More

    ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಸಚಿವ ಮಾಧುಸ್ವಾಮಿ ತರಾಟೆ ; ಹೆರಿಗೆ ಕೇಸ್​ಗಳು ಕಡಿಮೆಯಾಗಲು ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡುವುದೇ ಕಾರಣ

    ತುಮಕೂರು: ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಕಡಿಮೆಯಾಗಲು ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗೆ ಶಿಫಾರಸು ಮಾಡುತ್ತಿರುವುದೇ ಕಾರಣ. ಇದನ್ನು ನಾನು ಸಹಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಗುಡುಗಿದರು.

    ಜಿಪಂ ಸಭಾಂಗಣದಲ್ಲಿ ಶುಕ್ರವಾರ 1ನೇ ತ್ರೖೆಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗೆ ಹೆರಿಗೆ ಸೇವೆ ಲಭ್ಯವಾಗಬೇಕು, ಅಗತ್ಯವಿದ್ದರೆ ಮತ್ತೊಂದು ಉತ್ತಮ ವ್ಯವಸ್ಥೆಯ ಸರ್ಕಾರಿ ಆಸ್ಪತ್ರೆಗೆ ಶಿಫಾರಸು ಮಾಡಬೇಕು ಎಂದರು.

    ಗರ್ಭಿಣಿಯರ ನೋಂದಣಿ ಸಂಖ್ಯೆ ಹೆಚ್ಚಿದ್ದು ಹೆರಿಗೆಗಳ ಸಂಖ್ಯೆ ಕಡಿಮೆಯಿದೆ. ತಾಲೂಕುವಾರು ಸಂಪೂರ್ಣ ಮಾಹಿತಿ ನೀಡುವಂತೆ ಡಿಎಚ್​ಒ ಡಾ.ನಾಗೇಂದ್ರಪ್ಪಗೆ ನಿರ್ದೇಶನ ಮಾಡಿದರು. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಿದೆ. 5590 ಟನ್ ಯೂರಿಯಾ ದಾಸ್ತಾನು ಇದ್ದು, ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಯೂರಿಯಾ ಪೂರೈಕೆ ಸಂಬಂಧ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ. ಉದ್ದು, ಹೆಸರು ಮತ್ತು ಅಲಸಂದೆ ಬೆಳೆ ಸುಮಾರು 13513 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚನಾ ಮಾಹಿತಿ ನೀಡಿದರು. ಎಣ್ಣೆ ಬೀಜಗಳ ಬಿತ್ತನೆ ಜಿಲ್ಲೆಯಲ್ಲಿ ಕಡಿಮೆಯಾಗಿದೆ. ಬಿತ್ತನೆ ಬೀಜದ ಪೂರೈಕೆಯನ್ನು ಸಮರ್ಪಕವಾಗಿ ಮಾಡಲು ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ಮಾರಾಟ ಮಾಡಲು ಕ್ರಮವಹಿಸುವಂತೆ ಸಚಿವರು ಸೂಚಿಸಿದರು.

    ಆ.31ರವರೆಗೆ ಶಾಲೆಗಳನ್ನು ತೆರೆಯದಂತೆ ಸರ್ಕಾರ ಆದೇಶ ನೀಡಿದೆ, ಸ್ವಯಂಪ್ರೇರಿತರಾಗಿ ಪಾಲಕರು ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲು ಮಾಡುತ್ತಿದ್ದರೆ ಅವಕಾಶ ಕಲ್ಪಿಸಿ, ಇದರಿಂದ ಖಾಸಗಿ ಶಾಲೆಯ ಶಿಕ್ಷಕರಿಗೆ ವೇತನ ನೀಡಲು ಸಹಕಾರಿಯಾಗಲಿದೆ. ಆದರೆ, ಯಾರಿಗೂ ಒತ್ತಾಯ ಮಾಡಿ ದಾಖಲು ಮಾಡುವಂತೆ ಪ್ರೇರೇಪಿಸಬಾರದು ಎಂದು ಡಿಡಿಪಿಐ ನಂಜಯ್ಯಗೆ ಸೂಚಿಸಿದರು.

    ಹೈಫ್ಲೋ ಆಕ್ಸಿಜನ್ ಸೌಲಭ್ಯ: ಕರೊನಾಗೆ ಚಿಕಿತ್ಸೆ ನೀಡಲು ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 50 ಹಾಸಿಗೆಗಳುಳ್ಳ ಹೈಫ್ಲೋ ಆಕ್ಸಿಜನ್ ಸೌಲಭ್ಯ ಕಾಮಗಾರಿಯು ಆ.15ರೊಳಗೆ ಮುಗಿಯಲಿದೆ. ಜಿಲ್ಲೆಗೆ 32 ವೆಂಟಿಲೇಟರ್ ಬಂದಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್​ಕುಮಾರ್ ಮಾಹಿತಿ ನೀಡಿದರು. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿರುವ ಆರ್​ಟಿಪಿಸಿಆರ್ ಲ್ಯಾಬ್ ಶೀಘ್ರ ಮೇಲ್ದರ್ಜೆಗೇರಿಸಲಿದ್ದು, ಪ್ರತಿದಿನ ಜಿಲ್ಲೆಯಲ್ಲಿ 2000 ಕೋವಿಡ್ ಪರೀಕ್ಷೆ ನಡೆಸಲು ಅವಕಾಶವಿದೆ ಎಂದರು. ಪ್ರತೀ ತಾಲೂಕು ಆಸ್ಪತ್ರೆಗೂ 2 ವೆಂಟಿಲೇಟರ್ ನೀಡಬೇಕು ಎಂದು ಸಚಿವರು ಸೂಚಿಸಿದರು. 2011ರಿಂದ ಇಲ್ಲಿಯವರೆಗೂ ವಸತಿ ಯೋಜನೆಯಡಿ ಮಂಜೂರಾದ 9.70 ಲಕ್ಷ ಮನೆಗಳ ನಿಮಾಣಕ್ಕೆ 10,148 ಕೋಟಿ ರೂ. ಹಣ ಬಿಡುಗಡೆ ಮಾಡಿ ಪೂರ್ಣಗೊಳಿಸಲು ತೀಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು. ತುಮಕೂರು ಜಿಲ್ಲೆಗೆ ಹೇಮಾವತಿ ಎತ್ತಿನಹೊಳೆ ಹಾಗೂ ಭದ್ರಾ ಮೇಲ್ಡಂಡೆ ಯೋಜನೆಯಡಿ ನೀರು ಹರಿದು ಬರಲಿದೆ. ಹೀಗಾಗಿ ಜಲಮೂಲಕ್ಕೆ ಕೊರತೆಯಿಲ್ಲ. ಜಲ ಜೀವನ್ ಯೋಜನೆ ಜಿಲ್ಲೆಯಿಂದ ಹೊರ ಹೋಗುವುದಿಲ್ಲ ಎಂದರು. ರೀ, ಮಾಧುಸ್ವಾಮಿ ನೀವು ಹೇಮಾವತಿ ನೀರು ಕುಡಿಯುತ್ತೀರಿ, ನಾವು ಯಾವ ನೀರು ಕುಡಿಯೋಣ? ಪಾವಗಡಕ್ಕೆ ಶಾಶ್ವತ ನೀರಾವರಿಗೆ ಕ್ರಮಕೈಗೊಳ್ಳಿ ಎಂದು ಶಾಸಕ ವೆಂಕಟರಮಣಪ್ಪ ಮನವಿ ಮಾಡಿದರು.

    ಸಚಿವ, ಶಾಸಕರ ಜಟಾಪಟಿ : ವಸತಿ ಯೋಜನೆ ಅನುದಾನ ನೀಡುವ ವಿಷಯದಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಕುಣಿಗಲ್ ಶಾಸಕ ಡಾ.ಎಚ್. ಡಿ.ರಂಗನಾಥ್ ನಡುವೆ ಸಭೆಯಲ್ಲಿ ಜಟಾಪಟಿ ನಡೆಯಿತು. ಒಂದು ಹಂತದಲ್ಲಿ ಸಚಿವ ಮಾಧುಸ್ವಾಮಿ ರಂಗನಾಥ್ ಅವರಿಗೆ ಯೂ ಫ್ರಾಡ್, ಯೂ ಕಮಿಟೆಡ್ ಫ್ರಾಡ್ ಎಂದು ಏರುಧ್ವನಿಯಲ್ಲಿ ಹೇಳಿದ್ದು ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಯಿತು.  ಕ್ಷೇತ್ರದ ಬಡ ಜನರಿಗೆ ಮನೆ ಕಟ್ಟಲು ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂಬ ಶಾಸಕರ ಆರೋಪಕ್ಕೆ ಸಿಟ್ಟಾದ ಸಚಿವರು, ಕುಣಿಗಲ್ ತಾಲೂಕಿನಲ್ಲಿ 34 ಮನೆ ಹಂಚಿಕೆಯಲ್ಲಿ ನಡೆದಿರುವ ಅಕ್ರಮದ ಕಾರಣಕ್ಕೆ ಜಿಲ್ಲೆಯ ಅನುದಾನ ತಡವಾಗಿದೆ ಎಂದಾಗ ಮಾತಿಗೆ ಮಾತು ಬೆಳೆಯಿತು. 2017ರಲ್ಲಿ ನಾನು ಶಾಸಕನಾಗಿರಲಿಲ್ಲ, ತನಿಖೆ ನಡೆಸಿ ಎಂದು ಸವಾಲೆಸೆದ ಶಾಸಕ, ಕರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರದ ಬಳಿ ಹಣ ಇಲ್ಲ ಎಂದು ಒಪ್ಪಿಕೊಳ್ಳಿ…ಸುಮ್ಮನೆ ಹಣ ಕೊಟ್ಟಿದ್ದೇವೆ ಎನ್ನಬೇಡಿ, ಯು ಆರ್ ಓನ್ಲೀ ಗ್ರೇಟ್… ಅಧಿಕಾರಿಗಳಿಗೆ ಹೇಳಿ ಆಕ್ಷನ್ ತಗೋಳಿ, ನಾವೇನಾದ್ರು ಮೋಸ ಮಾಡಿದ್ರೆ ಪ್ಲೀಸ್ ಟೇಕ್ ಆಕ್ಷನ್.. ಎಂದು ಸಚಿವರಿಗೆ ಸವಾಲೆಸೆದರು. ನೀವು ಫ್ರಾಡ್ ಮಾಡಿದ್ರಿಂದಲೇ ರಾಜ್ಯಾದ್ಯಂತ ಎರಡು ತಿಂಗಳು ಹಣ ರಿಲೀಸ್ ಮಾಡೋದು ವಿಳಂಬ ಆಯ್ತು. ನನ್ನತ್ರ ದಾಖಲೆ ಇದೆ. ನೀವು ಮನೆಗಳನ್ನ ಫ್ರಾಡ್ ಮಾಡ್ತಿದ್ರೂ ಸರ್ಕಾರ ಹೇಗೆ ಹಣ ಕೊಡುತ್ತೆ..? ಎಂದು ಮಾಧುಸ್ವಾಮಿ ಜಾಡಿಸಿದರು.

    ನಿನ್ನ ದರ್ಬಾರ್​ನಲ್ಲಿ ಎಲ್ಲ ನಡೆಯಲಿ: ಇನ್ಮುಂದೆ ಸಭೆ ಆರಂಭದಲ್ಲಿ ಇರುವ ಗಣ್ಯರಿಗಷ್ಟೇ ಸ್ವಾಗತ, ಮಧ್ಯದಲ್ಲಿ ಯಾರೇ ಬಂದರೂ ‘ಶಿವಪೂಜೆಯಲ್ಲಿ ಕರಡಿ ಬಿಟ್ಟು ಬಂದಂತೆ’ ಸ್ವಾಗತಿಸಬೇಡಿ ಎಂದು ಸಚಿವ ಮಾಧುಸ್ವಾಮಿ ಸೂಚಿಸಿದರು. ಸಭೆಗೆ ತಡವಾಗಿ ಬಂದ ಶಾಸಕ ವೆಂಕಟರಮಣಪ್ಪ ‘ನಿನ್ನ ದರ್ಬಾರ್​ನಲ್ಲಿ ಏನೇನು ಮಾಡ್ತಿಯೋ ಮಾಡಪ್ಪ’ ಎಂದರು. ದರ್ಬಾರ್ ಎಂದಾದರೂ ತಿಳ್ಕೊ …ಸೇವೆ ಎಂದಾದರೂ ತಿಳ್ಕೊ ಎಂದು ಮಾಧುಸ್ವಾಮಿ ಸ್ಪಷ್ಟನೆ ನೀಡಿದರು. ಏ ಮಾಧುಸ್ವಾಮಿ ನೀನು ಕೆಳಗೆ ಕೂರುವಾಗ ಜೋರಾಗಿದ್ದೆ, ಮೇಲೆ ಕುಳಿತಿದ್ದಾಗ ಸೌಮ್ಯವಾಗಿರುವುದು ಜಿಲ್ಲೆಯಲ್ಲಿ ಅಧಿಕಾರಿಗಳು ಮೈಗಳ್ಳರಾಗಲು ಕಾರಣವಾಗಿದೆ ಎಂದು ಕಾಲೆಳೆದರು. ಹೌದು, ಈಗ ನಾನು ಉತ್ತರ ಕೊಡುವ ಜಾಗದಲ್ಲಿದ್ದೇನೆ, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಸಹಿಸುವುದಿಲ್ಲ ಎಂದು ನಕ್ಕರು.

    ಸಭೆಯ ಆರಂಭದಲ್ಲಿ ಶಿರಾ ಶಾಸಕ ಬಿ.ಸತ್ಯನಾರಾಯಣ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಜಿಪಂ ಅಧ್ಯಕ್ಷೆ ಲತಾ, ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಸಾಲ ಜಯರಾಮ್ ತಿಪ್ಪೇಸ್ವಾಮಿ, ಜಿಪಂ ಸಿಇಒ ಶುಭಾಕಲ್ಯಾಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts