More

    ಸಕ್ಕರೆನಾಡಲ್ಲಿ ಅಕ್ಷರಜಾತ್ರೆಯ ಸಂಭ್ರಮ: ಗಮನ ಸೆಳೆದ ಮಂಡ್ಯ ನಗರ 5ನೇ ಸಮ್ಮೇಳನ

    ಮಂಡ್ಯ: ಮಂಡ್ಯ ನಗರ ಕನ್ನಡ ಸಾಹಿತ್ಯ ಪರಿಷತ್‌ನಿಂದ ಬುಧವಾರ ಆಯೋಜಿಸಿದ್ದ 5ನೇ ನಗರ ಸಾಹಿತ್ಯ ಸಮ್ಮೇಳನ ಸಂಭ್ರಮದಿಂದ ನಡೆಯಿತು.
    ಯುವ ಸಾಹಿತಿ ಡಾ.ಎಚ್.ಆರ್. ಕನ್ನಿಕಾ ಅಧ್ಯಕ್ಷತೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಸಮ್ಮೇಳನ ಹಲವು ವಿಷಯಗಳಿಂದ ಗಮನ ಸೆಳೆಯಿತು. ಸಾಹಿತ್ಯವನ್ನು ಪಸರಿಸುವುದರ ಜತೆಗೆ, ಸಾರ್ವಜನಿಕರಿಗೆ ಅನುಕೂಲ ಮಾಡುವ ಉದ್ದೇಶದಿಂದ ಆರೋಗ್ಯ ಉಚಿತ ತಪಾಸಣಾ ಶಿಬಿರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿವಿಧೆಡೆಯಿಂದ ಹೆಚ್ಚಿನ ಜನರು ಆಗಮಿಸಿ ಆರೋಗ್ಯ ತಪಾಸಣೆಗೊಳಪಟ್ಟರು.
    ಬೆಳಗ್ಗೆ ಅಂಬೇಡ್ಕರ್ ಭವನದ ಆವರಣದಲ್ಲಿ ಜಿಪಂ ಸಿಇಒ ಶಾಂತಾ ಎಲ್. ಹುಲ್ಮನಿ ರಾಷ್ಟ್ರಧ್ವಜವನ್ನು, ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ನಾಡಧ್ವಜ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ. ರವಿಕುಮಾರ ಚಾಮಲಾಪುರ ಪರಿಷತ್ ಧ್ವಜಾರೋಹಣಗೊಳಿಸಿದರು. ಬಳಿಕ ರೈತ ಸಭಾಂಗಣದ ಆವರಣದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಸಾಹಿತಿ ಡಾ.ಪ್ರದೀಪಕುಮಾರ್ ಹೆಬ್ರಿ ಚಾಲನೆ ನೀಡಿದರು. ನಂತರ ಎಂ.ಸಿ. ರಸ್ತೆ, ವಿ.ವಿ. ರಸ್ತೆ, ನೂರಡಿ ರಸ್ತೆ, ಆರ್.ಪಿ. ರಸ್ತೆ ಮೂಲಕ ಅಂಬೇಡ್ಕರ್ ಭವನ ತಲುಪಿತು. ಈ ವೇಳೆ ಜಾನಪದ ಕಲಾತಂಡಗಳು, ಕಳಸ ಹೊತ್ತ ಮಹಿಳೆಯರು, ಕನ್ನಡದ ಬಾವುಟ ಹಿಡಿದ ವಿದ್ಯಾರ್ಥಿಗಳು ಸಾಥ್ ನೀಡಿದರು.
    ಸಮ್ಮೇಳನದ ಅಂಗವಾಗಿ ಬೆಂಗಳೂರು ಕಿದ್ವಾಯಿ ಆಸ್ಪತ್ರೆ ವತಿಯಿಂದ ಸ್ತ್ರೀಯರಿಗೆ ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶ ಕ್ಯಾನ್ಸರ್ ತಪಾಸಣೆ, ಬೆಂಗಳೂರು ಕಿಮ್ಸ್ ಆಸ್ಪತ್ರೆ ವತಿಯಿಂದ ಕಣ್ಣು ಮತ್ತು ದಂತ ತಪಾಸಣೆ, ಮಂಡ್ಯ ಎಸ್.ಡಿ. ಜಯರಾಂ ಆಸ್ಪತ್ರೆ ವತಿಯಿಂದ ಪೈಲ್ಸ್(ಮೊಳೆರೋಗ), ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ತಪಾಸಣೆ ಆಯೋಜಿಸಲಾಗಿತ್ತು. ಇದಕ್ಕಾಗಿ ಜನರು ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಾಲುಗಟ್ಟಿ ನಿಂತು ಸೌಲಭ್ಯ ಪಡೆದುಕೊಂಡರು. ಇದಲ್ಲದೆ ವೇದಿಕೆಯಲ್ಲಿ ಸಿದ್ದಪ್ಪಾಜಿ ಕಥಾ ಪ್ರಸಂಗ, ವಿಶೇಷ ಉಪನ್ಯಾಸ, ಹಾಸ್ಯಗೋಷ್ಠಿ, ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಸನ್ಮಾನ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಪತ್ರಕರ್ತ ಹೊಳಲು ಶ್ರೀಧರ್ ಅವರ ‘ಪದ ಸಂಚಯ’ ಕೃತಿ ಹಾಗೂ ಸಮ್ಮೇಳನಾಧ್ಯಕ್ಷೆ ಎಚ್.ಆರ್. ಕನ್ನಿಕಾ ಅವರ ‘ಹಣತೆ’ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts