More

    ದ.ಕ., ಉಡುಪಿ ನಿರಾಳ, ಕಾಸರಗೋಡಿನಲ್ಲಿ ಒಂದು ಪ್ರಕರಣ ಪಾಸಿಟಿವ್

    ಮಂಗಳೂರು/ ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊವಿಡ್ ಹರಡುವ ಭಯ ನಿಧಾನವಾಗಿ ಇಳಿಮುಖವಾಗುತ್ತಿದೆ. ನಾಲ್ಕು ದಿನಗಳಿಂದ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

    ಬುಧವಾರ ಬಂದಿರುವ ಎಲ್ಲ ಏಳು ವರದಿಗಳೂ ನೆಗೆಟಿವ್ ಆಗಿವೆ. ಇನ್ನೊಂದೆಡೆ ಮನೆಯಲ್ಲೇ ಕ್ವಾರಂಟೈನ್ ಆಗಿರುವವರ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಏಪ್ರಿಲ್ 1ರಂದು ಮನೆ ದಿಗ್ಬಂಧನದಲ್ಲಿದ್ದವರ ಸಂಖ್ಯೆ 5870 ಆಗಿದ್ದರೆ ಪ್ರಸ್ತುತ ಅದು 3930ಕ್ಕೆ ಇಳಿದಿದೆ. 2311 ಮಂದಿ ಇದುವರೆಗೆ ಮನೆ ದಿಗ್ಬಂಧನ ಪೂರ್ಣಗೊಳಿಸಿದ್ದು, ರೋಗ ಲಕ್ಷಣ ಪತ್ತೆಯಾಗಿಲ್ಲ. ಬುಧವಾರ 20 ಮಂದಿಯನ್ನು ಸ್ಕ್ರೀನಿಂಗ್ ನಡೆಸಲಾಗಿದ್ದು ಒಟ್ಟು 15 ಮಂದಿಯನ್ನು ನಿಗಾ ಇರಿಸುವುದಕ್ಕಾಗಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ.

    ಉಡುಪಿಯಲ್ಲಿ 53 ವರದಿ ನೆಗೆಟಿವ್: ಉಡುಪಿ ಜಿಲ್ಲೆಯಲ್ಲಿ ಬುಧವಾರ ಆರು ಮಂದಿಯನ್ನು ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದ್ದು, ಆರು ಮಂದಿ ಬಿಡುಗಡೆಯಾಗಿದ್ದಾರೆ. 53 ಶಂಕಿತರ ವರದಿ ವೈದ್ಯರ ಕೈ ಸೇರಿದ್ದು, ಎಲ್ಲವೂ ನೆಗೆಟಿವ್ ಬಂದಿದೆ. ಮೂವರ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇಲ್ಲಿವರೆಗೆ ಕಳುಹಿಸಿದ ಮಾದರಿಗಳಲ್ಲಿ 14 ಮಂದಿಯ ವರದಿ ಬರಲು ಬಾಕಿಯಿದೆ.
    ಬುಧವಾರ 28 ಮಂದಿ ನೋಂದಣಿ ಮಾಡಿಕೊಂಡಿದ್ದು, 67 ಮಂದಿ 28 ದಿನಗಳ ನಿಗಾ ಹಾಗೂ 19 ಮಂದಿ 14 ದಿನಗಳ ನಿಗಾ ಪೂರೈಸಿದ್ದಾರೆ.

    ಒಟ್ಟು 152 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. 13 ಮಂದಿ ಹಾಸ್ಪಿಟಲ್ ಕ್ವಾರಂಟೈನ್‌ನಲ್ಲಿದ್ದಾರೆ. ಐಸೋಲೇಷನ್‌ಗೆ ದಾಖಲಾದವರಲ್ಲಿ 4 ಮಂದಿ(ಓರ್ವ ಪುರುಷ, ಮೂವರು ಮಹಿಳೆ) ತೀವ್ರ ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದಾರೆ. ಇಬ್ಬರು ಪುರುಷರು ಶಂಕಿತ ಕರೊನಾ ರೋಗಿಗಳಾಗಿದ್ದಾರೆ. ಪಾಸಿಟಿವ್ ಪ್ರಕರಣದ ಮೊದಲ ರೋಗಿಯ ಗಂಟಲು ದ್ರವ ಮಾದರಿ ವರದಿ ಬಂದಿದ್ದು, ನೆಗಟಿವ್ ಎಂದು ದಾಖಲಾಗಿದೆ. ಬುಧವಾರ 2ನೇ ವರದಿಗಾಗಿ ಮತ್ತೆ ಆತನ ಗಂಟಲು ದ್ರವ ಮಾದರಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

    ಕಾಸರಗೋಡಲ್ಲಿ ಮತ್ತೆ ಒಬ್ಬನಿಗೆ ಸೋಂಕು: ಕೇರಳದಲ್ಲಿ ಬುಧವಾರ ಹೊಸದಾಗಿ 9 ಮಂದಿಯಲ್ಲಿ ಕರೊನಾ ಸೋಂಕು ಖಚಿತಗೊಂಡಿದೆ. ಇವರಲ್ಲಿ ನಾಲ್ವರು ವಿದೇಶದಿಂದ ಆಗಮಿಸಿದವರಾಗಿದ್ದು, ಇಬ್ಬರು ದೆಹಲಿ ನಿಜಾಮುದ್ದೀನ್ ಸಮ್ಮೇಳನದಲ್ಲಿ ಪಾಲ್ಗೊಂಡವರು. ಇತರ ಮೂವರಿಗೆ ಸಂಪರ್ಕದಿಂದ ವೈರಸ್ ತಗುಲಿದೆ. ಕಣ್ಣೂರು 4, ಆಲಪ್ಪುಳ 2, ಕಾಸರಗೋಡು, ಪತ್ತನಂತಿಟ್ಟ ಹಾಗೂ ತ್ರಿಶ್ಯೂರ್ ಜಿಲ್ಲೆಯಲ್ಲಿ ತಲಾ ಒಬ್ಬರಲ್ಲಿ ವೈರಸ್ ಪತ್ತೆಯಾಗಿದೆ.

    ಬುಧವಾರ ಒಂದೇ ದಿನ 169 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕೊವಿಡ್ ಬಾಧಿತರ ಸಂಖ್ಯೆ 138ಕ್ಕೇರಿದೆ. ಜಿಲ್ಲೆಯಲ್ಲಿ 10,563 ಮಂದಿ ನಿಗಾದಲ್ಲಿದ್ದಾರೆ. ಈವರೆಗೆ 1384 ಸ್ಯಾಂಪಲ್‌ಗಳನ್ನು ತಪಾಸಣೆಗೆ ರವಾನಿಸಲಾಗಿದ್ದು, 1001 ಸ್ಯಾಂಪಲ್‌ಗಳ ಫಲಿತಾಂಶ ಲಭಿಸಿದೆ. 383 ಮಂದಿಯ ಫಲಿತಾಂಶ ಲಭಿಸಬೇಕಿದೆ. ನೂತನವಾಗಿ 35 ಮಂದಿಯನ್ನು ಐಸೋಲೇಷನ್ ವಾರ್ಡ್‌ಗಳಿಗೆ ರವಾನಿಸಲಾಗಿದೆ.

    ಕೇರಳದವರಿಗೆ ಕೆ.ಎಸ್.ಹೆಗ್ಡೆ: ತಲಪಾಡಿಯ ಅಂತಾರಾಜ್ಯ ಗಡಿಯನ್ನು ಕೇರಳದಿಂದ ಬರುವ ಎಮರ್ಜೆನ್ಸಿ ರೋಗಿಗಳಿಗೆ ತೆರವು ಮಾಡುವ ಆದೇಶ ಜಾರಿಯಾಗಿದ್ದು ಮೊದಲ ದಿನ ಬುಧವಾರ ಮೂವರು ರೋಗಿಗಳು ಆಗಮಿಸಿದ್ದಾರೆ. ಆದರೆ ರೋಗಿಗಳಿಗೆ ತಮಗೆ ಬೇಕಾದ ಆಸ್ಪತ್ರೆಗೆ ಹೋಗುವುದಕ್ಕೆ ಅವಕಾಶ ನೀಡಿಲ್ಲ. ನಿಗಾ ಇರಿಸುವುದಕ್ಕೆ ಸುಲಭ ಎನ್ನುವ ಕಾರಣದಿಂದ ಸದ್ಯಕ್ಕೆ ಅವರಿಗೆ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗಷ್ಟೇ ಹೋಗಲು ಅವಕಾಶ ನೀಡಲಾಗಿದೆ. ಮಹಿಳಾ ರೋಗಿಯೊಬ್ಬರು ಇಂಡಿಯಾನಾ ಆಸ್ಪತ್ರೆಗೆ ಹೋಗ ಬಯಸಿದ್ದರು. ಆದರೆ ಅವರನ್ನು ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಆ ಆಸ್ಪತ್ರೆಯಲ್ಲಿ ಬೇಕಾದ ಎಲ್ಲ ವ್ಯವಸ್ಥೆಯನ್ನೂ ಮಾಡಲಾಗಿದೆ.

    ಫೀವರ್ ಕ್ಲಿನಿಕ್: ಸಾರ್ವಜನಿಕರು ಕೊವಿಡ್ ಲಕ್ಷಣಗಳಾದ ಗಂಟಲು ನೋವು, ತಲೆನೋವು, ಜ್ವರ ಇತ್ಯಾದಿ ಲಕ್ಷಣಗಳಿದ್ದರೆ ನೇರವಾಗಿ ಸರ್ಕಾರ ಅಧಿಕೃತವಾಗಿ ಘೋಷಿಸಿದರುವ ಫೀವರ್ ಕ್ಲಿನಿಕ್‌ಗಳಿಗೆ ತೆರಳಬಹುದು. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕು ಆಸ್ಪತ್ರೆಗಳು, ಜಿಲ್ಲೆಯ ಎಂಟು ಮೆಡಿಕಲ್ ಕಾಲೇಜುಗಳಾದ ಎ.ಜೆ. ವೈದ್ಯಕೀಯ ಕಾಲೇಜು, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಕಂಕನಾಡಿ, ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಅತ್ತಾವರ, ದೇರಳಕಟ್ಟೆ ಯೇನೆಪೋಯ ವೈದ್ಯಕೀಯ ಕಾಲೇಜು, ಮಂಗಳೂರು ಮುಕ್ಕದ ಶ್ರೀನಿವಾಸ ವೈದ್ಯಕೀಯ ಕಾಲೇಜು, ದೇರಳಕಟ್ಟೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜು, ಸುಳ್ಯ ಕೆ.ವಿ.ಜಿ. ವೈದ್ಯಕೀಯ ಕಾಲೇಜು, ಕಣಚೂರು ವೈದ್ಯಕೀಯ ಕಾಲೇಜು, ಹಾಗೂ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗಳಲ್ಲಿ ಈ ಜ್ವರ ಚಿಕಿತ್ಸಾಲಯಗಳನ್ನು ತೆರೆಯಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts