More

    ಕಾಶೀ ಗುರುಕುಲ ಶತಮಾನೋತ್ಸವ: ಸಮಾರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ

    ವಿದ್ಯೆಯನ್ನು ಬಯಸುವವರಿಗೆ ಅದನ್ನು ನೀಡಿ ಅವರ ಬಾಳನ್ನು ಉಜ್ವಲಗೊಳಿಸುವುದು ಗುರುಕುಲಗಳ ಉದ್ದೇಶ. ಅಂಥವುಗಳಲ್ಲೊಂದು ಕಾಶೀ ಜ್ಞಾನಪೀಠದಲ್ಲಿರುವ ಜಗದ್ಗುರು ಶ್ರೀ ವಿಶ್ವಾರಾಧ್ಯ ಗುರುಕುಲ. ಗುರುಕುಲದ ಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ನಡೆಯುತ್ತಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.

    ‘ಮಠಃ ಛಾತ್ರಾದಿ ನಿಲಯಃ’ ಅಂದರೆ ‘ಎಲ್ಲಿ ವಿದ್ಯಾರ್ಥಿಗಳು ಓಡಾಡುತ್ತಿರುತ್ತಾರೋ ಅದೇ ಮಠ’ ಎಂಬ ಮಾತಿಗೆ ಪೂರಕವೆಂಬಂತೆ ದೇಶಾದ್ಯಂತ ಇರುವ ಮಠ-ಪೀಠಗಳು ಗುರುಕುಲಗಳನ್ನು ಸ್ಥಾಪಿಸಿ ಅನಾದಿಕಾಲದಿಂದ ಜ್ಞಾನಪ್ರಸಾರವನ್ನು ಮಾಡುತ್ತ ಬಂದಿವೆ. ಅವುಗಳಲ್ಲಿ ಕಾಶೀ ಜ್ಞಾನಪೀಠದಲ್ಲಿರುವ ಜಗದ್ಗುರು ಶ್ರೀ ವಿಶ್ವಾರಾಧ್ಯ ಗುರುಕುಲವೂ ಒಂದು. ಸದ್ಯ ಗುರುಕುಲದ ಶತಮಾನೋತ್ಸವ ಸಮಾರಂಭ ವಿಜೃಂಭಣೆಯಿಂದ ನಡೆಯುತ್ತಿದೆ.

    ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸವಿರುವ ಕಾಶೀಪೀಠದ ಗುರುಕುಲವು ಪ್ರಾಚೀನಕಾಲದಿಂದ ಜ್ಞಾನಪ್ರಸಾರವನ್ನು ಮಾಡುತ್ತ ಬಂದಿದೆ. ಜಗದ್ಗುರು ವಿಶ್ವಕರ್ಣ ಭಗವತ್ಪಾದರಿಂದ ಉಪದೇಶವನ್ನು ಸ್ವೀಕರಿಸಿದ ದುರ್ವಾಸಮುನಿ ಗುರುಕುಲದ ಪ್ರಪ್ರಥಮ ವಿದ್ಯಾರ್ಥಿ. ಈ ಗುರುಕುಲಕ್ಕೆ 1918ರಲ್ಲಿ ತತ್ಕಾಲೀನ ಜಗದ್ಗುರು ಪಂಚಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ಜಗದ್ಗುರು ಶ್ರೀ ವಿಶ್ವಾರಾಧ್ಯ ಗುರುಕುಲ ಎಂದು ನಾಮಕರಣ ಮಾಡಲಾಯಿತು. ಆ ಹಿನ್ನೆಲೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

    ಕಾಶಿಯನ್ನು ಜ್ಞಾನದ ತವರು ಎಂದು ಕರೆಯಲಾಗುತ್ತದೆ. ಈ ಮಾತಿಗೆ ಪೂರಕವೆಂಬಂತೆ ಜ್ಞಾನಸಿಂಹಾಸನ ಕಾಶೀಪೀಠವು ಜ್ಞಾನಪ್ರಸಾರಕ್ಕೆ ಹೆಚ್ಚಿನ ಒತ್ತು ನೀಡಿದೆ. ಗುರುಕುಲ ಮಾತ್ರವಲ್ಲದೆ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲೂ ಪೀಠದ ಪಾತ್ರ ಪ್ರಮುಖವಾದುದು. ಭಾರತರತ್ನ ಪಂಡಿತ್ ಮದನಮೋಹನ ಮಾಲವೀಯರು 1916ರಲ್ಲಿ ಹಿಂದೂ ವಿಶ್ವವಿದ್ಯಾಲಯ ಸ್ಥಾಪಿಸುವ ಕಾಲಕ್ಕೆ ಅಂದಿನ ಜಗದ್ಗುರು ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳನ್ನು ಸಂರ್ಪಸಿ ಭೂದಾನ ಮಾಡುವಂತೆ ಮನವಿ ಮಾಡಿದಾಗ; ಅವರು 75 ಎಕರೆ ಭೂಮಿಯನ್ನು ನೀಡಿ ಆಶೀರ್ವದಿಸಿದ್ದರು. ವಿಶ್ವವಿದ್ಯಾಲಯದ ಆವರಣದಲ್ಲಿ ಇಂದಿಗೂ ಲಿಂಗೈಕ್ಯ ಜಗದ್ಗುರುಗಳ ಗದ್ದುಗೆ ಇದೆ.

    ದೇಶದ ಮೂಲೆಮೂಲೆಗಳಿಂದ ಜ್ಞಾನಾರ್ಜನೆಗಾಗಿ ಬಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕಾಶೀಪೀಠ ಯಾವುದೇ ಜಾತಿ, ಭಾಷೆ, ಪ್ರದೇಶ ಎಂಬ ಭೇದವಿಲ್ಲದೆ ಅನ್ನ, ವಸ್ತ್ರ, ವಸತಿಯನ್ನು ನೀಡಿ ವಿದ್ಯಾದಾನ ಮಾಡಿದೆ. ಇಲ್ಲಿ ಕಲಿತ ವಟುಗಳು ದೇಶದ ವಿವಿಧ ಪ್ರಾಂತಗಳಲ್ಲಿರುವ ವಿವಿಧ ಸಂಪ್ರದಾಯದ ಮಠಗಳಲ್ಲಿ ಸ್ವಾಮಿಗಳಾಗಿ, ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿ ಪ್ರಖ್ಯಾತರಾಗಿದ್ದಾರೆ.

    ಕಾಶಿಯಲ್ಲಿ ವೀರಶೈವ ಮಹಾಕುಂಭ: ಗುರುಕುಲ ಶತಮಾನೋತ್ಸವದ ಅಂಗವಾಗಿ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಜ. 15ರ ಮಕರ ಸಂಕ್ರಾಂತಿಯಿಂದ ಫೆ. 21ರ ಮಹಾ ಶಿವರಾತ್ರಿಯವರೆಗೆ ‘ವೀರಶೈವ ಮಹಾಕುಂಭ’ ಎಂಬ ವಿಶಿಷ್ಟವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

    ‘ಕುಂಭ’ ಎಂದರೆ ಕಲಶ; ‘ಮೇಳ’ ಎಂದರೆ ಜನಸಾಗರ ಎಂಬರ್ಥವಿದ್ದು, ಅದನ್ನೇ ಕುಂಭಮೇಳ ಎಂದು ಕರೆಯುತ್ತಾರೆ. ಈ ಹಿನ್ನೆಲೆಯಲ್ಲಿ ಗುರುಕುಲ ಶತಮಾನೋತ್ಸವದ ಸಂದರ್ಭದಲ್ಲಿ ವೀರಶೈವಸಂಸ್ಕೃತಿಯನ್ನು ಮೇಳೈಸುವ ‘ವೀರಶೈವ ಮಹಾಕುಂಭ’ ಎಂಬ 36 ದಿನಗಳ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

    ಸಾಹಿತ್ಯ, ಸಂಗೀತ, ಸಂಸ್ಕೃತಿ ಸೇರಿದಂತೆ ಧಾರ್ವಿುಕ, ಸಾಂಸ್ಕೃತಿಕ ಮಹಾಮೇಳದಲ್ಲಿ ಪ್ರತಿದಿನ ದೇಶದ ವಿವಿಧ ಪ್ರಾಂತಗಳಿಂದ ಆಗಮಿಸಿರುವ 4-5 ಸಾವಿರ ಜನ ಪಾಲ್ಗೊಳ್ಳುತ್ತಿದ್ದಾರೆ. ಇಲ್ಲಿಯವರಗೆ ಗುರುಕುಲದಲ್ಲಿ ಅಧ್ಯಯನ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಲಿಂಗೈಕ್ಯರಾಗಿರುವವರ ಸ್ಮರಣೆ, ಇಂದಿಗೂ ಸೇವೆ ಸಲ್ಲಿಸುತ್ತಿರುವವರನ್ನು ಗೌರವಿಸುವ ಕಾರ್ಯಕ್ರಮಗಳನ್ನು ಆಚರಿಸಲಾಗಿದೆ. ವೀರಶೈವಸಾಹಿತ್ಯವನ್ನು ವಿಶ್ವವ್ಯಾಪಿ ಪ್ರಸಾರ ಮಾಡುವ ಉದ್ದೇಶದಲ್ಲಿ ಸಾಹಿತ್ಯ ಸಮ್ಮೇಳನ, ಸಂಗೀತವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಶಾಸ್ತ್ರೀಯ, ಜನಪದ, ಭಜನೆ ಇತ್ಯಾದಿ ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಗಾನಸುಧೆ ಭಜನಾಮಂಡಳಿಯ ಸಮ್ಮೇಳನ ವಿಜೃಂಭಣೆಯಿಂದ ನಡೆಯಿತು. ವಿವಿಧ ಜನಪದ ಕಲಾವಿದರು ಸಮಾವೇಶದಲ್ಲಿ ಪಾಲ್ಗೊಂಡು ತಮ್ಮ ಕಲೆಯನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರಗನ್ನು ತಂದು ಕೊಟ್ಟಿದ್ದಾರೆ.

    ಹಲವು ಧಾರ್ವಿುಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಜಗದ್ಗುರು ವಿಶ್ವಾರಾಧ್ಯರ ಮೂರ್ತಿಗೆ ನಿತ್ಯ ಗಂಗಾನದಿಯಿಂದ ಪವಿತ್ರಜಲದಿಂದ ಮಹಾರುದ್ರಾಭಿಷೇಕ, ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ನಡೆಯುತ್ತಿದೆ. ಸಾಮಾಜಿಕವಾಗಿ ಶ್ರೀಪೀಠದ ಔದಾರ್ಯಕ್ಕೆ ಪ್ರತಿಯಾಗಿ ಬಂಜಾರ ಸಮುದಾಯದ ಬಾಂಧವರು ಆಗಮಿಸಿ ಜಗದ್ಗುರುಗಳೊಂದಿಗೆ ವಿಶ್ವನಾಥನಿಗೆ ಜಲಾಭಿಷೇಕ ಮಾಡಿ, ಪಾರಂಪರಿಕ ವೇಷಭೂಷಣದಲ್ಲಿ ಉತ್ಸವ ನಡೆಸಿದ್ದು ಗಮನಾರ್ಹ. ನಿರಂಜನಪೀಠದ ಹಲವು ಸ್ವಾಮಿಗಳ ಹಾಗೂ ಶಿವಾಚಾರ್ಯರ ಸಮ್ಮೇಳನ ವಿಶೇಷವಾಗಿತ್ತು. ಒಂದೇ ದಿನ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶ್ರೀ ಸಿದ್ಧಾಂತ ಶಿಖಾಮಣಿಯ 1405 ಶ್ಲೋಕಗಳ ಅಖಂಡ ಪಾರಾಯಣ ಮಾಡಿದ್ದು ಹೊಸ ದಾಖಲೆಯಾಗಿದೆ.

    ಕಾಶಿಪೀಠಕ್ಕೆ ನರೇಂದ್ರ ಮೋದಿ ಆಗಮನ: ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ವೀರಶೈವ ಮಹಾಕುಂಭವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಘಾಟಿಸಿದ್ದು, ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. 36 ದಿನಗಳ ವೀರಶೈವ ಮಹಾಕುಂಭ ಕಾರ್ಯಕ್ರಮದ ಪ್ರಮುಖ ಭಾಗವಾಗಿ ಫೆ. 15 ಮತ್ತು 16ರಂದು ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಕಲಬುರಗಿ ಜಿಲ್ಲೆಯ ಶಾಕಾಪುರ ಹಿರೇಮಠದ ಶ್ರೀ ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ 15ರಂದು ವಾರಣಾಸಿ ಪಟ್ಟಣದಲ್ಲಿ ಐತಿಹಾಸಿಕ ಜಗದ್ಗುರು ಶ್ರೀ ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ. 16ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ಜಗದ್ಗುರು ಶ್ರೀ ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಜಗದ್ಗುರು ಶ್ರೀ ಪಂಚಾಚಾರ್ಯರ ದಿವ್ಯಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ಭಾರತೀಯ ಹಾಗೂ ವಿದೇಶಿ ಭಾಷೆಗಳೂ ಸೇರಿ ಒಟ್ಟು 19 ಭಾಷೆಗಳಿಗೆ ಅನುವಾದಗೊಂಡಿರುವ ವೀರಶೈವ ಧರ್ಮಗ್ರಂಥ ಶ್ರೀ ಸಿದ್ಧಾಂತ ಶಿಖಾಮಣಿಯ ಉಚಿತ ಆಪ್ (ಇ-ಬುಕ್) ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಉತ್ತರಪ್ರದೇಶದ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯ ಮತ್ತು ಕೇಂದ್ರದ ಹಲವು ಮಂತ್ರಿಗಳು, ಸಂಸದರು, ಶಾಸಕರು, ವಿವಿಧ ಪ್ರಾಂತಗಳಿಂದ ಆಗಮಿಸುವ ಸ್ವಾಮೀಜಿಗಳು ಹಾಗೂ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ.

     | ಪ್ರಶಾಂತ್​ ರಿಪ್ಪನ್​ಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts