More

    ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ: ಮೂರೇ ದಿನದಲ್ಲಿ ಉಗ್ರಾಣ ಭರ್ತಿ

    ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪೂರ್ವಭಾವಿ ಭಕ್ತರಿಂದ ಹೊರೆಕಾಣಿಕೆ ಹರಿದು ಬರುತ್ತಿದೆ. ಸುಮಾರು 20 ಸಾವಿರ ಚದರ ಅಡಿ ವಿಸ್ತಾರದ ಉಗ್ರಾಣ ಮೂರೇ ದಿನದಲ್ಲಿ ಭರ್ತಿಯಾಗಿದೆ.
    ಅಕ್ಕಿ, ಸಕ್ಕರೆ ಬೆಲ್ಲ, ತುಪ್ಪ, ಎಣ್ಣೆ, ಬಟ್ಟಲು ಗ್ರೈಂಡರ್, ಉಪ್ಪು, ಸಾಸಿವೆ ಸ್ಟೀಲ್ ಬಟ್ಟಲು, ಪಾತ್ರೆಗಳು ಹೀಗೆ ನೂರಾರು ಬಗೆಯ ವಸ್ತುಗಳು ಭಕ್ತರಿಂದ ಉಗ್ರಾಣ ಸೇರುತ್ತಿದೆ. ಹೊರೆಕಾಣಿಕೆಯಲ್ಲಿ ಅಕ್ಕಿ ಕೊಡುವವರು ನಿರ್ದಿಷ್ಟ ಬ್ರಾಂಡ್‌ನದ್ದೇ ಕೊಡುವಂತೆ ಭಕ್ತರಿಗೆ ಸೂಚಿಸಿದ್ದು, 25 ಕೆಜಿಯ ನೂರಾರು ಮೂಟೆ ಅಕ್ಕಿ ಸಂಗ್ರಹವಾಗಿದೆ. ಭಕ್ತರು ತಾವು ಬೆಳೆದ ಅಕ್ಕಿ, ತರಕಾರಿಯನ್ನು ಭಕ್ತಿಯಿಂದ ದುರ್ಗೆಗೆ ಅರ್ಪಿಸುತ್ತಿದ್ದಾರೆ. ಉಗ್ರಾಣದ ಒಳಗೆ ವಿವಿಧ ಬಗೆಯ ವಸ್ತುಗಳನ್ನು ಪ್ರತ್ಯೇಕವಾಗಿ ಇಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಹೊರೆಕಾಣಿಕೆ ಬಂದ ವಾಹನದಿಂದ ವಸ್ತುಗಳನ್ನು ಖಾಲಿ ಮಾಡಲು 100ಕ್ಕೂ ಹೆಚ್ಚಿನ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ.

    ಹಲವೆಡೆಯಿಂದ ಹೊರೆಕಾಣಿಕೆ
    ಮೂರು ದಿನಗಳಲ್ಲಿ ಅತ್ತೂರು, ಕೊಡೆತ್ತೂರು ಶಿಬರೂರು, ಮೂಡುಬಿದಿರೆ, ಗಿಡಿಗೆರೆ, ಪಂಜ, ಕೊಕುಡೆ, ಮಂಗಳೂರು, ಇಡ್ಯಾ, ಸುರತ್ಕಲ್, ಚೇಳಾರು, ಮಧ್ಯ, ಬಪ್ಪನಾಡು, ಉಳ್ಳಾಲ, ಬಜ್ಪೆ, ಬೆಂಗಳೂರು ಮೊದಲಾದ ಕಡೆಯಿಂದ ಹೊರೆಕಾಣಿಕೆ ಸಲ್ಲಿಕೆಯಾಗಿದ್ದು, ಮುಂದಿನ ದಿನದಲ್ಲಿ ಕಾಸರಗೋಡು, ಸುಳ್ಯ, ಕುಂದಾಪುರ, ನಿಡ್ಡೋಡಿ, ಕಲ್ಲಮುಂಡ್ಕೂರು, ಬಂಟ್ವಾಳ, ವಿಟ್ಲ, ಸಾಲೆತ್ತೂರು, ಪುತ್ತೂರು, ಕಾವೂರು, ಕಳತ್ತೂರು, ಉಡುಪಿ, ಬೆಳ್ತಂಗಡಿ ಮತ್ತಿತರ ಕಡೆಯಿಂದ ಬರಲಿದೆ.

    ಬೆಳೆಬಾಳುವ ವಸ್ತುಗಳು
    ಮಂಗಳೂರು ಮಹಾನಗರದಿಂದ ಗುರುವಾರ ಬೃಹತ್ ಹೊರೆಕಾಣಿಕೆ ಸಲ್ಲಿಕೆಯಾಗಿದ್ದು, ಭಕ್ತರು, ಸಾವಿರಾರು ರೂ. ಬೆಳೆಬಾಳುವ ವಸ್ತುಗಳನ್ನು ಸಲ್ಲಿಸಿದ್ದು, 10000 ಊಟದ ಸ್ಟೀಲ್ ಬಟ್ಟಲು, 6000 ಚಿಕ್ಕ ಪ್ಲೇಟ್, 10 ಸಾವಿರ ನೀರಿನ ದೊಡ್ಡ ಲೋಟ, ಸ್ಟೀಲ್ ಸೌಟು, ಕೊಡಪಾನ ಎರಡು ಮರದ ಪಲ್ಲಕ್ಕಿ, 6000 ಟೀ ಲೋಟ, ತಾಮ್ರದ ಕೊಪ್ಪರಿಗೆ, ಪಾತ್ರೆಗಳು, 20 ಕ್ವಿಂಟಾಲ್ ಮೆಣಸು, 50 ಕ್ವಿಂಟಾಲ್ ತೊಗರಿಬೇಳೆ, ಸುಮಾರು 200 ಕ್ವಿಂಟಾಲ್, ಅಕ್ಕಿ, ಹರೆಮಣೆ, ಕತ್ತಿ, ವೀಲ್ ಚೇರ್, ನಗದು ಸಲ್ಲಿಸಿದ್ದಾರೆ.

    ಉಗ್ರಾಣದಲ್ಲಿ ಗರ್ಭಗುಡಿ
    ಉಗ್ರಾಣದ ಒಳಗೆ ದೇವಳವನ್ನು ಹೋಲುವ ಗರ್ಭಗುಡಿ ಇದ್ದು ಅದರ ಮುಂಭಾಗದಲ್ಲಿ ಹೊರೆಕಾಣಿಕೆ ಇಡಲಾಗಿದೆ. ಸೌತೆ, ಬಾಳೆಗೊನೆ ಮತ್ತಿತರ ವಸ್ತುಗಳನ್ನು ಮೇಲ್ಭಾಗದಲ್ಲಿ ನೇತಾಡುವಂತೆ ಇಡಲಾಗಿದ್ದು, ಆಕರ್ಷಕವಾಗಿ ಕಾಣುತ್ತದೆ. ಉಗ್ರಾಣದಿಂದ ಪಾಕಶಾಲೆಗೆ ಬೇಕಾದ ವಸ್ತುಗಳನ್ನು ವಾಹನದ ಮೂಲಕ ತರಲಾಗುತ್ತದೆ.

    ನಿಶಾಂತ್ ಶೆಟ್ಟಿ ಕಿಲೆಂಜೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts