More

    ಬರಿದಾಯಿತು ಕಾವೂರು ಕೆರೆ

    ಬರಿದಾಯಿತು ಕಾವೂರು ಕೆರೆ. ಹೌದು ಸ್ಮಾರ್ಟ್‌ಸಿಟಿಯಿಂದ 8.50 ಕೋಟಿ ರೂಪಾಯಿ ವೆಚ್ಚದಲ್ಲಿ ಸುತ್ತಲೂ ಅಭಿವೃದ್ಧಿಗೊಂಡ ಕಾವೂರು ಕೆರೆ ಈ ಬಾರಿ ಸಂಪೂರ್ಣ ಬತ್ತಿ ಹೋಗಿದೆ. ಇದರಲ್ಲಿದ್ದ ಮೀನು, ಕಪ್ಪೆ, ಆಮೆ ಮೊದಲಾದ ಜಲಚರಗಳು ನಾಶವಾಗಿವೆ. ಈ ಕುರಿತು ವಿಸ್ತೃತ ವರದಿ ಇಲ್ಲಿದೆ.

    ಹರೀಶ್ ಮೋಟುಕಾನ ಮಂಗಳೂರು
    ಸ್ಮಾರ್ಟ್‌ಸಿಟಿಯಿಂದ 8.50 ಕೋಟಿ ರೂಪಾಯಿ ವೆಚ್ಚದಲ್ಲಿ ಸುತ್ತಲೂ ಅಭಿವೃದ್ಧಿಗೊಂಡ ಕಾವೂರು ಕೆರೆ ಈ ಬಾರಿ ಸಂಪೂರ್ಣ ಬತ್ತಿ ಹೋಗಿದೆ. ಇದರಲ್ಲಿದ್ದ ಮೀನು, ಕಪ್ಪೆ, ಆಮೆ ಮೊದಲಾದ ಜಲಚರಗಳು ನಾಶವಾಗಿವೆ. ಹಲವು ವರ್ಷಗಳ ಬಳಿಕ ಏಪ್ರಿಲ್ ತಿಂಗಳಿನಲ್ಲಿ ಸಂಪೂರ್ಣ ಬತ್ತಿರುವುದು ಇದೇ ಮೊದಲು.

    ಕೆರೆಯ ಸುತ್ತಲೂ ವಾಕಿಂಗ್‌ಗೆ ಅನುಕೂಲವಾಗುವಂತೆ ಅಭಿವೃದ್ಧಿ ಪಡಿಸಲಾಗಿದೆ. ಕುಳಿತುಕೊಂಡು ವಿಶ್ರಾಂತಿ ಪಡೆಯಲು ಕಲ್ಲು ಬೆಂಚುಗಳನ್ನು ಅಳವಡಿಸಲಾಗಿದೆ. ರಾತ್ರಿಯಲ್ಲೂ ವಾಕಿಂಗ್ ಮಾಡಲು ವಿದ್ಯುತ್ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಆದರೆ ನಡುವಿನ ಕೆರೆಯನ್ನು ಮಾತ್ರ ಅಲ್ಲಿಂದಲ್ಲಿಗೆ ಸರಿಪಡಿಸಿದ ಕಾರಣ ನೀರು ಸಂಪೂರ್ಣ ಬತ್ತಿ ಹೋಗಿದೆ. ಕೆರೆಯಲ್ಲಿ ನೀರು ತುಂಬಿದ್ದರೆ ಮಾತ್ರ ಪರಿಸರ ಸುಂದರವಾಗಿ ಗೋಚರಿಸುತ್ತದೆ.

    ತ್ಯಾಜ್ಯ ನೀರಿಗೆ ತಡೆ

    ಸುತ್ತಮುತ್ತಲಿನ ವಸತಿ ಸಮುಚ್ಚಯ, ಮನೆಗಳಿಂದ ಕೆರೆಗೆ ಬಂದು ಸೇರುತ್ತಿದ್ದ ಕೊಳಚೆ ನೀರಿಗೆ ಸ್ಮಾರ್ಟ್‌ಸಿಟಿ ಕಾಮಗಾರಿ ವೇಳೆ ತಡೆಯೊಡ್ಡಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ತ್ಯಾಜ್ಯ ನೀರು ನಿರಂತರವಾಗಿ ಕೆರೆಗೆ ಸೇರುತ್ತಿದ್ದ ಕಾರಣ ಕೆರೆಯಲ್ಲಿ ವರ್ಷವಿಡೀ ನೀರು ಕಾಣಿಸುತ್ತಿತ್ತು. ನಿಜವಾಗಿ ಅದು ಕೆರೆಯ ನೀರು ಆಗಿರಲಿಲ್ಲ.
    ಸ್ಮಾರ್ಟ್‌ಸಿಟಿಯಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೆರೆ ಸುತ್ತ ಅಭಿವೃದ್ಧಿಪಡಿಸುವಾಗ ಕೆರೆಯ ಒಳಗಡೆ ಅಭಿವೃದ್ಧಿ ಪಡಿಸದೆ ಇರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. 5 ಅಡಿ ಆದರೂ ಕೆರೆಯಲ್ಲಿ ತುಂಬಿದ್ದ ಹೂಳು ತೆಗೆಯುತ್ತಿದ್ದರೆ ಕಾವೂರು ಗ್ರಾಮಕ್ಕೆ ಬೇಕಾದಷ್ಟು ನೀರು ಲಭ್ಯವಾಗುತ್ತಿತ್ತು ಎಂದು ಸ್ಥಳೀಯ ನಿವಾಸಿ ನಾರಾಯಣ ಕಲ್ಯಾಣತ್ತಾಯ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ವಿಶಾಲವಾಗಿದ್ದ ಕಾವೂರು ಕೆರೆ ಬಹಳಷ್ಟು ಒತ್ತುವರಿಯಾಗಿದೆ. ತ್ಯಾಜ್ಯ ನೀರು ಬಂದು ಕೆರೆಗೆ ಸೇರಿ ನೀರು ಕಲ್ಮಶವಾಗಿತ್ತು. ತ್ಯಾಜ್ಯ ಕೂಡ ತುಂಬಿತ್ತು. ಸ್ಮಾರ್ಟ್‌ಸಿಟಿ ಕಾಮಗಾರಿ ವೇಳೆ ಕೆರೆಯೊಳಗಿದ್ದ ತ್ಯಾಜ್ಯ ತೆಗೆದು, ಕೊಳಚೆ ನೀರು ಒಳಚರಂಡಿಗೆ ಸಂಪರ್ಕ ಮಾಡಿದ್ದಾರೆ. ಇದರಿಂದಾಗಿ ಕೆರೆಗೆ ಸೇರುವುದು ತಪ್ಪಿದೆ. ಸುತ್ತಲೂ ಮಾಡಿದ ಕಾಮಗಾರಿಯ ನಿರ್ವಹಣೆ ಅವಶ್ಯ. ವಿದ್ಯುತ್ ದೀಪಗಳು ಹದಗೆಟ್ಟರೆ ಸಕಾಲದಲ್ಲಿ ಬದಲಾವಣೆಯಾಗಬೇಕು. ಇಂಟರ್‌ಲಾಕ್ ಕಿತ್ತು ಹೋದರೆ ಮರು ಜೋಡಿಸಬೇಕು. ಕಬ್ಬಿಣದ ಬೇಲಿಗಳಿಗೆ ಪೈಂಟಿಂಗ್ ಮಾಡುತ್ತಿರಬೇಕು. ಇಲ್ಲದಿದ್ದರೆ ವರ್ಷದೊಳಗೆ ಎಲ್ಲವೂ ಎದ್ದು ಹೋಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿರುವುದು ವ್ಯರ್ಥವಾಗಲಿದೆ.

    ಕಾವೂರು ಕೆರೆ ಹಲವು ವರ್ಷದ ಬಳಿಕ ಸಂಪೂರ್ಣ ಬತ್ತಿ ಹೋಗಿದೆ. ಕೆರೆಯ ಹೂಳೆತ್ತಿ ಒಂದಷ್ಟು ಆಳ ಮಾಡುತ್ತಿದ್ದರೆ ಬೇಕಾದಷ್ಟು ನೀರು ಲಭ್ಯವಿತ್ತು. ಸ್ಮಾರ್ಟ್‌ಸಿಟಿಯಿಂದ ಕೇವಲ ಕೆರೆಯ ಆವರಣವನ್ನಷ್ಟೇ ಸುಂದರ ಮಾಡಿದ್ದಾರೆ. ಒಟ್ಟಿಗೆ ಕೆರೆಯ ಒಳಗಡೆ ಕೂಡ ಕೆಲಸ ಮಾಡಬೇಕಿತ್ತು.
    -ನಾರಾಯಣ ಕಲ್ಯಾಣತ್ತಾಯ ಮುಲ್ಲಕಾಡ್, ಕಾವೂರು

    ಸ್ಮಾರ್ಟ್‌ಸಿಟಿಯಿಂದ ಅಭಿವೃದ್ಧಿಗೊಂಡ ಕಾವೂರು ಕೆರೆ ನಿರ್ವಹಣೆಗೆ ಸಮಿತಿ ಮಾಡಲಾಗಿದೆ. ಸಾರ್ವಜನಿಕರು ಕೂಡ ಉತ್ತಮ ರೀತಿಯಲ್ಲಿ ಕಾಯ್ದುಕೊಳ್ಳಲು ಸಹಕಾರ ನೀಡಬೇಕು.
    – ಅರುಣ್‌ಪ್ರಭಾ ಸ್ಮಾರ್ಟ್‌ಸಿಟಿ ಅಧಿಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts