More

    ಹಾಸ್ಟೆಲ್ ಸಿಬ್ಬಂದಿ ಕೆಲಸಕ್ಕಿದೆ ಹಿರಿಮೆ

    ಚಿಕ್ಕಮಗಳೂರು: ವಿದ್ಯಾರ್ಥಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಕಾರ್ಯಕ್ಕೆ ತನ್ನದೇ ಆದ ಗೌರವ, ಹಿರಿಮೆಯಿದೆ. ಹಾಸ್ಟೆಲ್‌ಗಳನ್ನು ಮನೆಯಂತೆ ಸ್ವಚ್ಛವಾಗಿ ನೋಡಿಕೊಳ್ಳುತ್ತಿರುವವರ ಕಾರ್ಯ ಶ್ಲಾಘನೀಯ ಎಂದು ಜಿಪಂ ಸಿಇಒ ಡಾ. ಗೋಪಾಲಕೃಷ್ಣ ತಿಳಿಸಿದರು.

    ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಪಂನಿಂದ ಆಶ್ರಯದಲ್ಲಿ ವಿದ್ಯಾರ್ಥಿ ನಿಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ರಾತ್ರಿ ಕಾವಲುಗಾರರು, ನಿಲಯ ಪಾಲಕರಿಗೆ ಆಯೋಜಿಸಿದ್ದ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ಹಾಸ್ಟೆಲ್‌ಗಳನ್ನು ಸಿಬ್ಬಂದಿ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೂ ಸಣ್ಣಪುಟ್ಟ ಲೋಪದೋಷಗಳು ಕಂಡುಬರುತ್ತವೆ. ಇಂಥ ಲೋಪಗಳನ್ನು ಸರಿಪಡಿಸಲು ಕಾರ್ಯಾಗಾರಗಳು ಸಹಕಾರಿ. ವಿದ್ಯಾರ್ಥಿಗಳಿಗೆ ಒಳ್ಳೆಯ ಸೌಲಭ್ಯ ಕಲ್ಪಿಸಬೇಕು. ಅವರು ಕಷ್ಟದ ಬದುಕಿನಿಂದ ಹೊರಗೆ ಬಂದು ತಮ್ಮ ಕಾಲ ಮೇಲೆ ನಿಲ್ಲಲಿ ಎಂದು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
    ಹಿಂದುಳಿದ ವರ್ಗಗಳ ಇಲಾಖೆ ಉಪನಿರ್ದೇಶಕ ಸೋಮಶೇಖರ್ ಮಾತನಾಡಿ, ಜಿಲ್ಲೆಯ ವಸತಿ ನಿಲಯಗಳಲ್ಲಿ ಅಡುಗೆ ಮಾಡುವಾಗ ಸುರಕ್ಷತೆ, ಗುಣಮಟ್ಟದ ಅಡುಗೆ ಹಾಗೂ ಪೌಷ್ಟಿಕಾಂಶದ ವಿವರ ನೀಡಲು ಮತ್ತು ಬೆಂಕಿ ಅವಘಡಗಳ ಬಗ್ಗೆ ಸಿಬ್ಬಂದಿ ಹೇಗೆ ಮುಂಜಾಗ್ರತೆ ವಹಿಸಬೇಕು ಎಂಬ ಉದ್ದೇಶದಿಂದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
    ಸಿಬ್ಬಂದಿಯಲ್ಲಿ ಮಾನಸಿಕ ಒತ್ತಡ ನಿವಾರಣೆ ಮಾಡಿ ಅವರಿಗೆ ಪ್ರೇರಣೆ ನೀಡಲು ಹಾಗೂ ವಸತಿ ನಿಲಯವನ್ನು ಸ್ವಚ್ಚವಾಗಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಬೇಕಾದ ಪೂರಕ ವ್ಯವಸ್ಥೆ ಮಾಡಿಕೊಳ್ಳಲು ಕಾರ್ಯಾಗಾರ ಸಹಕಾರಿ. ಇಲಾಖೆ ಸಿಬ್ಬಂದಿಗೆ ಇರುವ ಕುಂದು ಕೊರತೆಗಳಿಗೆ ಪರಿಹಾರ ಒದಗಿಸುವ ಕೆಲಸವನ್ನು ಕಾರ್ಯಾಗಾರದಲ್ಲಿ ಮಾಡಲಾಗುವುದು. ಆರೋಗ್ಯ ಇಲಾಖೆಯಿಂದ ಇಲ್ಲಿ ಭಾಗವಹಿಸಿರುವ ಎಲ್ಲರಿಗೂ ಬಿಪಿ, ಶುಗರ್ ಎಲ್ಲ ರೀತಿಯ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದರು.
    ಹಿಂದುಳಿದ ವರ್ಗಗಳ ಇಲಾಖೆಯಡಿ ಜಿಲ್ಲೆಯಲ್ಲಿ 100 ವಿದ್ಯಾರ್ಥಿ ನಿಲಯ, 7 ವಸತಿ ಶಾಲೆ ಹಾಗೂ ಒಂದು ಆಶ್ರಮ ಶಾಲೆ ಕಾರ್ಯನಿರ್ವಹಿಸುತ್ತಿವೆ. ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಿಗೆ ಶೈಕ್ಷಣಿಕ ಗುರಿ ಸಾಧಿಸಲು ಅಗತ್ಯವಾಗಿ ಬೇಕಾದ ಪೂರಕ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ ಎಂದು ಹೇಳಿದರು.
    ಆರೋಗ್ಯ ಇಲಾಖೆಯಿಂದ ಪೌಷ್ಟಿಕಾಂಶ, ಸ್ವಚ್ಛತೆ, ಸಾಂಕ್ರಾಮಿಕ ರೋಗಗಳ ಕುರಿತು ಸಮಗ್ರ ಮಾಹಿತಿ ನೀಡಲಾಗುತ್ತಿದೆ. ಮಾನಸಿಕ ತಜ್ಞ ವೈದ್ಯ ಡಾ. ವಿನಯ್ ಇವರಿಂದ ಮಾನಸಿಕ ಒತ್ತಡ ನಿವಾರಣೆಗೆ ಬೇಕಾದ ಎಲ್ಲ ರೀತಿಯ ತಂತ್ರಗಳನ್ನು ತಿಳಿಸಿಕೊಡಲಿದ್ದಾರೆ ಎಂದು ತಿಳಿಸಿದರು.
    ಕಾರ್ಯಾಗಾರದಲ್ಲಿ ಆರ್‌ಸಿಎಚ್ ಅಧಿಕಾರಿ ಡಾ. ಮಂಜುನಾಥ್, ಮಾನಸಿಕ ತಜ್ಞ ವೈದ್ಯ ಡಾ. ವಿನಯ್, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಪ್ರವೀಣ್, ಬಿಸಿಎಂ ಇಲಾಖೆ ತಾಲೂಕು ಅಧಿಕಾರಿ ಬಡಿಗೇರ, ಎಲ್ಲ ತಾಲೂನ ಅಡುಗೆ ಸಿಬ್ಬಂದಿ, ನಿಲಯ ಪಾಲಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts