More

    13ನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಫೆ. 11, 12ರಂದು

    ರಾಣೆಬೆನ್ನೂರ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಫೆ. 11 ಮತ್ತು 12ರಂದು ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಪ್ರಕಾಶ ಕೋಳಿವಾಡ ತಿಳಿಸಿದರು.
    ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಸಮುದಾಯ ಭವನದಲ್ಲಿ ನಿರ್ಮಿಸಿದ ನಿಜಶರಣ ಅಂಬಿಗರ ಚೌಡಯ್ಯ, ಹೆಳವನಕಟ್ಟೆ ಗಿರಿಯಮ್ಮ, ಹಾನಗಲ್ಲ ಕುಮಾರ ಶಿವಯೋಗಿಗಳ ಪ್ರಧಾನ ವೇದಿಕೆಯಲ್ಲಿ ಸಮಾರಂಭ ಜರುಗಲಿದೆ ಎಂದರು.
    11ರಂದು ಬೆಳಗ್ಗೆ 7.30ಕ್ಕೆ ಧ್ವಜಾರೋಹಣ, 8 ಗಂಟೆಗೆ ನಗರದ ಸಿದ್ದೇಶ್ವರ ದೇವಸ್ಥಾನದಿಂದ ವೇದಿಕೆವರೆಗೆ ಸಮ್ಮೇಳಾಧ್ಯಕ್ಷ ಜಿ.ಎಂ. ಮಠದ ಅವರ ಮೆರವಣಿಗೆ ಜರುಗಲಿದೆ. ನಂತರ ಸಮ್ಮೇಳನದ ಉದ್ಘಾಟನೆ ಸಮಾರಂಭ ಜರುಗಲಿದ್ದು, ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಶಾಸಕ ಬಸವರಾಜ ಶಿವಣ್ಣನವರ ಪುಸ್ತಕ ಬಿಡುಗಡೆಗೊಳಿಸುವರು. ಚಿಕ್ಕಮಗಳೂರಿನ ಸಾಹಿತಿ ಡಾ. ಎಚ್.ಎಸ್. ಸತ್ಯನಾರಾಯಣ ವಿಶೇಷ ಉಪನ್ಯಾಸ ನೀಡುವರು ಎಂದು ತಿಳಿಸಿದರು.
    ಒಟ್ಟು 9 ಗೋಷ್ಠಿಗಳು ಸಮ್ಮೇಳನದಲ್ಲಿ ಜರುಗಲಿವೆ. ಮಧ್ಯಾಹ್ನ 1 ಗಂಟೆಗೆ ಕನ್ನಡ-ಕರ್ನಾಟಕ-ವೈಭವ ಗೋಷ್ಠಿ, 2.30ಕ್ಕೆ ಜಿಲ್ಲೆಯ ಗತ-ವೈಭವ ಗೋಷ್ಠಿ, ಸಂಜೆ 4.30ಕ್ಕೆ ಸಮ್ಮೇಳನಾಧ್ಯಕ್ಷರ ಜೀವನ-ಸಾಧನೆ ಗೋಷ್ಠಿ, 5 ಗಂಟೆಗೆ ಕವಿಗಳ ಕಲರವ ಗೋಷ್ಠಿ ನಡೆಯಲಿವೆ. ರಾತ್ರಿ 7 ಗಂಟೆಗೆ ಸಾಂಸ್ಕೃತಿಕ ಕಲರವ ಕಾರ್ಯಕ್ರಮ ಜರುಗಲಿದ್ದು, ವಿವಿಧ ಕಲಾತಂಡದವರು ನೃತ್ಯ, ಭರತನಾಟ್ಯ ಪ್ರದರ್ಶನ ಮಾಡಲಿದ್ದಾರೆ ಎಂದರು.
    12ರಂದು ಬೆಳಗ್ಗೆ 9 ಗಂಟೆಗೆ ಚಿಣ್ಣರ ಚಿಲಿಪಿಲಿ ಗೋಷ್ಠಿ, 10.30ಕ್ಕೆ ನಾರಿಶಕ್ತಿ-ಧೀಶಕ್ತಿ ಗೋಷ್ಠಿ, ಮಧ್ಯಾಹ್ನ 12 ಗಂಟೆಗೆ ದಮನಿತರ ಆಸ್ಮಿತೆ ಗೋಷ್ಠಿ, 1.30ಕ್ಕೆ ವೈವಿದ್ಯ ಗೋಷ್ಠಿ, 3.30ಕ್ಕೆ ಕೃಷಿ ಸೌರಭ ಗೋಷ್ಠಿ ಜರುಗಲಿವೆ. ಸಂಜೆ 4.30ಕ್ಕೆ ಬಹಿರಂಗ ಅಧಿವೇಶನ ಜರುಗಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸುವರು. ತಾಲೂಕು ಅಧ್ಯಕ್ಷ ವೀರೇಶ ಜಂಬಗಿ ನಿರ್ಣಯ ಮಂಡಿಸುವರು.
    ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸುವರು. ಕಸಾಪ ಜಿಲ್ಲಾಧ್ಯಕ್ಷ ಅಧ್ಯಕ್ಷತೆ ವಹಿಸುವರು. ಶಿವಮೊಗ್ಗ ಕುವೆಂಪು ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಾನಂದ ಕೆಳಗಿನಮನಿ ಸಮಾರೋಪ ನುಡಿಗಳನ್ನಾಡುವರು. ರಾತ್ರಿ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ತಿಳಿಸಿದರು.
    ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕು ಅಧ್ಯಕ್ಷ ವೀರೇಶ ಜಂಬಗಿ, ಪ್ರಮುಖರಾದ ಪುಟ್ಟಪ್ಪ ಮರಿಯಮ್ಮನವರ, ಏಕನಾಥ ಭಾನುವಳ್ಳಿ, ಕೆ.ಎಚ್. ಮುಕ್ಕಣ್ಣನವರ, ಜಿ.ಜಿ. ಹೊಟ್ಟಿಗೌಡ್ರ, ನಿತ್ಯಾನಂದ ಕುಂದಾಪುರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts