More

    ಕಸ್ತೂರಿ ರಂಗನ್ ವರದಿ ಜಾರಿಗೆ ಅಂತಿಮ ಸಿದ್ಧತೆ: ಗೃಹ ಸಚಿವರ ವಿರುದ್ಧ ಕಾಂಗ್ರೆಸ್ ಕಿಡಿ

    ಶಿವಮೊಗ್ಗ: ಕೇಂದ್ರ ಸರ್ಕಾರ ಡಾ. ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ. ವರದಿ ಈಗಾಗಲೇ ಅಂತಿಮ ಹಂತಕ್ಕೆ ಬಂದಿದ್ದು ರಾಜ್ಯದ 10 ಜಿಲ್ಲೆಗಳ 1,572 ಗ್ರಾಮಗಳಲ್ಲಿ ಪರಿಸರ ಸೂಕ್ಷ್ಮ ಘೋಷಣೆ ಆಗಲಿದೆ. ಇದು ಗೊತ್ತಿದ್ದರೂ ಗೃಹ ಸಚಿವ ಆರಗ ಜ್ಞಾನೇಂದ್ರ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿ.ಎ.ರಮೇಶ್ ಹೆಗ್ಡೆ ಕಿಡಿಕಾರಿದರು.
    ಇತ್ತೀಚೆಗೆ ಗೃಹ ಸಚಿವರು ಕಸ್ತೂರಿ ರಂಗನ್ ವರದಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನನ್ನಿಂದ ತಡೆಹಿಡಿಯಲಾಗಿದೆ ಎಂದು ಸುಳ್ಳು ಹೇಳಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ವರದಿ ಜಾರಿ ಬಗ್ಗೆ ಆರಗ ಜ್ಞಾನೇಂದ್ರ ಸುಳ್ಳು ಹೇಳಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
    ಬಿಜೆಪಿ ಮುಖಂಡರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಅಡಕೆ, ಕಸ್ತೂರಿ ರಂಗನ್ ವರದಿ ನೆನಪಾಗುತ್ತದೆ. ವರದಿ ಅಂತಮ ಹಂತಕ್ಕೆ ಬಂದಿದೆ. ಶಿವಮೊಗ್ಗ ಜಿಲ್ಲೆಯ 475 ಗ್ರಾಮ ಒಳಗೊಂಡಂತೆ ರಾಜ್ಯದ 1,572 ಗ್ರಾಮಗಳಲ್ಲಿ ಪರಿಸರ ಸೂಕ್ಷ್ಮವಲಯ ಜಾರಿ ಆಗುತ್ತಿದೆ. ಇದರಿಂದ ಜನರಿಗೆ ಸಂಕಷ್ಟ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ರಾಜ್ಯದಲ್ಲಿ ಒಮ್ಮೆ ಪರಿಸರ ಸೂಕ್ಷ್ಮವೆಂದು ಘೋಷಣೆಯಾದರೆ ಅದರಿಂದ ಹೊರಬರುವುದು ಕಷ್ಟದ ಕೆಲಸವಾಗಿದ್ದು ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇರ ಹೊಣೆ. ಅವರ ಅಪಪ್ರಚಾರದಿಂದ 2013ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆ ಉಂಟಾಯಿತು. ಕಸ್ತೂರಿ ರಂಗನ್ ವರದಿ ಜಾರಿಗೆ ತರಲ್ಲ ಎಂದಿದ್ದರು. ಆದರೆ ಅಧಿಕಾರಕ್ಕೆ ಬರುತ್ತಿದ್ದಂತೆ ರಾಷ್ಟ್ರೀಯ ಹಸಿರು ಪೀಠಕ್ಕೆ ವರದಿ ಜಾರಿಗೊಳಿಸುವುದಾಗಿ ಅಫಿಡೇವಿಟ್ ಸಲ್ಲಿಸಿದ್ದಾರೆ ಎಂದು ದೂರಿದರು.
    ಕಸ್ತೂರಿ ರಂಗನ್ ವರದಿ ಜಾರಿ ಆಗಲಿದ್ದು ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ. ನಾಲ್ಕು ಬಾರಿ ಕೇಂದ್ರ ಸರ್ಕಾರ ಪಶ್ಚಿಮ ಘಟ್ಟಗಳಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸುವುದಾಗಿ ಕರಡು ಅಧಿಸೂಚನೆ ಹೊರಡಿಸಿದ್ದಾರೆ. ಆರಗ ಅವರಿಗೆ ಈ ಬಗ್ಗೆ ತಿಳಿದಿಲ್ಲವೇ ಪ್ರಶ್ನಿಸಿದ ರಮೇಶ್ ಹೆಗ್ಡೆ, ಇದಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕೂಡ ಕಾರಣ. ಬಿಜೆಪಿ ವರದಿ ಜಾರಿಗೊಳಿಸಿ ಸಾವಿರಾರು ಗ್ರಾಮಗಳ ಜನರ ಕಿವಿಗೆ ಹೂವಿಡಲು ಹೊರಟಿದೆ ಎಂದು ಕಿಡಿಕಾರಿದರು. ಮುಖಂಡರಾದ ದೀಪಕ್ ಸಿಂಗ್, ರಮೇಶ್ ಇಕ್ಕೇರಿ, ಧರ್ಮರಾಜ್, ಜಿ.ಡಿ.ಮಂಜುನಾಥ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts