More

    ಕೆಜಿಎಫ್ ದೇವಾಲಯದಲ್ಲಿ ಹಣ ದುರುಪಯೋಗ

    ಕೋಲಾರ: ಕೆಜಿಎಫ್ ​ ನಗರದ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸುಮಾರು 15 ಲಕ್ಷ ರೂ.ಕ್ಕಿಂತ ಹೆಚ್ಚು ಹಣ ದುರುಪಯೋಗವಾಗಿರುವುದು ಬೆಳಕಿಗೆ ಬಂದಿದೆ.

    ದೇವಾಲಯದಲ್ಲಿ ನಡೆಯುವ ಪೂಜೆ ಹಾಗೂ ಇತರ ಕೆಲಸಗಳಿಗೆ ತಗಲುವ ಖರ್ಚು ವೆಚ್ಚದ ಬಗ್ಗೆ ಸ್ಥಳಿಯ ಲೆಕ್ಕ ಪರಿಶೋಧನಾ ವರ್ತುಲ ಇಲಾಖೆ ಹಿರಿಯ ಉಪನಿರ್ದೇಶಕರ ಕಚೇರಿಯಲ್ಲಿ ಲೆಕ್ಕ ಪರಿಶೋಧನಾ ವರದಿ ತಯಾರಿಸುವಾಗ 15,53,840 ರೂ. ದುರುಪಯೋಗವಾಗಿರುವುದು ಸಾಬೀತಾಗಿದೆ.
    2015-16ನೇ ಸಾಲಿನಿಂದ 2019-20ರತನಕ ದೇವಾಲಯದ ನಿರ್ವಹಣೆ, ಪೂಜೆಗಳಿಗೆ ತಗಲುವ ವೆಚ್ಚದ ಮೊತ್ತವನ್ನು ಪೇಷ್ಕಾರ್​ ಅನ್ನವಯಲ್​ ತಮ್ಮ ಸ್ವಂತ ಹೆಸರಿಗೆ ಕಾನೂನು ಬಾಹಿರವಾಗಿ ಡ್ರಾ ಮಾಡಿಕೊಂಡಿದ್ದಾರೆ. ಸ್ಥಳಿಯ ಲೆಕ್ಕ ಪರಿಶೋಧನಾ ವರ್ತುಲ ಇಲಾಖೆಯ ಉಪನಿರ್ದೇಶಕರು ಲೆಕ್ಕ ಪರಿಶೋಧನಾ ವರದಿಯನ್ನು ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳಿಗೆ ಸಲ್ಲಿಸಿದ್ದರು. ಇದನ್ನು ಪರಿಶೀಲನೆ ನಡೆಸಿರುವ ಇಲಾಖಾಧಿಕಾರಿಗಳು, ಪೇಷ್ಕಾರ್​ ವಿರುದ್ಧ ಕ್ರಮಕೈಗೊಳ್ಳಲು ರಾಜ್ಯ ಲೆಕ್ಕ ಪರಿಶೋಧನಾ ಮತ್ತು ಲೆಕ್ಕ ಪತ್ರ ಇಲಾಖೆ, ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.
    ಐತಿಹಾಸಿಕ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ವರ್ಷಕೊಮ್ಮೆ ಬ್ರಹ್ಮರಥೋತ್ಸವ, ದೀಪೋತ್ಸವ, ಭಜನೆ, ಹರಿಕಥೆ, ದೀಪಾಲಂಕಾರ, ಪುಷ್ಕರಣಿ ಸ್ವಚ್ಛತೆ, ಹುಂಡಿ ಎಣಿಕೆ, ಸಣ್ಣಪುಟ್ಟ ರಿಪೇರಿ, ಮೋಟರ್​ ದುರಸ್ತಿಗೆ, ವೇತನ ಆಯವ್ಯಯಕ್ಕೆ ಲಕ್ಷ ಲಕ್ಷ ರೂ. ವೆಚ್ಚ ಮಾಡಿರುವುದಾಗಿ ತೋರಿಸಿದ್ದಾರೆ. ಆದರೆ ದೇವಾಲಯದಲ್ಲಿ ಬ್ರಹ್ಮರಥೋತ್ಸವದ ದಿನ ನಗರದಲ್ಲಿ ವಿವಿಧ ಉತ್ಸವದಾರರು ವೆಚ್ಚಗಳನ್ನು ಹಾಕಿಕೊಂಡು ಪೂಜೆ ನೆರವೇರಿಸುತ್ತಾರೆ.
    ದೇವಸ್ಥಾನದ ಯಾವುದೇ ಖರ್ಚು ವೆಚ್ಚಗಳನ್ನು ಯಾವುದೇ ನೌಕರನ ಹೆಸರಿನಲ್ಲಿ ಕಾರ್ಯನಿರ್ವಾಹಣಾಧಿಕಾರಿ ಹೆಸರಿನಲ್ಲಿ ಆಗಲಿ ಅಥವಾ ಸ್ವಂತ ಹೆಸರಿಗೆ ಆಗಲೀ ಬ್ಯಾಂಕ್​ ಖಾತೆಯಿಂದ ಹಣ ಸೆಳೆದು ಖರ್ಚು ಮಾಡಲು ಅವಕಾಶ ಇರುವುದಿಲ್ಲ ಎಂದು ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
    ಸಾದಿಲ್ವಾರು ವೆಚ್ಚಗಳ ನಿಯಮ 42ರನ್ವಯ ಯಾವುದೇ ಸರಕು ಮತ್ತು ಸಾಮಗ್ರಿಗಳನ್ನು ಖರೀದಿ ಮಾಡಿ, ಆವಶ್ಯಕತೆಗೆ ಅನುಗುಣವಾಗಿ ಪಡೆದುಕೊಳ್ಳುವ ಸೇವೆಗಳಿಗೆ, ನೇರವಾಗಿ ಸೇವೆ ಒದಗಿಸಿ ಸಂಸ್ಥೆಗಳಿಗೆ ಪಾವತಿ ಮಾಡಬೇಕು. ಕರ್ನಾಟಕ ಸಾರ್ವಜನಿಕರ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳಲ್ಲಿನ ಆರ್ಥಿಕ ಮಿತಿಯನ್ವಯ ನಿಯಮಾನುಸಾರ ಸ್ಪರ್ಧಾತ್ಮಕ ದರಗಳಲ್ಲಿ ಅರ್ಹಸಂಸ್ಥೆಗಳಿಂದ ಖರೀದಿಸಬೇಕು. ಮುಕ್ತ ಮಾರುಕಟ್ಟೆಯಲ್ಲಿ ಸರಕು, ಸಾಮಗ್ರಿಗಳ ಖರೀದಿ, ಸೇವೆಯನ್ನು ಪಡೆದುಕೊಂಡು ದೇವಾಲಯದ ಖಾತೆಗೆ ನಷ್ಟ ಉಂಟು ಮಾಡಲು ಅವಕಾಶವಿರುವುದಿಲ್ಲ ಎಂದು ವಿವರಿಸಿದ್ದಾರೆ.
    ಕ್ರಮಕ್ಕೆ ಸೂಚನೆ
    ನಗರದ ಪ್ರಸನ್ನ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯದ ಪೇಷ್ಕಾರ್​ ಆಗಿ ಅನ್ನವಯಲ್​ ಸುಮಾರು 16 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಹಣ ದುರುಪಯೋಗಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಮುಜರಾಯಿ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಕೆಜಿಎ್​ ತಹಶೀಲ್ದಾರ್​ ಹಾಗೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೂ ಸೂಚಿಸಿದ್ದಾರೆ. ಆದರೆ ಯಾವುದೇ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿಲ್ಲ.
    ಕ್ರಮಕ್ಕೆ ಮುಂದಾಗದ ಅಧಿಕಾರಿಗಳು
    ಪೇಷ್ಕಾರ್​ ಅನ್ನವಯಲ್​ 2015-2016ನೇ ಸಾಲಿನಿಂದ ತಮ್ಮ ಹೆಸರಿಗೆ 97,834, 2016-2017ರಲ್ಲಿ 1,22,350, 2017-2018ರಲ್ಲಿ 11,5,600, 2018-2019ರಲ್ಲಿ 77,636 ಹಾಗೂ 2019-20ರಲ್ಲಿ 18,000 ರೂ. ಡ್ರಾ ಮಾಡಿಕೊಂಡಿದ್ದು ಒಟ್ಟು 15,53,841 ರೂ. ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಲೆಕ್ಕ ಪರಿಶೋಧನಾ ಅಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಅನ್ನವೆಯಲ್​ ಆರೋಪಗಳನ್ನು ಎದುರಿಸುತ್ತಿದ್ದರೂ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಜತೆಗೆ ಇದೇ ಸ್ಥಳದಲ್ಲಿ ಪೇಷ್ಕಾರ್​ ಆಗಿ ಮುಂದುವರಿಸಿರುವುದು ದೂರುದಾರರ ಹಾಗೂ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts