More

    ಪ್ರೀತಿ ತಿರಸ್ಕರಿಸಿದ್ದರಿಂದ ಕೊಲೆ ಮಾಡಿದೆ…

    ಹುಬ್ಬಳ್ಳಿ: ಅಂಜಲಿಯು ನಾನಿದ್ದ ಮೈಸೂರಿಗೆ ಬರಲು ತಿರಸ್ಕರಿಸಿದ್ದಳು. ಅಲ್ಲದೇ ನನ್ನ ಮೊಬೈಲ್ ನಂಬರ್ ಬ್ಲಾಕ್ ಮಾಡಿ, ನನ್ನ ಪ್ರೀತಿ ತಿರಸ್ಕರಿಸಿದ್ದರಿಂದ ಕೊಲೆ ಮಾಡಿದೆ…
    ಸಿಐಡಿ ಅಧಿಕಾರಿಗಳು ಬುಧವಾರ ನಡೆಸಿದ ವಿಚಾರಣೆ ವೇಳೆ ಅಂಜಲಿ ಹಂತಕ ಗಿರೀಶ ಸಾವಂತ ಹೀಗೆ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
    ಸಿಐಡಿ ಅಧಿಕಾರಿಗಳು ಇಲ್ಲಿನ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ (20) ಹತ್ಯೆ ಪ್ರಕರಣದ ತನಿಖೆ ಚುರಕುಗುಕೊಂಡಿದ್ದು, ಆರೋಪಿ ಗಿರೀಶ ಸಾವಂತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆಗ ಗಿರೀಶ ಸಾವಂತ ಹಾಗೂ ಆತನ ತಾಯಿ ಸವಿತಾ ಸಾವಂತ ಅವರು ಕೂಡ ಸಿಐಡಿ ಮುಂದೆ ತಮ್ಮ ವಿಷಯಗಳನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
    ಘಟನೆ ವಿವರ: ಮೇ 15ರಂದು ಬೆಳಗಿನ ಜಾವ ಅಂಜಲಿ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಹಂತಕ ಗಿರೀಶ, ಮೈಸೂರಿಗೆ ತೆರಳಿ ಅಲ್ಲಿಂದ ಬೆಳಗಾವಿಗೆ ರೈಲಿನಲ್ಲಿ ಹೋಗುತ್ತಿದ್ದ ವೇಳೆ ದಾವಣಗೆರೆಯಲ್ಲಿ ಮಹಿಳೆಯೊಂದಿಗೆ ಕಿರಿಕ್ ಮಾಡಿಕೊಂಡಿದ್ದ. ಆಗ ಮಹಿಳೆಯ ಪತಿ ಹಾಗೂ ಸಹ ಪ್ರಯಾಣಿಕರಿಂದ ಹೊಡೆತ ಬೀಳುತ್ತಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದಾಗ ದಾವಣಗೆರೆ ಹತ್ತಿರ ರೈಲಿನಿಂದ ಬಿದ್ದು ಗಾಯಗೊಂಡಿದ್ದ. ಆತನನ್ನು ಹುಬ್ಬಳ್ಳಿ-ಧಾರವಾಡ ಪೊಲೀಸರು ರೈಲ್ವೆ ಪೊಲೀಸರ ಸಹಾಯದಿಂದ 16ರಂದು ತಡರಾತ್ರಿ ತಮ್ಮ ವಶಕ್ಕೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಿದ್ದರು.
    ಆರೋಪಿ ಗಿರೀಶನ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದರಿಂದ ಸಿಐಡಿ ಅಧಿಕಾರಿಗಳ ತಂಡ ಬುಧವಾರ ಬೆಳಗ್ಗೆ ಕಿಮ್ಸ್‌ಗೆ ತೆರಳಿ ವೈದ್ಯರ ಅನುಮತಿ ಮೇರೆಗೆ ಆತನನ್ನು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಿಸಿ ತಮ್ಮ ವಶಕ್ಕೆ ಪಡೆದರು. ನಂತರ ಬೆಂಡಿಗೇರಿ ಪೊಲೀಸ್ ಠಾಣೆಗೆ ಕರೆದೊಯ್ದು 4 ತಾಸಿಗೂ ಹೆಚ್ಚು ಸಮಯ ವಿಚಾರಣೆ ನಡೆಸಿದರು.
    ಅಂಜಲಿ ಅಜ್ಜಿಯಿಂದಲೂ ಮಾಹಿತಿ: ಸಿಐಡಿ ಎಸ್‌ಪಿ ವೆಂಕಟೇಶ್ ನೇತೃತ್ವದಲ್ಲಿ ಒಂಬತ್ತು ಜನರ ತಂಡ ಆಗಿಮಿಸಿದ್ದು, ಬುಧವಾರ ಎರಡು ತಂಡಗಳಾಗಿ ತನಿಖೆ ನಡೆಸಿವೆ. ಒಂದು ತಂಡ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಆರೋಪಿಯನ್ನು ವಶ ಪಡೆದರೆ, ಇನ್ನೊಂದು ಇಲ್ಲಿಯ ವೀರಾಪೂರ ಓಣಿಯ ಅಂಜಲಿ ಅಂಬಿಗೇರ ಅವರ ಮನೆಗೆ ಭೇಟಿ ನೀಡಿ ಅಂಜಲಿ ಅಜ್ಜಿ ಗಂಗಮ್ಮ ಅವರಿಂದ ಹೇಳಿಕೆ ಪಡೆದಿದೆ.
    ಸಿಐಡಿ ತಂಡವು ಮಂಗಳವಾರ ನಗರಕ್ಕೆ ಆಗಮಿಸಿತ್ತು. ಬೆಂಡಿಗೇರಿ ಠಾಣೆಗೆ ಭೇಟಿ ನೀಡಿ ರಾತ್ರಿಯಿಂದ ಬೆಳಗಿನವರೆಗೂ ಪೊಲೀಸರಿಂದ ಮಾಹಿತಿ ಪಡೆದಿದೆ. ಅಲ್ಲದೇ ಪೊಲೀಸ್ ಆಯುಕ್ತರೊಂದಿಗೆ ಪ್ರಕರಣದ ಕುರಿತು ಚರ್ಚೆ ನಡೆಸಿದೆ ಎನ್ನಲಾಗುತ್ತಿದೆ.
    ಕಿಮ್ಸ್‌ನಲ್ಲೂ ಗಿರೀಶ ಕಿರಿಕ್: ಅಂಜಲಿ ಹಂತಕ ಗಿರೀಶ ಸಾವಂತನನ್ನು ಕಿಮ್ಸ್‌ನಲ್ಲಿ ಐದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿಕಿತ್ಸೆ ನೀಡಲು ಹೋಗಿದ್ದ ಶುಶ್ರೂಷಕಿ ಹಾಗೂ ಸ್ವಚ್ಛತಾ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದ. ಅಲ್ಲದೇ ಅವರಿಗೆ ಧಮ್ಕಿ ಕೂಡ ಹಾಕಿದ್ದ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆಗಾಗಿ 8 ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts