More

    ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಿ

    ಕೆ.ಆರ್.ಪೇಟೆ: ವಾಹನಗಳಿಂದ ಹೊರಬರುವ ದಟ್ಟವಾದ ಹೊಗೆಯಿಂದ ಉಂಟಾಗುವ ವಾಯು ಹಾಗೂ ಶಬ್ದಮಾಲಿನ್ಯದಿಂದ ಮಾನವ ಸೇರಿದಂತೆ ಪಶು-ಪಕ್ಷಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ದಟ್ಟವಾದ ಹೊಗೆ ಬರದಂತೆ ಎಚ್ಚರ ವಹಿಸಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ನಾಗಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹೇಳಿದರು.

    ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆಯ ಅಂಗವಾಗಿ ಪಟ್ಟಣದ ನಂದಿ ವಾಯುಮಾಲಿನ್ಯ ತಪಾಸಣಾ ಕೇಂದ್ರ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋ, ನಾಗಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ಮಂಗಳವಾರ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ನಾವು ಉಸಿರಾಡುವ ಗಾಳಿ, ತಿನ್ನುವ ಆಹಾರ ಹಾಗೂ ಕುಡಿಯುವ ನೀರು ಸೇರಿದಂತೆ ಇಡೀ ವಾತಾವರಣವೇ ಕಲುಷಿತವಾಗುತ್ತಿದೆ. ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಲು ಇದು ಸಕಾಲವಾಗಿದ್ದು, ಪರಿಸರಕ್ಕೆ ಹಾನಿ ಮಾಡುವ ವಾಹನಗಳನ್ನು ರಿಪೇರಿ ಮಾಡಿಸಿ ಸುಸ್ಥಿತಿಯಲ್ಲಿಟ್ಟುಕೊಳ್ಳುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದರು.

    ವಾಹನಗಳಿಂದ ದಟ್ಟ ಹೊಗೆಯ ಮೂಲಕ ಹೊರಬರುವ ಕಾರ್ಬನ್ ಮೊನಾಕ್ಸೈಡ್, ಹೈಡ್ರೋಕಾರ್ಬನ್ ನೈಟ್ರೋಜನ್, ಸಲ್ಫರ್ ಡೈ ಆಕ್ಸೈಡ್ ಅನಿಲ ವಿಷಕಾರಿಯಾಗಿದ್ದು, ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ರಸ್ತೆಯ ಮೇಲೆ ಸಂಚರಿಸುವ ದ್ವಿಚಕ್ರ ವಾಹನಗಳು, ಕಾರು, ಬಸ್, ಲಾರಿ ಸೇರಿದಂತೆ ಇತರ ವಾಹನಗಳಿಂದ ಹೊರಬರುವ ದಟ್ಟವಾದ ಹೊಗೆಯನ್ನು ನಿಯಂತ್ರಣ ಮಾಡಲು ನಾಗರಿಕ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

    ಕೆ.ಆರ್.ಪೇಟೆ ಸರ್ಕಲ್ ಇನ್‌ಸ್ಪೆಕ್ಟರ್ ಸುಮಾರಾಣಿ, ನಾಗಮಂಗಲ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯ ಹಿರಿಯ ಸಂಚಾರ ನಿರೀಕ್ಷಕ ಸತೀಶ್, ಕಚೇರಿಯ ಅಧೀಕ್ಷಕ ಸತೀಶ್, ಕೆ.ಆರ್.ಪೇಟೆ ಅಗ್ನಿಶಾಮಕ ಠಾಣೆಯ ಅಧಿಕಾರಿ ಶಿವಣ್ಣ, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಕೆ.ಧನಂಜಯ, ವಲಯ ಅರಣ್ಯಾಧಿಕಾರಿ ಅನಿತಾ ಪ್ರವೀಣ್, ಬಸ್ ಡಿಪೋ ವ್ಯವಸ್ಥಾಪಕ ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts