More

    ಸಾಹಿತ್ಯ ಸಮ್ಮೇಳನ ಯಾವಾಗ ನಡೆಯುತ್ತೆ ನನಗೇ ಗೊತ್ತಿಲ್ಲ; ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ತೀವ್ರ ಅಸಮಾಧಾನ

    ಹಾವೇರಿ: ಜಿಲ್ಲೆಯಲ್ಲಿ ನಡೆಯಬೇಕಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಕೇವಲ ಒಂದು ತಿಂಗಳು ಬಾಕಿ ಉಳಿದಿದೆ. ಹೀಗಿದ್ದರೂ ಅಗತ್ಯ ತಯಾರಿ ಈವರೆಗೆ ಆರಂಭವಾಗಿಲ್ಲ. ಸಮ್ಮೇಳನ ಯಾವಾಗ ನಡೆಯುತ್ತದೆ ಎಂಬುದೇ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುತ್ತಿಲ್ಲ. ಸಿಎಂ ಹಾಗೂ ನನ್ನ ತವರು ಜಿಲ್ಲೆಯಲ್ಲೇ ಈ ಸ್ಥಿತಿ ಬಂದಿರುವುದು ನಮ್ಮ ದೌರ್ಭಾಗ್ಯ ಎಂದು ಕನ್ನಡ‌ ಸಾಹಿತ್ಯ ಪರಿಷತ್ ನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಮಾಧ್ಯಮದ ಎದುರು ನೋವು ತೋಡಿಕೊಂಡರು.

    ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.11, 12, 13ರಂದು ಸಾಹಿತ್ಯ ಸಮ್ಮೇಳನ ನಡೆಸುವುದಾಗಿ ಈಗಾಗಲೇ ಘೋಷಿಸಲಾಗಿದೆ. ಆದರೆ, ಈಗಾಗಲೇ ಲಾಂಛನ ಬಿಡುಗಡೆಯಾಗಬೇಕಿತ್ತು. ಸ್ಥಳ ನಿಗದಿ ಹಾಗೂ ಸಮಿತಿಗಳ ಕಾರ್ಯ ಚಟುವಟಿಕೆಗಳು ನಡೆಯಬೇಕಿತ್ತು. ಆದರೆ, ಈವರೆಗೆ ಈ ಯಾವುದೇ ಚುಟುವಟಿಗಳು ನಡೆಯುತ್ತಿಲ್ಲ.

    ಸಮ್ಮೇಳನ ಪೂರ್ವಬಾವಿಯಾಗಿ ಸಿಎಂ ನಾಲ್ಕು ಬಾರಿ ಸಭೆ ಕರೆದು, ಮುಂದೂಡಿದ್ದಾರೆ. ಈವರೆಗೆ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಜಿಲ್ಲಾಡಳಿತ ಸಿಎಂ ಸೂಚನೆಗೆ ಕಾಯುತ್ತಿದೆ. ಒಂದು ತಿಂಗಳ ಅವಧಿಯಲ್ಲಿ ಈ ಸಮ್ಮೇಳನ ನಡೆಯುತ್ತದೆಯೋ ಇಲ್ಲವೋ ಎಂಬ ಅನಿಶ್ಚಿತತೆ ಕಾಡುತ್ತಿದೆ. ಕಸಾಪ ಅಧ್ಯಕ್ಷನಾಗಿ, ಇದೇ ಜಿಲ್ಲೆಯವನಾಗಿ ನಮಗೆ ಈ ಸ್ಥಿತಿ ಬಂದಿರುವುದು ತೀವ್ರ ನೋವು ತಂದಿದೆ.

    ಈ ದಿನಾಂಕದಲ್ಲಿ ಸಮ್ಮೇಳನ ತಯಾರಿ‌ ಕಷ್ಟ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳುತ್ತಾರೆ. ಅದೇ ದಿನಾಂಕದಲ್ಲಿ ಸಮ್ಮೇಳನ ಮಾಡುವುದಾಗಿ ಸಿಎಂ ಹೇಳಿಕೊಂಡಿದ್ದಾರೆ. ಆದರೆ, ಈವರೆಗೆ ಯಾವುದೇ ತಯಾರಿ, ಪೂರ್ವಬಾವಿ ಸಭೆ ನಡೆದಿಲ್ಲ.

    ಕನ್ನಡಿಗರ ಸ್ವಾಭಿಮಾನದ ಸಂಕೇತ ಕಸಾಪ ಇದನ್ನು ಕಡೆಗಣಿಸದೆ ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಕಸಾಪ ಅಧ್ಯಕ್ಷನಾಗಿ ನನಗೆ ಈ ಬಗ್ಗೆ ತುಂಬ ನೋವಿದೆ. ಸ್ಪಷ್ಟ ನಿಲುವು ತೆಗೆದುಕೊಂಡು ಸಮ್ಮೇಳನ ಮಾಡಬೇಕು. ಈ ದಿನಾಂಕದಲ್ಲಿ ಸಮ್ಮೇಳನ ನಡೆಸಲು ಸಮಯವಿಲ್ಲ.

    ಜಿಲ್ಲಾಡಳಿತಕ್ಕೆ ಸೂಚಿಸಿ, ಯಾರಿಗಾದರೂ ಜವಾಬ್ದಾರಿ ಕೊಡಿ ನಾವು ಎಲ್ಲ ತಯಾರಿ ಮಾಡುತ್ತೇವೆ ಎಂದು ಸಿಎಂಗೆ ಮನವಿ‌ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಡಾ.ಮಹೇಶ ಜೋಶಿ ತೀವ್ರ ಬೇಸರ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts