More

    ಕನ್ನಡವನ್ನು ಬೆಳೆಸಿದ ಗ್ರಾಮೀಣರು: ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿಕೆ

    ಮಂಡ್ಯ: ಕನ್ನಡ ಭಾಷೆಯನ್ನು ಬೆಳೆಸಿದವರು ಗ್ರಾಮೀಣರು ಎಂದು ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅಭಿಪ್ರಾಯಪಟ್ಟರು.
    ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ಮೂರು ದಿನದ ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.
    ಆಂಗ್ಲ ಭಾಷೆ ಅಂಬೆಗಾಲಿಡುತ್ತಿದ್ದ ಸಂದರ್ಭದಲ್ಲಿ ನಮ್ಮ ಗ್ರಾಮೀಣರು ಕನ್ನಡದಲ್ಲಿ ಗಿಡ-ಮರಗಳಿಗೆ ಸಾವಿರಾರು ಹೆಸರಿಟ್ಟಿದ್ದರು. ಅಳತೆಯ ಮಾನಗಳನ್ನು ಹಲವಾರು ಹೆಸರುಗಳಿಂದ ರೂಪಿಸಿದ್ದರು. ಜನಪದರು ತಮ್ಮ ತನುಮನದಲ್ಲಿ ಕನ್ನಡವನ್ನು ಉಸಿರಾಡುತ್ತಿದ್ದರು. ಇದು ನಿಜವಾಗಿ ಗ್ರಾಮೀಣರು ಕನ್ನಡಕ್ಕೆ ಕೊಟ್ಟ ಕೊಡುಗೆ ಎಂದು ಬಣ್ಣಿಸಿದರು.
    ಕಥೆ-ಕಾದಂಬರಿ ಬರೆಯುವುದರಿಂದ ಕನ್ನಡ ಉಳಿಯುವುದಿಲ್ಲ. ಬದಲಿಗೆ ಜನರ ಬದುಕಿನ ಎಲ್ಲ ಆಯಾಮಗಳಲ್ಲಿ ಕನ್ನಡ ಅನುಷ್ಠಾನವಾದಾಗ ಮಾತ್ರ ಕನ್ನಡ ಉಳಿಯುತ್ತದೆ ಎಂದು ತೇಜಸ್ವಿ ಹೇಳಿದ್ದರು. ಜಗತ್ತಿನ 30 ಸುಂದರ ಭಾಷೆಗಳಲ್ಲಿ ಕನ್ನಡವು ಸಹ ಒಂದಾಗಿದೆ. 13 ಭಾಷೆಗಳನ್ನು ಬಲ್ಲವರಾಗಿದ್ದ ವಿನೋಬಾ ಭಾವೆ ಕನ್ನಡವನ್ನು ಲಿಪಿಗಳ ರಾಣಿ ಎಂದಿರುವುದು ಅತಿಶಯೋಕ್ತಿಯಲ್ಲ. ಯಾವ ದೇಶ ತನ್ನದೇ ಭಾಷೆ, ಸಂಸ್ಕೃತಿಯನ್ನು ಆರಾಧಿಸುವುದಿಲ್ಲವೋ ಅದು ಸ್ವಾಭಿಮಾನದ ದೇಶವಾಗುವುದಿಲ್ಲ ಎಂದು ಗಾಂಧೀಜಿ ಹೇಳಿದ್ದರು. ಅಂತಹ ಸ್ವಾಭಿಮಾನವನ್ನು ನಾವು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
    ಆಂಗ್ಲ ಭಾಷೆ ಅತಾರ್ಕಿಕ, ಅಸಂಗತ ಭಾಷೆ. ಉಚ್ಚರಿಸುವುದಕ್ಕೂ ಬರೆಯುವುದಕ್ಕೂ ತುಂಬ ವ್ಯತ್ಯಾಸವಿದೆ ಎಂದು ಹಲವು ಉದಾಹರಣೆಗಳ ಮೂಲಕ ಸ್ಪಷ್ಟಪಡಿಸಿದರು. ಇನ್ನು ಆಂಗ್ಲ ಓದಿದರೆ ಕೆಲಸ ಸಿಗುತ್ತದೆ. ಎಲ್ಲಿ ಬೇಕಾದರೂ ಬದುಕಬಹುದು ಎಂಬುದು ದೊಡ್ಡ ಭ್ರಮೆ. ಫ್ರಾನ್ಸ್ ಮತ್ತು ಜರ್ಮನಿಗಳು ಸೇರಿದಂತೆ ಅನೇಕ ದೇಶಗಳು ಆಂಗ್ಲ ಭಾಷೆಯ ಆಸರೆಯಿಲ್ಲದೆ ಬದುಕುತ್ತಿವೆ ಎಂದು ಹೇಳಿದರು.
    ಎಸ್.ಬಿ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಮಾತನಾಡಿ, ಕನ್ನಡ ಭಾಷೆಗೆ ಉನ್ನತ ಶಕ್ತಿಯಿದೆ. ಭಾಷೆಯ ಬೆಳವಣಿಗೆ ಸಾಹಿತ್ಯದ ಅಳತೆಗೋಲಾಗಿದೆ. ಸಾಹಿತ್ಯ ಬೆಳೆಯಲು ಭಾಷೆಯ ಪ್ರಭುತ್ವದ ಅವಶ್ಯಕತೆಯಿದೆ. ಹಿತಮಿತವಾದ ಅನುಭವವನ್ನು ಜನಮನದ ಅಂತರಂಗ ಮಿಡಿಯುವಂತೆ ಕೊಡುವ ಶಕ್ತಿ ಮಾತೃಭಾಷೆಗಿದೆ. ಸಾಹಿತಿ ಮತ್ತು ವಾಚಕರ ಹೃದಯಕ್ಕೆ ಸಮಾನವಾದ ಸಹಯೋಗವಾದಾಗ ಸಾಹಿತ್ಯದ ಸಾರ್ಥಕತೆ ಉಂಟಾಗುತ್ತದೆ. ನಮ್ಮ ಜನಮನದಲ್ಲಿ ಭಾಷೆಯ ಸಂಸ್ಕೃತಿ ಬೆಳೆದಾಗ ಕವಿಯ ಆಶಯ ಜನಮನಕ್ಕೆ ತಲುಪುತ್ತದೆ. ಸರ್ಕಾರ ಕನ್ನಡ ಆಡಳಿತ ಅನುಷ್ಠಾನಕ್ಕೆ ಹಲವು ಕಾನೂನುಗಳನ್ನು ರೂಪಿಸುತ್ತದೆ. ಕಾನೂನುಗಳಿಂದ ಭಾಷೆ ಬೆಳೆಸಲು ಸಾಧ್ಯವಿಲ್ಲ. ಬದಲಿಗೆ ಬಳಸಿದಾಗ ಮಾತ್ರ ಅದು ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
    ಕಾಂಗ್ರೆಸ್ ಮುಖಂಡ ರವಿಕುಮಾರ್ ಗಣಿಗ, ಜಿಲ್ಲಾ ಕಸಾಪ ಅಧ್ಯಕ್ಷ ಸಿ.ಕೆ.ರವಿಕುಮಾರ ಚಾಮಲಾಪುರ ಮಾತನಾಡಿದರು. ಕಸಾಪ ಪದಾಧಿಕಾರಿಗಳಾದ ಹುಸ್ಕೂರು ಕೃಷ್ಣೇಗೌಡ, ಧನಂಜಯ ದರಸಗುಪ್ಪೆ, ಮಂಜು ಮುತ್ತೇಗೆರೆ, ಸುಜಾತಾ ಕೃಷ್ಣ, ಎಂ.ಸಿ.ಭಾಸ್ಕರ, ಚಂದ್ರಲಿಂಗು, ಬಿ.ಎಂ.ಅಪ್ಪಾಜಪ್ಪ ಇತರರಿದ್ದರು.
    ರಾಜ್ಯೋತ್ಸವ ಪ್ರಶಸ್ತಿ ಪ್ರದಾನ:
    ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಟಿ.ಎನ್.ಧನಂಜಯ, ರಾಮನಂಜಯ್ಯ, ಆರ್.ಮಣಿ, ಕೆ.ಪುಟ್ಟೇಗೌಡ, ಕೆ.ನಾಗೇಶ, ಕೆ.ಚೇತನ್‌ಕೃಷ್ಣ, ಡಾ.ಎಂ.ಮಾಯಿಗೌಡ, ಎಂ.ಜಿ.ಮಹದೇವಪ್ಪ, ಎಂ.ವಾಸುದೇವ, ಎಂ.ಬಿ.ಶ್ರೀಧರ್, ಶಿವರಾಜು ಸೇರಿದಂತೆ 30ಕ್ಕೂ ಹೆಚ್ಚು ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಹಲವು ಶಾಲಾ- ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts