More

    ಜಿಹಾದ್‌ಗೆ ಕಮ್ಯುನಿಸ್ಟ್ ಬೆಂಬಲ: ಕೇರಳ ಸರ್ಕಾರವನ್ನು ಕುಟುಕಿದ ಉತ್ತರಪ್ರದೇಶ ಸಿಎಂ ಯೋಗಿ

    ಕಾಸರಗೋಡು: ಕೇರಳವನ್ನು ಕಮ್ಯುನಿಸ್ಟರು ಜಿಹಾದ್ ಮತ್ತು ಉಗ್ರರ ತಾಣವಾಗಿಸಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟೀಕಿಸಿದರು.
    ಬಿಜೆಪಿ ಕೇರಳ ರಾಜ್ಯ ಸಮಿತಿ ಆಯೋಜಿಸಿರುವ ವಿಜಯ ಯಾತ್ರೆಗೆ ಭಾನುವಾರ ಚಾಲನೆ ನೀಡಿದ ಅವರು, ಎಡರಂಗ ಸರ್ಕಾರದ ನಿಲುವನ್ನು ಖಂಡಿಸಿದರು. ಭಾರತ ಉದ್ದಗಲ ಸಂಚರಿಸಿ ಸನಾತನ ಸಂಸ್ಕೃತಿಯನ್ನು ಎತ್ತಿಹಿಡಿದ ಆದಿ ಶಂಕರ ಮತ್ತು ಸಾಮಾಜಿಕ ಐಕ್ಯಮಂತ್ರ ಸಾರಿದ ನಾರಾಯಣ ಗುರುಗಳ ನೆಲ ಕೇರಳವನ್ನು ಉಗ್ರರ ಪಾಲಿಗೆ ಸುರಕ್ಷಿತ ತಾಣವಾಗಲು ಎಡರಂಗ ಸರ್ಕಾರ ಅನುವು ಮಾಡಿಕೊಟ್ಟಿದೆ ಎಂದರು.
    ಆರ್‌ಎಸ್‌ಎಸ್ ಮತ್ತು ರಾಷ್ಟ್ರ ವಿರೋಧಿ ಘೋಷಣೆ ಕೂಗುವವರನ್ನು ಇಲ್ಲಿನ ಸರ್ಕಾರ ಬೆಂಬಲಿಸಿದೆ. ಆರ್‌ಎಸ್‌ಎಸ್ ವಿರೋಧಿ ಕಾರ್ಯಸೂಚಿ ಕೈಗೆತ್ತಿಕೊಂಡಿದೆ. ಸರ್ಕಾರದ ಎಲ್ಲ ಪಿತೂರಿಗಳು ಭಯೋತ್ಪಾದಕರಿಗೆ ನೆರವಾಗುತ್ತಿದೆ. ಸರ್ಕಾರದ ಉಗ್ರ ಪರ ನೀತಿಯನ್ನು ಜನರು ಅರಿತುಕೊಳ್ಳಬೇಕು ಎಂದರು.

    ಎಡರಂಗ ಎಂದಿಗೂ ಅಪಾಯಕಾರಿ: ಲವ್ ಜಿಹಾದನ್ನು ಮರೆಮಾಚಿ ಉಗ್ರ ಸಂಘಟನೆಗಳಿಗೆ ನೆರವಾಗುತ್ತಿರುವ ಎಡರಂಗ ಯಾವತ್ತೂ ಅಪಾಯಕಾರಿ ಎಂದು ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟರು. ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲು ಇಲ್ಲಿಯವರೆಗೆ ಕೇರಳದ ಕಮ್ಯುನಿಸ್ಟ್ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಇನ್ನೊಂದೆಡೆ, ಶಬರಿಮಲೆ ಸಂಚಿನ ಮೂಲಕ ಹಿಂದೂಗಳನ್ನು ಹಿಂಸಿಸಿದ ಸರ್ಕಾರ ರಾಜ್ಯಾಡಳಿತ ನಡೆಸಿರುವುದು ದುರದೃಷ್ಟಕರ. ಸರ್ಕಾರ ಧಾರ್ಮಿಕ ಸಹಿಷ್ಣುತೆಯನ್ನು ನಾಶಪಡಿಸುತ್ತಿದೆ. ಚರ್ಚುಗಳನ್ನೂ ನಾಶ ಮಾಡುತ್ತಿದೆ. ಧರ್ಮದ ಹೆಸರಿನಲ್ಲಿ ಜನರ ಮನಸ್ಸಿನಲ್ಲಿ ಪ್ರತ್ಯೇಕತೆಯ ಬೀಜ ಬಿತ್ತುತ್ತಿದೆ. ಸುದೀರ್ಘ ಕಾಲ ಆಡಳಿತ ನಡೆಸಿದ ಎಡರಂಗ, ಕಾಂಗ್ರೆಸ್ ಪಕ್ಷಗಳು ಹಿಂದೂ ದಮನ ನೀತಿ ಮೂಲಕ ಜನರನ್ನು ವಂಚಿಸುತ್ತಿದೆ. ಪ್ರತಿಕೂಲ ಸನ್ನಿವೇಶದಲ್ಲೂ ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರ ಕಾರ್ಯನಿರ್ವಹಣೆ ಶ್ಲಾಘನೀಯ. ಬಿಜೆಪಿ ಕೇರಳದಲ್ಲಿ ಬಲಗೊಂಡರೆ ಜನಹಿತದ ಆಡಳಿತ ನೀಡಲಿದೆ ಎಂದರು.

    ಶಬರಿಮಲೆ ವಿವಾದ, ಜನದ್ರೋಹ: ಶತಮಾನಗಳ ನಂಬಿಕೆಯನ್ನು ಕೆದಕಿ ಶಬರಿಮಲೆಗೆ ಮಹಿಳಾ ಪ್ರವೇಶ ಅವಕಾಶ ನೀಡುವ ಮೂಲಕ ಕಮ್ಯುನಿಸ್ಟ್ ಪಕ್ಷ ಲಕ್ಷಾಂತರ ಜನರನ್ನು ವಂಚಿಸಿದೆ ಎಂಬ ಯೋಗಿ, ಪ್ರಧಾನಿ ಮೋದಿ ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ಸಾಕಾರಗೊಳಿಸುವ ಮೂಲಕ ಅದನ್ನು ರಾಷ್ಟ್ರ ಮಂದಿರವಾಗಿ ಪರಿವರ್ತಿಸುವ ಸಾಧನೆ ಮಾಡಿದ್ದಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಘೋಷಣೆಯ ಮೂಲಕ ಸರ್ವರ ಹಿತ ಕಾಯುವ ಯೋಜನೆಯಿಂದ ಬಿಜೆಪಿ ಖ್ಯಾತಿಗಳಿಸಿದೆ ಎಂದರು.

    ಕೇರಳದಲ್ಲಿ ಗರಿಷ್ಠ ಸೋಂಕು: ಇಂದು ದೇಶದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಕೋವಿಡ್ ಸೋಂಕು ಕೇರಳದಲ್ಲಿದೆ ಎಂಬುದನ್ನು ಭಾಷಣದಲ್ಲಿ ಉಲ್ಲೇಖಿಸಿದ ಯೋಗಿ ಆದಿತ್ಯನಾಥ್, ರಾಷ್ಟ್ರದ ಬಹುತೇಕ ಕಡೆಗಳಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ. ಉತ್ತರಪ್ರದೇಶದಲ್ಲಿ ಕೋವಿಡ್ ಎರಡು ಸಾವಿರಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿದೆ. ಕೇಂದ್ರದ ಮಾರ್ಗಸೂಚಿ ಅನುಸರಿಸಿದ್ದರಿಂದ ನಿಯಂತ್ರಣ ಸಾಧ್ಯವಾಗಿದೆ. ಕೇರಳ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು. ಕೇಂದ್ರದ ಯೋಜನೆಗಳನ್ನು ತನ್ನದೆಂದು ಬಿಂಬಿಸುವ ಕೇರಳ ಸಿಎಂ ಪಿಣರಾಯಿ ವಿಜಯನ್ ಜನಸಾಮಾನ್ಯರಿಗೆ ಮಂಕುಬೂದಿ ಎರಚಲು ಪ್ರಯತ್ನಿಸುತ್ತಿದ್ದಾರೆ. ಜನರಿಗೆ ಸತ್ಯದ ಅರಿವಾಗಬೇಕು ಎಂದರು.

    ಯಕ್ಷಗಾನ ಪುತ್ಥಳಿ ಉಡುಗೊರೆ: ಯೋಗಿ ಆದಿತ್ಯನಾಥ್ ಅವರಿಗೆ ಕಾಸರಗೋಡು ಹಿಂದೂ ಸಮಾಜೋತ್ಸವ ಸಮಿತಿ ಮುಖಂಡರು ಯಕ್ಷಗಾನ ಪುತ್ಥಳಿ, ಬಿಜೆಪಿ ನಾಯಕಿ ಶೋಭಾ ಸುರೇಂದ್ರನ್ ಆರನ್ಮುಳ ಕನ್ನಡಿಯನ್ನು ಉಡುಗೊರೆಯಾಗಿ ನೀಡಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ, ಪತ್ರಕರ್ತ ಸಂದೀಪ್ ಬರೆದ ಕಮ್ಯುನಿಸ್ಟ್ ವಂಚನೆ ನೂರು ವರ್ಷಗಳು ಎಂಬ ಕೃತಿಯನ್ನು ಯೋಗಿ ಬಿಡುಗಡೆಗೊಳಿಸಿದರು. ಯಾತ್ರೆ ಮಾ.7ರಂದು ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ.

    ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಯೋಗಿ ವಿಜಯ ಯಾತ್ರೆಗೆ ಚಾಲನೆ ನೀಡಿದರು.
    ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಒ.ರಾಜಗೋಪಾಲ್, ಬಿಡಿಜೆಎಸ್ ಅಧ್ಯಕ್ಷ ತುಷಾರ್ ವೆಳ್ಳಾಪಳ್ಳಿ, ಕೇಂದ್ರ ಸಚಿವ ವಿ.ಮುರಳೀಧರನ್, ಮುಖಂಡರಾದ ಪಿ.ಕೆ.ಕೃಷ್ಣದಾಸ್, ಸಿ.ಕೆ.ಪದ್ಮನಾಭನ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಾದ ಜೋರ್ಜ್ ಕುರ್ಯಾಕೋಸ್, ಪಿ.ಸುಧೀರ್, ಮುಖಂಡರಾದ ಸಿ.ಕೃಷ್ಣ ಕುಮಾರ್, ಎಂ.ಸಂಜೀವ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಪ್ರಮೀಳಾ ಸಿ.ನಾಯ್ಕ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಸದಾನಂದ ಮಾಸ್ತರ್, ಕೇರಳ ಕಾಂಗ್ರೆಸ್ ಮುಖಂಡ ಪಿ.ಸಿ.ಥಾಮಸ್, ಜಿ.ರಾಮನ್ ನಾಯರ್, ಪ್ರಮೀಳಾದೇವಿ, ಪ್ರಪುಲ್ಲನ್, ನಿವೇದಿತಾ, ಎನ್‌ಸಿಪಿ ಮುಖಂಡ ವಿಜೇಶ್, ಕುರುವಿಳ ಮ್ಯಾಥ್ಯು, ಕಾರ್ಕಳ ಶಾಸಕ ಸುನಿಲ್ ಕುಮಾರ್ ಮೊದಲಾದವರು ಮಾತನಾಡಿದರು.
    ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಸ್ವಾಗತಿಸಿದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಭಾಷಣ ಮಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ, ಯಾತ್ರೆ ಮುಖಂಡ ಕೆ.ಸುರೇಂದ್ರನ್, ಕೇರಳದಲ್ಲಿ ಕಳೆದ ಐದು ವರ್ಷಗಳ ಎಡಪಕ್ಷದ ದುರಾಡಳಿತ ಹಿಂದೆಂದೂ ಕಂಡಿರದ ಭ್ರಷ್ಟ, ಕೋಮುವಾದಿ ಆಡಳಿತದ ಮೂಲಕ ಓಟ್ ಬ್ಯಾಂಕ್ ರಾಜಕೀಯದಿಂದ ಜನರನ್ನು ಸಂಕಷ್ಟಕ್ಕೆ ತಳ್ಳಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts