More

    ಸರ್ಕಾರಿ ನೌಕರರ ಸಂಬಳ ಕಡಿತಕ್ಕೆ ಸುಗ್ರೀವಾಜ್ಞೆ, ಹೈಕೋರ್ಟ್​ ತಡೆ ಆದೇಶಕ್ಕೆ ಪ್ರತಿಯಾಗಿ ಕಾನೂನೇ ಜಾರಿಯಾಯ್ತು

    ಬೆಂಗಳೂರು: ರಾಜ್ಯದಲ್ಲಿ ಕರೊನಾ ಸಂಕಷ್ಟದಿಂದ ಉಂಟಾಗಿರುವ ಆರ್ಥಿಕ ದುಸ್ಥಿತಿಯನ್ನು ಸರಿದೂಗಿಸಲು ರಾಜ್ಯ ಸರ್ಕಾರ ಸರ್ಕಾರಿ ನೌಕರರ ಒಂದು ಅಥವಾ ಎರಡು ದಿನಗಳ ವೇತನ ನೀಡುವಂತೆ ಆಯಾ ಇಲಾಖೆಗಳ ಮೂಲಕ ಉದ್ಯೋಗಿಗಳಿಗೆ ತಿಳಿಸಲಾಗಿತ್ತು.
    ಪೊಲೀಸ್​ ಇಲಾಖೆಯಲ್ಲಿ ಇದಕ್ಕೆ ತೀವ್ರ ವಿರೋಧವೂ ವ್ಯಕ್ತವಾಯ್ತು. ಕೊನೆಗೆ ಸರ್ಕಾರವೇ ಸಂಬಳ ಕಡಿತ ಮಾಡಲಾಗುತ್ತದೆ ಎಂದು ಆದೇಶವನ್ನು ಹೊರಡಿಸಬೇಕಾಯ್ತು. ಇನ್ನುಳಿದ ಇಲಾಖೆಗಳ ನೌಕರರು ಸರ್ಕಾರದ ಪ್ರಸ್ತಾಪಕ್ಕೆ ಒಪ್ಪಿ ಸಂಬಳ ಕಡಿತಕ್ಕೆ ಸಮ್ಮತಿ ಸೂಚಿಸಿದ್ದಾರೆ.

    ಒಂದೆರಡು ದಿನಗಳ ಸಂಬಳವಾದರೆ ಓಕೆ. ಆದರೆ, ಒಂದಿಡೀ ತಿಂಗಳ ಸಂಬಳವನ್ನೇ ನೀಡಿ ಎಂದರೆ ಹೇಗಾಗಿರಬೇಡ? ಸರ್ಕಾರಿ ನೌಕರರು ಸಹಜವಾಗಿಯೇ ಸಿಡಿದೇಳುತ್ತಾರೇ ಅಲ್ಲವೇ? ಕೇರಳದಲ್ಲಿ ಸದ್ಯ ಆಗಿರೋದು ಕೂಡ ಇದೇ.

    ಸರ್ಕಾರಿ ನೌಕರರ ಒಂದು ತಿಂಗಳ ಸಂಬಳವನ್ನು ಐದು ಕಂತುಗಳ ಮೂಲಕ ಕಡಿತಗೊಳಿಸಲಾಗುವುದು ಎಂದು ಕೇರಳ ಸರ್ಕಾರ ತಿಳಿಸಿತ್ತು. ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗಲೂ ಸರ್ಕಾರ ಒಂದು ತಿಂಗಳ ಸಂಬಳ ಪಡೆದಿತ್ತು. ಮತ್ತೀಗ ಒಂದಿಡೀ ತಿಂಗಳ ಸಂಬಳ ನೀಡಬೇಕೆಂದರೆ ಆಗೋಲ್ಲ ಎಂದು ಸರ್ಕಾರಿ ಉದ್ಯೋಗಿಗಳ ವಿವಿಧ ಸಂಘಟನೆಗಳು ಹೈಕೋರ್ಟ್​ ಮೆಟ್ಟಿಲೇರಿದ್ದವು.

    ಹೈಕೋರ್ಟ್​ ಕೂಡ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿ ಸಂಬಳ ಕಡಿತಕ್ಕೆ ಬುಧವಾರವಷ್ಟೇ ತಡೆ ನೀಡಿತ್ತು. ನೌಕರರು ನಿಟ್ಟುಸಿರುವ ಬಿಡುವ ಮುನ್ನವೇ, ಸರ್ಕಾರ ತನ್ನ ಹಠಕ್ಕೆ ಅಂಟಿಕೊಂಡಿರುವುದು ಗೊತ್ತಾಗಿದೆ.

    ಸಂಬಳ ಕಡಿತಕ್ಕೆ ಹೈಕೋರ್ಟ್​ ಅವಕಾಶ ನೀಡದ ಕಾರಣ, ಸುಗ್ರೀವಾಜ್ಞೆ ಜಾರಿಗೊಳಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಗುರುವಾರ ಪ್ರಕಟಿಸಿದ್ದಾರೆ.

    ನೈಸರ್ಗಿಕ ವಿಕೋಪ ಅಥವಾ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಲ್ಲಿ ಎಲ್ಲಿಯೂ ಸರ್ಕಾರಿ ನೌಕರರ ಸಂಬಳ ಕಡಿತದ ಬಗ್ಗೆ ಉಲ್ಲೇಖವೇ ಇಲ್ಲದ ಕಾರಣ ತನ್ನ ಆದೇಶವನ್ನು ಜಾರಿಗೊಳಿಸಲು ಸರ್ಕಾರಕ್ಕೆ ಕಾನೂನಾತ್ಮಕ ಆಧಾರವೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ನಿರ್ಧರಿಸಿದೆ.

    ದುರಂತ ಹಾಗೂ ಸಾರ್ವಜನಿಕ ತುರ್ತು ವಿಶೇಷಾವಕಾಶ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ. ಇದರನ್ವಯ ಸರ್ಕಾರಿ ನೌಕರರ ಸಂಬಳವನ್ನು ತಡೆಯುವ, ಶೇ.25ರವರೆಗೆ ಕಡಿತಗೊಳಿಸುವ ಅಧಿಕಾರ ಸರ್ಕಾರಕ್ಕೆ ಇರಲಿದೆ ಎಂದು ಹಣಕಾಸು ಸಚಿವ ಐಸಾಕ್​ ಥಾಮಸ್​ ಹೇಳಿದ್ದಾರೆ.

    ಈ ಮೂಲಕ ಸಂಬಳ ಕಡಿತಗೊಳಿಸುವ ಕಾನೂನಾತ್ಮಕ ಅಧಿಕಾರ ಸರ್ಕಾರಕ್ಕೆ ದೊರಕಿದಂತಾಗಲಿದೆ. ಉಳಿದ ರಾಜ್ಯಗಳು ಕೂಡ ಇದೇ ಹಾದಿಯನ್ನು ಅನುಸರಿಸಿದರೆ ಅಚ್ಚರಿಯೇನಿಲ್ಲ!

    ಕರೊನೋತ್ತರ ವಿಶ್ವದಲ್ಲಿ ಭಾರತವಾಗಲಿದೆ ಆರ್ಥಿಕ ಸೂಪರ್​ ಪವರ್​, ಜಾಗತಿಕ ಅರ್ಥ ವ್ಯವಸ್ಥೆ ಮರುಚಿಂತನೆಗೆ ಭಾರತದ ಮುಂದಾಳತ್ವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts