More

    ಮೊದಲು ಶಿವಮೊಗ್ಗದ ಟೈಮ್ ಸರಿ ಮಾಡ್ರಪ್ಪ…!

    ಶಿವಮೊಗ್ಗ: ಸ್ಮಾರ್ಟ್‌ಸಿಟಿ ಯೋಜನೆಯ ಬಗ್ಗೆ ದೂರುಗಳ ಸರಮಾಲೆಯೇ ಇದೆ. ಅದೆಲ್ಲ ಆರೋಪಗಳನ್ನು ಸರಿಮಾಡಿಕೊಳ್ಳುವ ಪ್ರಯತ್ನದಲ್ಲಿರುವ ಸ್ಮಾರ್ಟ್‌ಸಿಟಿ ಕಂಪನಿಗೆ ಈಗ ಗಡಿಯಾರ ಶಾಕ್ ನೀಡಿದೆ. ಉಷಾ ನರ್ಸಿಂಗ್ ವೃತ್ತಕ್ಕೆ ಸ್ವಲ್ಪ ದೂರದಲ್ಲಿ ವಿನಾಯಕ ನಗರ ಮುಖ್ಯರಸ್ತೆ ಮಧ್ಯದಲ್ಲಿ ನಿರ್ಮಿಸಿರುವ ಕ್ಲಾಕ್ ಟವರ್‌ನಲ್ಲಿರುವ ಗಡಿಯಾರಗಳು ಒಂದೊಂದು ಸಮಯ ತೋರಿಸುತ್ತಿವೆ.

    ಒಂದು ಗಡಿಯಾರದಲ್ಲಿ ಬೆಳಗ್ಗೆ 11.35, ಇನ್ನೊಂದರಲ್ಲಿ 11.20, ಮತ್ತೊಂದು ಗಡಿಯಾರದಲ್ಲಿ 7.35! ಹೀಗೆ ಬಗೆಬಗೆಯ ಸಮಯ ತೋರಿಸುತ್ತಿರುವ ಗಡಿಯಾರಗಳ ಬಗ್ಗೆ ಸಾರ್ವಜನಿಕರು ಚರ್ಚಿಸಿ ಸ್ಮಾರ್ಟ್‌ಸಿಟಿಯ ಗೇಲಿ ಮಾಡುತ್ತಿದ್ದಾರೆ. ವರ್ಷದೊಳಗೆ ಕ್ಲಾಕ್ ಟವರ್‌ನ ಗಡಿಯಾರಗಳು ಒಂದೊಂದು ಸಮಯ ತೋರಿಸುತ್ತಿರುವುದು ಜನರಿಗೆ ತಮಾಷೆಯ ಸಂಗತಿಯಾಗಿದೆ.
    ದಶಕಗಳ ಹಿಂದೆ ಕೋಟೆ ಪೊಲೀಸ್ ಠಾಣೆ ಪಕ್ಕದಲ್ಲಿದ್ದ ಮ್ಯಾಮ್ಕೋಸ್ ಕಚೇರಿ ಕಟ್ಟಡದ ಮೇಲೆ ಕ್ಲಾಕ್ ಟವರ್ ನಿರ್ಮಿಸಲಾಗಿತ್ತು. ಆ ಸಂದರ್ಭದಲ್ಲಿ ಅದು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಅದಾದ ಬಳಿಕ ಕಳೆದ ವರ್ಷ ವಿನಾಯಕ ನಗರದಲ್ಲಿ ಸುಂದರವಾದ ಕ್ಲಾಕ್ ಟವರ್ ನಿರ್ಮಿಸಲಾಗಿತ್ತು.
    ಈ ಗಡಿಯಾರವನ್ನು ಎಚ್‌ಎಂಟಿ ಕಂಪನಿಯವರು ವಿಶೇಷವಾಗಿ ನಿರ್ಮಿಸಿದ್ದಾರೆ. ಸ್ಮಾರ್ಟ್ ಸಿಟಿ ಮೂಲಕ ವಿಶೇಷವಾದ ಯೋಜನೆ ರೂಪಿಸಿ ಇಡೀ ವೃತ್ತವನ್ನು ದೇವಾಲಯವೂ ಸೇರಿದಂತೆ ಅಭಿವೃದ್ಧಿಪಡಿಸಲಾಗಿದೆ. ವಿಶೇಷ ರೀತಿಯಲ್ಲಿ ಕೆತ್ತನೆ ಮಾಡಿರುವ ಕಲ್ಲುಗಳನ್ನು ಜೋಡಿಸಿ ಆಕರ್ಷಣೀಯಗೊಳಿಸಲಾಗಿದೆ.
    ರೈಲ್ವೆ ನಿಲ್ದಾಣದ ಕಡೆಯಿಂದ ಬರುವವರಿಗೆ ಈ ಕ್ಲಾಕ್ ಟವರ್ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಉಷಾ ನರ್ಸಿಂಗ್ ಹೋಂ ಕಡೆಯಿಂದ ಅಮೀರ್ ಅಹಮದ್ ಕಾಲನಿ ಕಡೆಗೆ ಹೋಗುವವರಿಗೆ ಇದು ತಟ್ಟನೆ ಕಣ್ಣಿಗೆ ಬೀಳುವುದಿಲ್ಲ. ಆದರೆ ಇದರಲ್ಲಿನ ಸಮಯ ನೋಡಿದವರು ಅಚ್ಚರಿಪಡುವಂತಾಗಿದೆ.
    ತಾನೇ ತಾನಾಗಿ ಅಪ್‌ಡೇಟ್ ಆಗುತ್ತೆ!: ಈ ಗಡಿಯಾರಗಳು ಹಲವು ವಿಶೇಷತೆಗಳ ಆಗರವಾಗಿವೆ. 25 ಅಡಿ ಎತ್ತರದಲ್ಲಿ ಜೋಡಿಸಿರುವ ಈ ಗಡಿಯಾರದ ಮುಳ್ಳುಗಳು ಕರೆಂಟ್ ಬಳಸಿಕೊಂಡು ಚಲಿಸುತ್ತವೆ. ಒಂದು ವೇಳೆ ಕರೆಂಟ್ ಹೋದರೂ ಎಂಟು ತಾಸು ಈ ಮುಳುಗಳಿಗೆ ಶಕ್ತಿ ತುಂಬಬಲ್ಲ ಯುಪಿಎಸ್ ಅಳವಡಿಸಲಾಗಿದೆ.
    ಇಷ್ಟಕ್ಕೂ ಮೀರಿ ಯುಪಿಎಸ್ ಶಕ್ತಿಯೂ ಖಾಲಿಯಾದರೆ ಗಡಿಯಾರದ ಮುಳ್ಳುಗಳು 12ಕ್ಕೆ ಬಂದು ನಿಲ್ಲುತ್ತವೆ. ಮತ್ತೆ ವಿದ್ಯುತ್ ಸಂಪರ್ಕ ಸಿಕ್ಕ ಬಳಿಕ ಜಿಪಿಎಸ್ ಆಧಾರದಲ್ಲಿ ಸ್ಥಳೀಯ ಸಮಯಕ್ಕೆ ಹೊಂದಿಕೊಂಡು ಮುಳ್ಳುಗಳು ಆ ಸ್ಥಾನಕ್ಕೆ ಹೋಗುತ್ತವೆ. ಹೀಗಾಗಿ ವಿದ್ಯುತ್ ಇಲ್ಲದೇ ಹೋದರೂ ಮುಳ್ಳುಗಳು ನಿಂತರೂ ಯಾವುದೇ ತೊಂದರೆಯಿಲ್ಲ. ಪ್ರತಿದಿನ ಅದನ್ನು ನಿರ್ವಹಣೆ ಮಾಡುವ ಅಗತ್ಯವೂ ಇಲ್ಲ ಎಂದು ಅಧಿಕಾರಿಗಳು ವರ್ಷದ ಹಿಂದೆ ಭರವಸೆ ನೀಡಿದ್ದರು. ಆದರೆ ಈ ಭರವಸೆ ವರ್ಷದೊಳಗೆ ಹುಸಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts