More

    ಕೈ ಅಭ್ಯರ್ಥಿ ಲೂಟಿಗೆ ಬಂದಿದ್ದಾರೆ

    ಕೆ.ಆರ್.ಪೇಟೆ: ಕಾಂಗ್ರೆಸ್ ಅಭ್ಯರ್ಥಿ ನಾನು ಮಂಡ್ಯದವನು, ಎಚ್.ಡಿ.ಕುಮಾರಸ್ವಾಮಿ ಹೊರಗಿನವರು ಎಂದು ಹೇಳುತ್ತಿದ್ದಾರೆ. ಆದರೆ, ಅವರು ಇಲ್ಲಿಗೆ ಬಂದಿರುವುದು ಲೂಟಿ ಮಾಡಲು ಎಂದು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

    ಪಟ್ಟಣದ ಖಾಸಿಂಖಾನ್ ಸಮುದಾಯ ಭವನದ ಆವರಣದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿ, ವಿಶ್ವೇಶ್ವರಯ್ಯ ನಾಲೆ ಅಭಿವೃದ್ಧಿಗೆ ನಾನು ಮುಖ್ಯಮಂತ್ರಿಯಾಗಿದ್ದಾಗ 700 ಕೋಟಿ ರೂ. ಅನುದಾನ ನೀಡಿದ್ದೆ. ಆ ಕಾಮಗಾರಿಯನ್ನು ವೆಂಕಟರಮಣೇಗೌಡ (ಸ್ಟಾರ್ ಚಂದ್ರು)ಗೆ ನೀಡಿದ್ದೆ. ಇದೀಗ ಆ ಹಣವನ್ನು ಲೂಟಿ ಮಾಡಲು ಬಂದಿದ್ದಾರೆ ಎಂದು ಆರೋಪಿಸಿದರು.

    ಹೇಮಾವತಿ ಜಲಾಶಯದಿಂದ ಕೆ.ಆರ್.ಪೇಟೆ ಜನರಿಗೆ ಸಾಕಷ್ಟು ಸಹಾಯವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರ ಸ್ಥಿತಿ ಏನಾಗಿದೆ. ಕಬ್ಬು ಒಣಗಿ ನಿಂತಿದೆ, ಬೆಂಕಿ ಇಡುವ ಪರಿಸ್ಥಿತಿ ಬಂದಿದೆ. ರೈತರ ಬಗ್ಗೆ ಸಿಎಂಗೆ ಕನಿಷ್ಠ ಸೌಜನ್ಯ ಇಲ್ಲ. ಮಂಡ್ಯ ಜಿಲ್ಲೆಯಲ್ಲಿ ರೈತರು ಸಾಲಗಾರರಾಗಿದ್ದಾರೆ, ಬೆಂಕಿಗಾಹುತಿಯಾಗಿದ್ದಾರೆ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಸಾಂತ್ವನ ಹೇಳಲು ಸರ್ಕಾರ ಮುಂದಾಗಲಿಲ್ಲ. ದೇವೇಗೌಡರು ಸಾಂತ್ವನ ಹೇಳಿದರು ಎಂದು ಕುಟುಕಿದರು.

    ಕುಮಾರಸ್ವಾಮಿ ಸೋಲಿಸಲು ರಾಹುಲ್ ಗಾಂಧಿ ಕರೆದುಕೊಂಡು ಬಂದಿದ್ದಾರೆ. ಕೇಂದ್ರದಲ್ಲಿ 31 ಲಕ್ಷ ಉದ್ಯೋಗ ಖಾಲಿ ಇದೆ ಎಂದು ತಮಿಳುನಾಡಿನಲ್ಲಿ ಭಾಷಣ ಮಾಡಿದ್ದಾರೆ. ರಾಜ್ಯದಲ್ಲಿ ಎರಡು ಮುಕ್ಕಾಲು ಲಕ್ಷ ಹುದ್ದೆ ಖಾಲಿ ಇದೆ. ಮೊದಲು ಅದನ್ನು ಭರ್ತಿ ಮಾಡಿ. ಯುವನಿಧಿ ಘೋಷಣೆ ಮಾಡಿದರು. ಆದರೆ ಷರತ್ತು ಹಾಕಿ ಈ ವರ್ಷದಿಂದ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಎಷ್ಟು ಜನರಿಗೆ ಹಣ ಬಂದಿದೆ ಗೊತ್ತಿಲ್ಲ. ನಾನು ಹಾಗೂ ಯಡಿಯುರಪ್ಪ 56 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದೇವೆ ಎಂದು ಹೇಳಿದರು.

    25 ರೂ. ಇದ್ದ ಮದ್ಯದ ಬೆಲೆಯನ್ನು 250 ರೂ. ಮಾಡಿದ್ದಾರೆ. ಹಣ ಕೊಟ್ಟು ನಿಮ್ಮಿಂದ ಪಿಕ್‌ಪಾಕೆಟ್ ಮಾಡುತ್ತಿದ್ದಾರೆ. ಎರಡು ಸಾವಿರ ರೂ. ಕೊಟ್ಟು 40 ಸಾವಿರ ರೂ.ಸಾಲ ತೀರಿಸುವ ಉಡುಗೊರೆ ಕೊಟ್ಟಿದ್ದಾರೆ ಎಂದರು. ಕೆ.ಆರ್ ಬೇಟೆಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಯುತ್ತಿದೆ. ದಂಧೆಯಲ್ಲಿ ಸಿಲುಕಿ ರೈತ ಮಕ್ಕಳು ಕಷ್ಟ ಅನುಭಿವಿಸುತ್ತಿದ್ದಾರೆ. ಸರ್ಕಾರ ಈ ಬಗ್ಗ ಗಮನಹರಿಸುತ್ತಿಲ್ಲ ಎಂದು ದೂರಿದರು.

    ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿ, ರಕ್ಷಣೆ ಪರವಾಗಿದ್ದಾರೆ. ಒಂದು ದಿನವೂ ವಿಶ್ರಾಂತಿ ಪಡೆಯದೆ ದೇಶಕ್ಕಾಗಿ ಬದುಕು ಮುಡಿಪಾಗಿಟ್ಟ ವಿಶ್ವನಾಯಕ. ಮತ್ತೊಮ್ಮೆ ಮೋದಿ ಪ್ರಧಾನಿ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು. ಸಂವಿಧಾನ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿಗಳೇ ಸ್ಪಷ್ಟಪಡಿಸಿದ್ದಾರೆ. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್. ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್‌ಗೆ ದಲಿತರ ಮೇಲೆ ಗೌರವ, ಪ್ರೀತಿ ಬರುತ್ತದೆ ಎಂದು ಲೇವಡಿ ಮಾಡಿದರು.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಹಣಬಲ, ತೋಳ್ಬಲದಿಂದ ಚುನಾವಣೆ ಗೆಲ್ಲಬಹುದು ಎಂದು ಕಾಂಗ್ರೆಸ್‌ನವರು ತಿಳಿದುಕೊಂಡಿದ್ದಾರೆ. ಮಂಡ್ಯ ಜನ ಹಣಕ್ಕೆ ಬೆಲೆ ಕೊಡುವುದಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ದೂರಿದರು.

    ರೈತರ ಸಾಲಮನ್ನಾ ಮಾಡಿದ್ದು ಕುಮಾರಸ್ವಾಮಿ. ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡ ರೈತರಿಗೆ ನೆರವು ಕಲ್ಪಿಸಿದ್ದು ಯಡಿಯೂರಪ್ಪ. ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ದು ಯಡಿಯೂರಪ್ಪ. ಬರಗಾಲದ ಸಂದರ್ಭದಲ್ಲಿ ರೈತರಿಗೆ ಬರೆ ಎಳೆಯುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. 3 ಲಕ್ಷ ರೂ.ನೀಡಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಬೇಕಾದ ಸ್ಥಿತಿ ರೈತರಿಗೆ ಬಂದಿದೆ. ಒಂದು ಕೈಲಿ ಕೊಟ್ಟು, ಇನ್ನೊಂದು ಕೈಲಿ ಕಿತ್ತುಕೊಳ್ಳುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ದೂರಿದರು. ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಕೆ.ಸಿ.ನಾರಾಯಣಗೌಡ, ಶಾಸಕ ಎಚ್.ಟಿ.ಮಂಜು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts