More

    ಜಾನುವಾರುಗಳಿಗಿಲ್ಲ ಕಿಮ್ಮತ್ತು

    ಕವಿತಾಳ: ಪಟ್ಟಣದ ತ್ರಯಂಭಕೇಶ್ವರ ಜಾತ್ರೆ ಅಂಗವಾಗಿ ಶನಿವಾರ ಆಯೋಜಿಸಿರುವ ದನಗಳ ಜಾತ್ರೆಯಲ್ಲಿ ಜಾನುವಾರುಗಳನ್ನು ಮಾರಾಟ ಮಾಡುವವರಿದ್ದರೂ ಕೊಳ್ಳುವವರಿಲ್ಲದೆ ವಹಿವಾಟು ಕುಂಠಿತವಾಗಿದೆ. ಬರಗಾಲ ಕಾರಣ ಕೊಳ್ಳುವವರು ಮುಂದೆ ಬರುತ್ತಿಲ್ಲ.

    ಜಾತ್ರೆಯಲ್ಲಿ ದನಗಳ ಜಾತ್ರೆ ನಡೆಸಲು ಜಾಗದ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಹುಡುಕಬೇಕಿದೆ. ಪ್ರತಿವರ್ಷ ಬೇರೆಬೇರೆ ಜಾಗಗಳಲ್ಲಿ ದನಗಳ ಜಾತ್ರೆ ನಡೆಸಲಾಗುತ್ತಿದೆ. ಈ ಸಲ ಗುಂಡಮ್ಮ ತೋಟದ ಹತ್ತಿರ ದನಗಳ ಜಾತ್ರೆ ನಡೆದಿದೆ. ಆದರೆ, ಬರಗಾಲ ನೆಪದಿಂದ ತಾವು ಸಾಕಿದ ದನಗಳನ್ನು ಮಾರಬೇಕು ಎನ್ನುವ ಉದ್ದೇಶದಿಂದ ಬಹಳಷ್ಟು ದನಗಳನ್ನು ರೈತರು ಜಾತ್ರೆಗೆ ತಂದಿದ್ದಾರೆ. ಆದರೆ, ಕೊಳ್ಳುವವರು ಇಲ್ಲದೆ ಒದ್ದಾಡುತ್ತಿದ್ದಾರೆ. ದನಗಳು ಮಾರಾಟವಾಗುತ್ತಿಲ್ಲ, ನಾವು ಮತ್ತೆ ಮನೆಗೆ ಹೊಡೆದುಕೊಂಡು ಹೋಗಬೇಕಲ್ಲ ಎಂದು ಪೇಚಾಡುತ್ತಿದ್ದಾರೆ. ಇಲ್ಲವೇ ಕಡಿಮೆ ಬೆಲೆಗೆ ಮಾರಾಟ ಮಾಡಿ ಕೈಸುಟ್ಟುಕೊಳ್ಳಬೇಕಿದೆ.

    ಕವಿತಾಳ, ವಟಗಲ್, ಅಮೀನಗಡ, ಕೊಟೆಕಲ್, ಯತಗಲ್, ಕಾಚಪೂರ, ಹಣಗಿ, ಕಕ್ಕೇರ, ಹಿರಾ, ತೊಪ್ಪಲದೊಡ್ಡಿ ಗ್ರಾಮಗಳ ರೈತರು ಎತ್ತುಗಳನ್ನು ಮಾರಾಟಕ್ಕೆ ತಂದಿದ್ದರು. ಲಕ್ಷ ರೂ.ಗಿಂತಲೂ ಹೆಚ್ಚು ಬೆಲೆ ಬಾಳುವ ಜೋಡೆತ್ತುಗಳನ್ನು ಕೇವಲ 60 ಸಾವಿರ ರೂ.ಗೆ ಕೊಳ್ಳುವವರು ಕೇಳುತ್ತಿದ್ದಾರೆ. ಹಣದ ಅವಶ್ಯತೆ ಇರುವವರು ಅನಿವಾರ್ಯವಾಗಿ ಎತ್ತುಗಳನ್ನು ಕೊಟ್ಟಿದ್ದಾರೆ. ಇನ್ನು ಕೆಲವರು ಮಾರಾಟವಾದರೆ ಸಾಕು ಎಂದು ಮತ್ತಷ್ಟು ಕಡಿಮೆ ಬೆಲೆಗೆ ಕೊಟ್ಟಿದ್ದಾರೆ. ಮೇಲಾಗಿ ಕೊಳ್ಳುವವರ ಸಂಖ್ಯೆಯೂ ಕಡಿಮೆಯಿತ್ತು.

    ಬರಗಾಲ ಕಾರಣದಿಂದ ಎತ್ತುಗಳಿಗೆ ಮೇವು ಇರದಿರುವುದು, ಮಳೆಯಾಗದಿರುವುದು ಮತ್ತು ಮಕ್ಕಳು ಕೃಷಿಯನ್ನು ಮಾಡದಿರುವುದರಿಂದ ಮನೆಯ ಹಿರಿಯರು ಎತ್ತುಗಳನ್ನು ಮಾರಾಟಮಾಡುತ್ತಿದ್ದಾರೆ. ಕೆಲವರು ಎತ್ತುಗಳನ್ನು ಮಾರಿ ಟ್ರಾೃಕ್ಟರ್ ತರಬೇಕು ಎನ್ನುವ ಉದ್ದೇಶವೂ ಎತ್ತುಗಳನ್ನು ಮಾರಾಟಮಾಡಲು ಕಾರಣವಾಗಿತ್ತು. ದನಗಳ ಜಾತ್ರೆಯಲ್ಲಿ ಒಕ್ಕಲುತನ ಮಾಡುವ ಸಲುವಾಗಿ ಸಾಮಾಗ್ರಿಗಳನ್ನು ಮಾರಾಟ ಮಾಡುವವರು ಅಂಗಡಿಗಳನ್ನು ಹಾಕಿದ್ದರೆ. ದನಗಳಿಗೆ ಶೃಂಗರಿಸಲು ಹಣೆಕಟ್ಟು, ಕೊರಳುಸರ, ಬಾರುಕೊಲು, ಬೋರಮಳ, ಬಾಣಿ ಸೇರಿದಂತೆ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಅಂಗಡಿಹಾಕಿ ನಾಲ್ಕು ದಿನವಾದರೂ ಇದುವರೆಗು ಸಾವಿರ ರೂ. ವ್ಯಾಪಾರವಾಗಿಲ್ಲ ಎಂದು ವ್ಯಾಪಾರಿ ಕುಷ್ಟಗಿ ಮೈಬುಸಾಬ್ ನದಾಪ್ ಬೇಸರ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts