More

    ಅನರ್ಹರಿಗೂ ಸಿಗುತ್ತಿದೆ ಕಿಸಾನ್ ಸಮ್ಮಾನ್!; ಫಲಾನುಭವಿಗಳಲ್ಲದ 20.84 ಲಕ್ಷ ಮಂದಿಗೆ 1,364 ಕೋಟಿ ರೂ. ಪಾವತಿ

    ನವದೆಹಲಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಫಲಾನುಭವಿಗಳಲ್ಲದ 20.84 ಲಕ್ಷ ಮಂದಿಗೆ 1,364.13 ಕೋಟಿ ರೂ. ನೆರವು ಪಾವತಿಯಾಗಿದೆ. ಅನರ್ಹ ರೈತರು ಮತ್ತು ಆದಾಯ ತೆರಿಗೆ ಪಾವತಿಸುವ ರೈತರನ್ನು ಈ ಯೋಜನೆಯ ಫಲಾನುಭವಿಗಳೆಂದು ಗುರುತಿಸಿಲ್ಲ. ಅಂತಹವರಿಗೂ ಸಹಾಯಧನ ಸಂದಾಯವಾಗಿದೆ ಎಂದು ಕೃಷಿ ಸಚಿವಾಲಯ ಮಾಹಿತಿ ಹಕ್ಕು ಕಾಯ್ದೆಯ (ಆರ್​ಟಿಐ) ಅರ್ಜಿಯೊಂದಕ್ಕೆ ಪ್ರತಿಕ್ರಿಯಿಸಿದೆ. 2020ರ ಜುಲೈ 31ರವರೆಗೆ ಈ ರೀತಿ ನೆರವು ಪಡೆದ ಅನರ್ಹರ ಪೈಕಿ ಶೇ. 55.58 ರೈತರು ಆದಾಯ ತೆರಿಗೆ ಪಾವತಿಸುವವರು ಮತ್ತು ಶೇ. 44.41 ಮಂದಿ ಅನರ್ಹ ರೈತರ ವರ್ಗದಲ್ಲಿ ಇದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಪಂಜಾಬ್ (4.74 ಲಕ್ಷ ರೈತರು), ಅಸ್ಸಾಂ (3.45 ಲಕ್ಷ ರೈತರು), ಮಹಾರಾಷ್ಟ್ರ (2.86 ಲಕ್ಷ ರೈತರು), ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ (ತಲಾ 1.64 ಲಕ್ಷ ರೈತರು) ಇದು ಹೆಚ್ಚಾಗಿ ಕಂಡುಬಂದಿದೆ ಎಂದು ಅರ್ಜಿದಾರರಾದ ಕಾಮನ್​ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್ (ಚರಿ) ಸಂಸ್ಥೆಯ ವೆಂಕಟೇಶ್ ನಾಯಕ್ ಕೇಳಿದ್ದ ಪ್ರಶ್ನೆಗೆ ಸರ್ಕಾರ ಉತ್ತರಿಸಿದೆ.

    ಮಾನದಂಡ ಏನು?: ಪ್ರಧಾನಿ ನರೇಂದ್ರ ಮೋದಿ 2019ರಲ್ಲಿ ಆರಂಭಿಸಿದ ಮಹತ್ವಾಕಾಂಕ್ಷೆಯ ಈ ಯೋಜನೆಯಡಿ 2 ಹೆಕ್ಟೇರ್​ವರೆಗೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಫಲಾನುಭವಿಗಳೆಂದು ಗುರುತಿಸಲಾಗಿದೆ. ಇವರಿಗೆ ವಾರ್ಷಿಕವಾಗಿ 6 ಸಾವಿರ ರೂಪಾಯಿಯನ್ನು ಮೂರು ಸಮಾನ ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಸಲಾಗುತ್ತದೆ.

    ಸಂಸ್ಥೆಗಳ ಹೆಸರಿನಲ್ಲಿ ಜಮೀನು ಹೊಂದಿರುವವರು, ಕುಟುಂಬದಲ್ಲಿ ಈಗಾಗಲೇ ಒಂದಕ್ಕಿಂತ ಹೆಚ್ಚು ಫಲಾನುಭವಿಗಳು ಇರುವವರು, ಹಾಲಿ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರು ಮತ್ತು ಮಾಜಿಗಳು, ಸಂಸದರು, ಶಾಸಕರು, ಮೇಯರ್​ಗಳು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಸೇವೆಯಲ್ಲಿರುವ ಮತ್ತು ನಿವೃತ್ತರಾದ ಸರ್ಕಾರಿ ನೌಕರರು, 10 ಸಾವಿರ ರೂಪಾಯಿಗಿಂತ ಹೆಚ್ಚು ಪಿಂಚಣಿ ಪಡೆಯುವವರು, ತೆರಿಗೆ ಪಾವತಿದಾರರು, ವೈದ್ಯರು, ಇಂಜಿನಿಯರ್ಸ್, ಚಾರ್ಟರ್ಡ್ ಅಕೌಂಟೆಂಟ್ಸ್, ವಾಸ್ತುಶಿಲ್ಪಗಳು ಇನ್ನಿತರ ವೃತ್ತಿಪರರನ್ನು ಪಿಎಂ-ಕಿಸಾನ್ ಯೋಜನೆಯಿಂದ ಹೊರಗಿರಿಸಲಾಗಿದೆ.

    ನೆನಪಿರಲಿ, ಹುಡುಗರೂ ಸೇಫ್​ ಅಲ್ಲ… ಕೆಲಸದ ಆಮಿಷ ಒಡ್ಡಿ ಯುವಕನ ಮೇಲೆ ಗ್ಯಾಂಗ್​ರೇಪ್​!

    ಜನರು ಡಾಕ್ಟರ್ ಆಗೋದೇ ಕೈತುಂಬ ವರದಕ್ಷಿಣೆ ಪಡೆಯೋಕಂತೆ!; ಹೇಳಿಕೆ ವಿರೋಧಿಸಿ ಮುಖ್ಯಮಂತ್ರಿಗೆ ದೂರಿತ್ತ ಐಎಂಎ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts