More

    ಮೀನುಗಾರರಿಗೆ ಸೀಮೆಎಣ್ಣೆ ಪ್ರಮಾಣ ಹೆಚ್ಚಳ ಆಹಾರ ಸಚಿವ ಕೆ.ಗೋಪಾಲಯ್ಯ ಭರವಸೆ

    ಉಡುಪಿ: ನಾಡದೋಣಿ ಮೀನುಗಾರರಿಗೆ ಪ್ರಸ್ತುತ 210ರಿಂದ 230 ಲೀಟರ್ ಸೀಮೆಎಣ್ಣೆ ನೀಡಲಾಗುತ್ತಿದ್ದು, ಕನಿಷ್ಠ 400 ಲೀಟರ್ ವಿತರಿಸುವಂತೆ ಮೀನುಗಾರರಿಂದ ಬೇಡಿಕೆ ಇದೆ. ಮುಖ್ಯಮಂತ್ರಿಯವರ ಜತೆ ಸಮಾಲೋಚನೆ ನಡೆಸಿ ಸೀಮೆಎಣ್ಣೆ ವಿತರಣೆ ಹೆಚ್ಚಳ ಮಾಡಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಗೋಪಾಲಯ್ಯ ಹೇಳಿದರು. ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು, ಮೀನುಗಾರರ ಸಂಕಷ್ಟಗಳಿಗೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ ಎಂದರು.

    ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ಗಳಿಗೆ ಕಲಬೆರಕೆ ಮಾಡುವ ವ್ಯವಸ್ಥಿತ ಜಾಲ ಸಕ್ರಿಯವಾಗಿದ್ದು, ಜಿಲ್ಲೆಯಲ್ಲಿ ಇಂತಹ ಘಟನೆಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಕಲಬೆರಕೆ ತಪಾಸಣೆ ನಡೆಸಲು ಪ್ರತ್ಯೇಕ ಲ್ಯಾಬ್ ಮತ್ತು ಕಿಟ್‌ನ ಅಗತ್ಯದ ಬಗ್ಗೆ ಮನವಿ ಮಾಡಿದರು. ಇಲಾಖೆಗೆ ಅಗತ್ಯವಿರುವ ಲ್ಯಾಬ್ ಮತ್ತು ಕಿಟ್ ಒದಗಿಸುವ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

    25 ನಿರೀಕ್ಷಕ ಹುದ್ದೆ ಮಂಜೂರು: ಉಡುಪಿಯಲ್ಲಿ 25 ಆಹಾರ ನಿರೀಕ್ಷಕರ ಹುದ್ದೆ ಮಂಜೂರಾಗಿದ್ದು, 7 ಹುದ್ದೆ ಭರ್ತಿ ಮಾಡಲಾಗಿದ್ದು, 18 ಖಾಲಿ ಇದೆ. 6 ಜನ ಆಹಾರ ಶಿರಸ್ತೇದಾರರನ್ನು ಕಂದಾಯ ಇಲಾಖೆಯ ವತಿಯಿಂದ ನೇಮಿಸಲಾಗಿದೆ ಎಂದು ಗೋಪಲಯ್ಯ ತಿಳಿಸಿದರು. ಜಿಲ್ಲೆಯ ಎಲ್ಲ ಅಂಗಡಿ ಮುಂಗಟ್ಟುಗಳಲ್ಲಿರುವ ತೂಕ, ಮಾಪನ ಸಾಧನಗಳು ಹಾಗೂ ಆಟೋರಿಕ್ಷಾ ಮೀಟರ್‌ಗಳನ್ನು ತಪಾಸಣೆ ನಡೆಸಿ ಉಲ್ಲಂಘನೆ ನಡೆಸಿದ್ದಲ್ಲಿ ದಂಡ ವಿಧಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
    ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿಲ್ಲಾಧಿಕಾರಿ ಜಿ ಜಗದೀಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಡಾ.ಮಂಜುನಾಥ್, ಮಾಪನ ಶಾಸ್ತ್ರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts