More

    ಕನ್ನಡ ಉಳಿಸಲು ಎಲ್ಲರ ಸಹಕಾರ ಅಗತ್ಯ : ಕೆಜಿಫ್ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ನರಸಿಂಹೇಗೌಡ ನಾರಣಾಪುರ ಅಭಿಪ್ರಾಯ

    ಕೆಜಿಎಫ್ : ಕನ್ನಡದ ಅಭಿವೃದ್ಧಿಗೆ ಜನರ ಆಶ್ರಯ, ಸಹಕಾರ ಅಗತ್ಯ. ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿವಿಧ ಅಕಾಡೆಮಿ, ಪ್ರಾಧಿಕಾರಗಳ ಮೂಲಕ ಕನ್ನಡ ಕಟ್ಟುವ ಕೆಲಸಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಸಮ್ಮೇಳನಾಧ್ಯಕ್ಷ ಡಾ. ನರಸಿಂಹೇಗೌಡ ನಾರಣಾಪುರ ಆಗ್ರಹಿಸಿದರು.

    ನಗರದ ಶ್ರೀ ಮಹಾವೀರ್ ಜೈನ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಹಮ್ಮಿಕೊಂಡಿದ್ದ ದ್ವಿತೀಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ, ಉಳಿಸಿ ಬೆಳೆಸಲು ಪ್ರಜೆಗಳ ಆಶ್ರಯ ಅಗತ್ಯ, ಇಲ್ಲಿಯ ಜನರು ಸಾಹಿತ್ಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಕೈ ಜೋಡಿಸಬೇಕು, ಆಗ ಕೆಜಿಎಫ್ ಇಡೀ ಜಿಲ್ಲೆಗೆ ಮಾದರಿಯಾಗುತ್ತದೆ ಎಂದರು.

    ಕೆಜಿಎಫ್ ಒಂದು ಕಾಲದಲ್ಲಿ ಅರಿವಿನ ಕೊರತೆಯಿಂದಲೋ, ಭಾಷಾಭಿಮಾನದಿಂದಲೋ ತಮಿಳುಮಯವಾಗಿತ್ತು. ಗೋಕಾಕ್ ಚಳವಳಿ ನಂತರ ಪರಿಸ್ಥಿತಿ ಬದಲಾಗಿದೆ. ನಾಮಫಲಕಗಳಲ್ಲಿ ಕನ್ನಡ ಕಾಣಿಸಿಕೊಳ್ಳುತ್ತಿದೆ. ಇಲ್ಲಿ ನೆಲೆಸಿರುವ ಪರಭಾಷಿಗರು ಕನ್ನಡಿಗರೊಂದಿಗೆ ಬೆರೆಯುವ ಮೂಲಕ ಜೀವನ ಪದ್ಧತಿ ಸುಧಾರಿಸಿಕೊಳ್ಳುತ್ತಿದ್ದಾರೆ. ಗಡಿ ಪ್ರದೇಶಗಳಲ್ಲಿ ಕನ್ನಡ ಭಾಷೆ ಬೆಳೆಸಲು ಸರ್ಕಾರ ಹೆಚ್ಚಿನ ಅನುದಾನದ ಜತೆಗೆ ಕನ್ನಡಪರ ಕೆಲಸ ಮಾಡುವ ಸಂಘಟನೆಗಳಿಗೆ ಉತ್ತೇಜನದಾಯಕ ಕಾರ್ಯಕ್ರಮ ನಡೆಸಲು ಪ್ರೋತ್ಸಾಹಿಸಬೇಕು ಎಂದರು.

    ಕೆಜಿಎಫ್ ವಾತಾವರಣ ಸಂಪೂರ್ಣ ಕನ್ನಡಮಯವಾಗದಿದ್ದರೂ ಧೈರ್ಯವಾಗಿ ಕನ್ನಡ ಕಾರ್ಯಕ್ರಮ ನಡೆಸುವಂತಾಗಿರುವುದು ಸಂತಸವನ್ನುಂಟುಮಾಡಿದೆ. ಕೆಜಿಎಫ್ ತಾಲೂಕು ಕೇಂದ್ರವಾಗಿದ್ದು, ಉತ್ತಮ ಆಡಳಿತ ವ್ಯವಸ್ಥೆಗೆ ಬೇಕಾದ ಎಲ್ಲ ಸೌಲಭ್ಯ ಒದಗಿಸುವ ಮೂಲಕ ಕನ್ನಡದಲ್ಲಿ ಆಡಳಿತ ಸುಗಮವಾಗಿ ನಡೆಸುವುದಕ್ಕೆ ಪ್ರೋತ್ಸಾಹಿಸಬೇಕು ಎಂದು ಕೋರಿದರು.

    ಕನ್ನಡ ಶ್ರೀಮಂತ ಭಾಷೆಯಾಗಿದ್ದು, ಮನೆ ಮನೆಗೆ ತಲುಪಿಸುವ ಕೆಲಸವನ್ನು ಕನ್ನಡ ಅಭಿಮಾನಿಗಳು ಮಾಡಬೇಕು. ಹೆಣ್ಣು ಮಕ್ಕಳಿಗೆ ಎಲ್ಲ ಕ್ಷೇತ್ರಗಳಲ್ಲೂ ವಿಫುಲ ಅವಕಾಶಗಳಿವೆ. ಹೆಣ್ಣು ಮಕ್ಕಳು ವಿದ್ಯಾವಂತರಾಗಿ ಮಕ್ಕಳಲ್ಲಿ ಕನ್ನಡ ಭಾಷೆಯ ಶ್ರೀಮಂತಿಕೆ ಉಳಿಸಿ ಬೆಳೆಸುವ ಕಾರ‌್ಯವನ್ನು ಮಾಡಲು ಪ್ರೇರಣೆಯಾಗಬೇಕು ಎಂದರು.

    1 ಕೋಟಿ ರೂ. ವೆಚ್ಚದಲ್ಲಿ ಕನ್ನಡ ಭವನ : ನಗರದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಕನ್ನಡ ಭವನ ನಿರ್ಮಾಣ, ಸ್ಥಳೀಯರಿಗೆ ಉದ್ಯೋಗಾವಕಾಶ ಸೇರಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಬದ್ಧ. ಕೆಜಿಎಫ್ ತಾಲೂಕು ಕೇಂದ್ರವಾಗಿದ್ದು, ಮೂಲ ಸೌಲಭ್ಯಗಳ ಮೂಲಕ ಮಾದರಿ ತಾಲೂಕು ಮಾಡಲು ಪ್ರಯತ್ನಿಸಲಾಗುವುದು. 1 ಕೋಟಿ ರೂ. ವೆಚ್ಚದಲ್ಲಿ ಕೆಜಿಎ್ನಲ್ಲಿ ಕನ್ನಡ ಭವನ ನಿರ್ಮಿಸಿ ಕನ್ನಡದ ಎಲ್ಲ ಕಾರ್ಯಕ್ರಮ ಅಲ್ಲೇ ನಡೆಯುವಂತೆ ವ್ಯವಸ್ಥೆ ಒದಗಿಸಲಾಗುವುದು ಎಂದು ಶಾಸಕಿ ಎಂ. ರೂಪಕಲಾ ಭರವಸೆ ನೀಡಿದರು.

    ಸ್ಥಳೀಯರಿಗೆ ಉದ್ಯೋಗಕ್ಕೆ ಆದ್ಯತೆ : ನಗರದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಆಟದ ಮೈದಾನ ನಿರ್ಮಾಣವಾಗಲಿದ್ದು, ಹೋಂಡಾ ಕಂಪನಿ ಸಹಯೋಗದಲ್ಲಿ ನಿರ್ಮಾಣವಾಗಲಿರುವ ಕ್ರೀಡಾಂಗಣದಲ್ಲಿ ಗ್ರಂಥಾಲಯ ಸ್ಥಾಪಿಸುವುದಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. ಬಿಜಿಎಂಎಲ್ ಮುಚ್ಚಿದ ನಂತರ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಸಾವಿರಾರು ಜನರು ಕೆಲಸಕ್ಕಾಗಿ ಬೆಂಗಳೂರು ಇನ್ನಿತರೆಡೆ ವಲಸೆ ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕೆಜಿಎಫ್‌ನಲ್ಲೇ ಕಾರ್ಖಾನೆ ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ರೂಪಕಲಾ ನುಡಿದರು.

    ಅವಕಾಶ ನೀಡುವುದಿಲ್ಲ: ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಇಎಂಎಲ್ ಕಾರ್ಖಾನೆಗೆ ರಾಜ್ಯ ಸರ್ಕಾರ ನೀಡಿದ್ದ 1973 ಎಕರೆ ಜಾಗದಲ್ಲಿ ಕಾರ್ಖಾನೆ ಸ್ಥಾಪನೆಗೆ 1000 ಎಕರೆ ಬಳಸಿಕೊಂಡಿದ್ದು, ಉಳಿದ 973 ಎಕರೆಯನ್ನು ಸರ್ಕಾರಕ್ಕೆ ವಾಪಸ್ ನೀಡಲಾಗಿದೆ. ಈ ಜಾಗವನ್ನು ಕೈಗಾರಿಕೆಗಳ ಸ್ಥಾಪನೆಗೆ ಬಳಸಿಕೊಳ್ಳಲು ಈಗಾಗಲೆ ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಅನೇಕ ಬಾರಿ ಮಾತುಕತೆ ನಡೆಸಲಾಗಿದೆ. ಬೆಮೆಲ್ ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ. ಈಗಾಗಲೆ ರಾಷ್ಟ್ರಪತಿಗಳಿಗೂ ಪತ್ರ ಬರೆದು ಕಾರ್ಖಾನೆ ಉಳಿಸುವಂತೆ ಕೋರಲಾಗಿದೆ. ಕೇಂದ್ರ ಸರ್ಕಾರ ಒಂದು ವೇಳೆ ಖಾಸಗೀಕರಣಕ್ಕೆ ಮುಂದಾದಲ್ಲಿ ದೊಡ್ಡ ಹೋರಾಟ ಹಮ್ಮಿಕೊಳ್ಳುವುದಾಗಿ ರೂಪಕಲಾ ಎಚ್ಚರಿಕೆ ನೀಡಿದರು.

    ಕನ್ನಡ ಕಟ್ಟಿದ ಕಲಿಗಳಿಗೆ ಸನ್ಮಾನ : 60 ವರ್ಷಗಳಿಂದ ಕನ್ನಡ ಕೆಲಸ ಮಾಡಿಕೊಂಡು ಬರುತ್ತಿದ್ದ ಕನ್ನಡ ಕಲಿಗಳಾದ ಗುರುಶಾಂತಪ್ಪ, ವಿ.ಎಸ್.ಪ್ರಕಾಶ್, ರಾಜಗೋಪಾಲಗೌಡ ಹಾಗೂ ಇತರರನ್ನು ಸನ್ಮಾನಿಸಲಾಯಿತು. 10ನೇ ತರಗತಿಯಲ್ಲಿ 625/625 ಅಂಕ ಪಡೆದಿರುವ ತಾಲೂಕಿನ ದೀರಜ್‌ರೆಡ್ಡಿಯನ್ನು ಸನ್ಮಾನಿಸಲಾಯಿತು.

    ಪ್ರಮುಖರ ಉಪಸ್ಥಿತಿ : ತಹಸೀಲ್ದಾರ್ ಸುಜಾತಾ, ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ, ಉಪಾಧ್ಯಕ್ಷ ದೇವಿಗಣೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಅಶ್ವಿನಿ, ಕನ್ನಡ ಮಿತ್ರ ಆರ್.ಎಸ್.ಪಾಟೀಲ್, ಬೆಮೆಲ್ ಕಾರ‌್ಯನಿರ್ವಾಹಕ ನಿರ್ದೇಶಕ ಶಂಕರ್, ಕಸಪಾ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್, ಕೋಗಿಲಹಳ್ಳಿ ಕೃಷ್ಣಪ್ಪ, ಕಸಪಾ ತಾಲೂಕು ಅಧ್ಯಕ್ಷ ದೇಶಪಾಂಡೆ, ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ವೆಂಕಟರಮಣಪ್ಪ, ಗೌ.ಅಧ್ಯಕ್ಷ ವೀರವೆಂಕಟಪ್ಪ, ಪ್ರಮುಖರಾದ ಎಲ್.ನರಸಿಂಹಮೂರ್ತಿ, ಮಂಜುನಾಥ್ ಹೆಗ್ಡೆ, ರವಿಪ್ರಕಾಶ್, ಚಂದ್ರಶೇಖರ್, ಕಸಪಾ ತಾಲೂಕು ಅಧ್ಯಕ್ಷ ದೇಶಪಾಂಡೆ, ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ವೆಂಕಟರಮಣಪ್ಪ, ಗೌ.ಅಧ್ಯಕ್ಷ ವೀರವೆಂಕಟಪ್ಪ, ಪ್ರಮುಖರಾದ ಎಲ್.ನರಸಿಂಹಮೂರ್ತಿ, ಮಂಜುನಾಥ್ ಹೆಗ್ಡೆ, ರವಿಪ್ರಕಾಶ್, ಚಂದ್ರಶೇಖರ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts