿಗೆ ರೋಹಿತ್- ರಾಹುಲ್ ಜೋಡಿ ತಡೆಗೋಡೆಯಾಯಿತು. ವಿದೇಶಿ ನೆಲದಲ್ಲಿ ಚೊಚ್ಚಲ ಶತಕದತ್ತ ದಾಪುಗಾಲಿಟ್ಟಿದ್ದ ರೋಹಿತ್‌ಗೆ ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ ಆಘಾತ ನೀಡಿದರು. ಮತ್ತೊಂದು ತುದಿಯಲ್ಲಿದ್ದ ರಾಹುಲ್, ಜೋಡಿ ನಿರ್ಗಮನದ ವೇಳೆಗೆ 118 ಎಸೆತಗಳಿಗೆ 33 ರನ್ ಕಲೆಹಾಕಿದ್ದರು. ರೋಹಿತ್ ನಿರ್ಗಮನದ ಬಳಿಕ ರಾಹುಲ್ ಬಿರುಸಿನ ಬ್ಯಾಟಿಂಗ್‌ಗೆ ಮುಂದಾದರು.

    ಇದನ್ನೂ ಓದಿ: 2024ರ ಒಲಿಂಪಿಕ್ಸ್‌ವರೆಗೂ ಲವ್ಲಿನಾಗೆ ಪ್ರತಿ ತಿಂಗಳು 1 ಲಕ್ಷ ರೂ. ಸ್ಕಾಲರ್‌ಶಿಪ್!

    ಮುಂದುವರಿದ ಪೂಜಾರ ವೈಫಲ್ಯ
    ಮೂರನೇ ಕ್ರಮಾಂಕದಲ್ಲಿ ತಂಡದ ಆಧಾರ ಸ್ತಂಭದಂತಿರುವ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ (9ರನ್, 23 ಎಸೆತ, 1 ಬೌಂಡರಿ) ವೈಫಲ್ಯ ಮುಂದುವರಿಸಿದರು. ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 4 ರನ್‌ಗಳಿಸಿದ್ದ ಪೂಜಾರ, ಸತತ 2ನೇ ಟೆಸ್ಟ್‌ನಲ್ಲೂ ದೊಡ್ಡ ಮೊತ್ತ ಪೇರಿಸಲು ವಿಲರಾದರು. 2ನೇ ವಿಕೆಟ್‌ಗೆ ರಾಹುಲ್ ಜತೆಗೂಡಿ 24 ರನ್ ಕಲೆಹಾಕಿದರು. ಪೂಜಾರ ನಿರ್ಗಮನದ ಬಳಿಕ ಕ್ರೀಸ್‌ಗಿಳಿದ ಕೊಹ್ಲಿ ರಾಹುಲ್‌ಗೆ ಇನಿಂಗ್ಸ್ ಕಟ್ಟಲು ಸಾಥ್ ನೀಡಿದರು. ಬಿರುಸಿನ ಬ್ಯಾಟಿಂಗ್‌ನಿಂದ ರಾಹುಲ್ ಇಂಗ್ಲೆಂಡ್ ನೆಲದಲ್ಲಿ ಸತತ 3ನೇ ಟೆಸ್ಟ್ ಪಂದ್ಯದಲ್ಲೂ 50 ಪ್ಲಸ್ ರನ್ ಸಿಡಿಸಿದರು.

    ಇಶಾಂತ್ ಶರ್ಮಗೆ ಸ್ಥಾನ
    ಭಾರತ ತಂಡ ಏಕೈಕ ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಗಾಯಾಳು ಶಾರ್ದೂಲ್ ಠಾಕೂರ್ ಬದಲಿಗೆ ಇಶಾಂತ್ ಶರ್ಮ ತಂಡಕ್ಕೆ ವಾಪಸಾದರು. ಇದರಿಂದ ಆರ್. ಅಶ್ವಿನ್ ಮತ್ತೊಮ್ಮೆ ಆಡುವ ಬಳಗದಿಂದ ಹೊರಗುಳಿದರು. ಮತ್ತೊಂದೆಡೆ, ಆತಿಥೇಯ ಇಂಗ್ಲೆಂಡ್ ತಂಡ 3 ಬದಲಾವಣೆ ಮಾಡಿಕೊಂಡಿತು. ಡೇನಿಯಲ್ ಲಾರೆನ್ಸ್, ಜಾಕ್ ಕ್ರೌಲಿ ಹಾಗೂ ಸ್ಟುವರ್ಟ್ ಬ್ರಾಡ್ ಬದಲಿಗೆ ಮೊಯಿನ್ ಅಲಿ, ಹಸೀಬ್ ಹಮೀದ್ ಹಾಗೂ ಮಾರ್ಕ್ ವುಡ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರು.

    ಟೋಕಿಯೊ ಒಲಿಂಪಿಕ್ಸ್ ಬಳಿಕ ಪ್ಯಾರಾಲಿಂಪಿಕ್ಸ್‌ನಲ್ಲೂ ಭರ್ಜರಿ ಪದಕ ಬೇಟೆಗೆ ಸಜ್ಜಾಗಿದೆ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts