More

    ಕನ್ನಡಿಗರ ಸಂಸ್ಕೃತಿ, ಸಾಮಾಜಿಕ ಸ್ಥಿತಿ ಉನ್ನತೀಕರಣವಾಗಲಿ; ಸಮ್ಮೇಳನಾಧ್ಯಕ್ಷ ಜೆ.ಎಂ. ಮಠದ ಹೇಳಿಕೆ

    ರಾಣೆಬೆನ್ನೂರ: ಕನ್ನಡಿಗರ ಸಂಸ್ಕೃತಿ ಮತ್ತು ಸಾಮಾಜಿಕ ಸ್ಥಿತಿಯು ಉನ್ನತೀಕರಣ ಆಗಬೇಕು. ನಿರುದ್ಯೋಗಕ್ಕೆ ಸರ್ಕಾರದ ಹುದ್ದೆಯನ್ನು ಹೊಂದುವುದಷ್ಟೇ ಪರ್ಯಾಯ ಎಂದು ನಂಬಿರುವ ಯುವಶಕ್ತಿಗೆ, ಸರ್ಕಾರಿ ಹುದ್ದೆಗಳಿಗೆ ಪರ್ಯಾಯ ಕೆಲಸಗಳ ಮೂಲಗಳ ಬಗ್ಗೆ ತಿಳಿಸುವ ಮತ್ತು ಸ್ವತಂತ್ರ ಆರ್ಥಿಕ ಶಕ್ತಿಯ ಬಲವರ್ಧನೆಗೆ ಬೇಕಾದ ಅವಕಾಶಗಳ ಇರುವಿಕೆಯನ್ನು ತಲುಪಿಸುವಲ್ಲಿ ಪ್ರಯತ್ನ ಮಾಡಬೇಕಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಹಾಗೂ ಹಿರಿಯ ಸಾಹಿತಿ ಜೆ.ಎಂ. ಮಠದ ಹೇಳಿದರು.
    ನಗರದ ಎಪಿಎಂಸಿ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸರ್ವಾಧ್ಯಕ್ಷರ ಭಾಷಣ ಮಾಡಿದರು.
    ಭಾರತ ದೇಶವಾಸಿಗಳು ಎಲ್ಲರೂ ಸರ್ಕಾರಿ ನೌಕರಿ ಮಾಡಿಯೇ ಜೀವನ ಮಾಡುತ್ತಿಲ್ಲ. ಕೆಲಸವಿಲ್ಲ ಎಂದು ನೊಂದುಕೊಂಡು ವ್ಯವಸ್ಥೆಯನ್ನು ಬೈಯ್ದುಕೊಂಡು ಓಡಾಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಯುವಕರು ತಮ್ಮ ಚಿಂತನ ಶಕ್ತಿಯನ್ನು ತೀಕ್ಷ್ಣವಾಗಿ ಬದಲಾಯಿಸಿಕೊಳ್ಳಬೇಕು. ವಾತ್ಸವದ ನೆಲೆಗಟ್ಟಿನಲ್ಲಿ ಬದುಕಿನ ಪ್ರವಾಹವನ್ನು ದಿಕ್ಕು ಬದಲಿಸಲು ನಿಮ್ಮ ಕೈಯಲ್ಲಿರುವ ಮೊಬೈಲ್ ಬಳಸಿಕೊಳ್ಳಬಹುದು. ವಿವಿಧ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ದುಡಿಮೆಯ ಮಾರ್ಗಗಳನ್ನು ಕಂಡುಕೊಂಡಿರುವ ಸಾಧಕರನ್ನು ಪರಿಚಯ ಮಾಡಿಕೊಂಡರೆ ಸಾಕು, ನೀವು ಕೈ ಹಾಕಿದಲ್ಲೆಲ್ಲ ಕೆಲಸವಿದೆ, ಆದಾಯವಿದೆ. ಆದಾಯ ಬರುವ ಕೆಲಸಗಳನ್ನು ಸೃಷ್ಟಿಸಿಕೊಳ್ಳುವ ಜವಾಬ್ದಾರಿ ವಿದ್ಯಾವಂತ ಯುವಶಕ್ತಿ ನಿರ್ಧಾರದಲ್ಲಿದೆ ಎಂದರು.
    ಕನ್ನಡ ಭಾಷೆಯನ್ನು ಉದ್ಯೋಗದ ಅವಕಾಶಗಳನ್ನು ಸೃಷ್ಟಿ ಮಾಡುವ ಬಗ್ಗೆ ಮಾತುಗಳಿವೆ. ಭಾಷೆಯಿಂದ ಉದ್ಯೋಗದ ನಿರ್ಮಾಣ ಸಧ್ಯ ಇರುವಂತೆ, ಬೇರೆ ಭಾಷೆಗಳ ಅಧ್ಯಯನ ಮಾಡಿ ಕನ್ನಡದಲ್ಲಿ ಬಳಕೆ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಕುಟುಂಬದ ನಿರ್ಧಾರ ಮಹತ್ವದ ಸ್ಥಾನ ಪಡೆದುಕೊಳ್ಳುತ್ತದೆ. ಪ್ರಯತ್ನ ಮಾಡದೇ ಯಾವುದೇ ಕ್ಷೇತ್ರದಲ್ಲಿಯೂ ಯಶಸ್ಸು ಸಿಗುವುದಿಲ್ಲ. ಯಶಸ್ಸು ಸಾಧಿಸಲು ನಮ್ಮ ಸಕಾರಾತ್ಮಕ ಪ್ರಯತ್ನಗಳು ಇಲ್ಲದೆ ಇದ್ದರೆ, ಪ್ರಗತಿ ಹೊಂದುವುದು ಅಸಾಧ್ಯ.
    ಕನ್ನಡ ಭಾಷೆಗೆ ಶತಮಾನಗಳ ಇತಿಹಾಸವಿದೆ. ಈಚೆಗೆ ಜ್ಞಾನವ್ಯಾಪಿಯಲ್ಲಿ ಸಿಕ್ಕ ಶಿಲಾಶಾಸನಗಳಲ್ಲಿ 25 ಶಾಸನಗಳು ಕನ್ನಡದಲ್ಲಿ ಬರೆಯಲ್ಪಟ್ಟಿವೆ. ಅಂತೆಯೇ ಹಾವೇರಿ ಜಿಲ್ಲೆಯಲ್ಲಿಯೂ ಸಹ ಪ್ರಾಚೀನ ಶಿಲಾಶಾಸನಗಳು ಪ್ರತಿ ಗ್ರಾಮಗಳಲ್ಲಿ ದೊರೆಯುತ್ತವೆ. ಆದರೆ, ಕೆಲವು ಗ್ರಾಮಗಳಲ್ಲಿ ಶಾಸನಗಳನ್ನು ಮಾತ್ರ ಅಧ್ಯಯನಕ್ಕೆ ಒಳಪಡಿಸಿರುವುದರಿಂದ ಮಹತ್ವವಾದವುಗಳು ಸಂಗ್ರಹ ಆಗಿಲ್ಲವೆಂಬುದನ್ನು ಶಾಸನ ತಜ್ಞರೇ ಹಲವಾರು ಸಲ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಮಾಡಿರುವುದನ್ನು ಸ್ಮರಿಸಿಕೊಳ್ಳುತ್ತೇನೆ.
    ಪುರಾತನ ಸ್ಮಾರಕಗಳನ್ನು ನಿಧಿ ಆಸೆಗೆ ಬಿದ್ದು ಅಗೆದು ಹಾಕಿದ ಹಲವಾರು ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿವೆ. ಪುರಾತನ ಸ್ಮಾರಕಗಳನ್ನು ರಕ್ಷಿಸುವ ಕೆಲಸ ನೆಪಕ್ಕೆ ಆಗಬಾರದು. ಪುರಾತತ್ವ ಇಲಾಖೆ ಕಠಿಣವಾಗಿ ಸ್ಮಾರಕಗಳನ್ನು ರಕ್ಷಿಸುವ ಕಾನೂನುಗಳನ್ನು ಖಚಿತವಾಗಿ ಜಾರಿಗೆ ತರಬೇಕಾದ ಅಗತ್ಯವಿದೆ. ಇಲ್ಲದೆ ಇದ್ದಲ್ಲಿ, ಸ್ಮಾರಕಗಳ ರಕ್ಷಣೆ ಆಧುನಿಕ ಕಟ್ಟಡಗಳ ಭರಾಟೆಯಲ್ಲಿ ಸವಾಲಿನ ಕಾರ್ಯವಾದೀತು. ನಾಗರಿಕರ ಜವಾಬ್ದಾರಿಯಿಂದ ಪ್ರಾಚೀನ ಸ್ಮಾರಕಗಳ ರಕ್ಷಣೆಯಲ್ಲಿ ಸಹಭಾಗಿತ್ವದ ಅಗತ್ಯವಿದೆ. ಲಭ್ಯ ಮತ್ತು ಉಳಿಸಿಕೊಳ್ಳಲು ಸಾಧ್ಯವಾದ ಶಾಸನಗಳ ಶಿಲೆಗಳನ್ನು ವಿಶ್ವವಿದ್ಯಾಲಯಗಳು ರಕ್ಷಿಸಿಟ್ಟಿವೆ. ಅವುಗಳ ನಿರಂತರ ಅಧ್ಯಯನವೂ ನಡೆದಿದೆ ಎಂದರು.
    ಜಿಲ್ಲೆಯಲ್ಲಿ ಪುರಾತನ ಸ್ಮಾರಕಗಳ ಇರುವಿಕೆಗೆ ವ್ಯಾಪಕವಾದ ನಿರಂತರ ಪ್ರಚಾರದ ಅಗತ್ಯವಿದೆ. ರಾಣೆಬೆನ್ನೂರು ತಾಲೂಕಿನ ಚೌಡದಾನಪುರ ಗ್ರಾಮದ ಮುಕ್ತೇಶ್ವರ ದೇವಾಲಯ, ರಟ್ಟಿಹಳ್ಳಿಯ ಕದಂಬೇಶ್ವರ, ಹಾವೇರಿಯ ಪುರಶಿದ್ಧೇಶ್ವರ ದೇವಾಲಯ, ಹಾನಗಲ್ಲಿನ ಬಿಲ್ಲೇಶ್ವರ ಮತ್ತು ತಾರಕೇಶ್ವರ, ಬಂಕಾಪುರದ ನಗರೇಶ್ವರ, ಬಾಳಂಬೀಡದ ಕಲೇಶ್ವರ, ಗಳಗನಾಥದ ಗಳಗನಾಥೇಶ್ವರ ದೇವಾಲಯ ಹೀಗೆ ಪ್ರಾಚೀನ ಸ್ಮಾರಕಗಳು ಇದ್ದು ಜನಾಕರ್ಷಣೆಗೆ ಪಾತ್ರವಾಗಿವೆ.
    ಶಿವಶರಣರ, ವಚನಕಾರರ, ದಾಸವರೇಣ್ಯರ, ಹೋರಾಟಗಾರರ, ಮುಖ್ಯವಾಹಿನಿಯ ಕವಿ-ಸಾಹಿತಿಗಳ ಸಾಹಿತ್ಯಕ ಚಲನಶೀಲ ಗಟ್ಟಿಸ್ಥರದ ಐತಿಹಾಸಿಕ ಇತಿಹಾಸ ನಮ್ಮ ಕಣ್ಣಮುಂದೆಯೇ ಕಂಗೊಳಿಸುತ್ತಿವೆ. ಬಂಕಾಪುರದ ನವಿಲುಧಾಮ ಮತ್ತು ರಾಣೆಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯ ಪ್ರವಾಸಿಗರ ಸಹಜ ಆಕರ್ಷಣೆಯ ಪ್ರದೇಶವಾಗಿವೆ. ಇನ್ನಷ್ಟು ಸೌಲಭ್ಯಗಳನ್ನು ಆಧುನಿಕರಣಗೊಳಿಸಿದರೆ ಜಿಲ್ಲೆಯಲ್ಲಿ ಮೂರು ದಿನಗಳ ಅವಧಿಯ ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆಸುವ ಎಲ್ಲ ರೀತಿಯ ಪ್ರಾಕೃತಿಕ ಸಂಪತ್ತು ಜಿಲ್ಲೆಯಲ್ಲಿದೆ.
    ಬಂಕಾಪುರದ ನವಿಲುಧಾಮ 139 ಎಕರೆ ಪ್ರದೇಶ ಹೊಂದಿದೆ. ರಾಣೆಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯ 125 ಎಕರೆ ಪ್ರದೇಶ ಹೊಂದಿದೆ. ಇಲ್ಲಿ ಉಳಿದುಕೊಳ್ಳಲು ಪ್ರವಾಸಿಗರಿಗೆ ಗ್ರಾಮೀಣ ಸೊಗಡಿನ ಟೆಂಟ್‌ಗಳನ್ನೂ ಮತ್ತು ಇತರ ಆಕರ್ಷಕ ಸೌಲಭ್ಯಗಳನ್ನು ಸೃಷ್ಟಿಸಿದರೆ ಪ್ರವಾಸೋದ್ಯಮದ ಅಭಿವೃದ್ಧಿಯ ಜತೆಗೆ ಸರ್ಕಾರದ ಬೊಕ್ಕಸಕ್ಕೂ ದೊಡ್ಡ ಮೊತ್ತದ ಆರ್ಥಿಕ ಸಂಪತ್ತು ದೊರೆಯುವುದರಲ್ಲಿ ಸಂದೇಹವಿಲ್ಲ. ಆಧುನಿಕ ನಿರ್ಮಾಣದ ಶಿಗ್ಗಾಂವಿ ಗೊಟಗೋಡಿಯ ರಾಕ್ ಗಾರ್ಡನ್ ಮತ್ತು ಅಗಡಿ ತೋಟಗಳು ಪ್ರವಾಸಿಗರ ಹೃದಯ ತಣಿಸಿವೆ ಎಂದರು.
    ಕನ್ನಡ ಸಾಹಿತ್ಯ ಪರಿಷತ್ ಯುವಕರ ಸಾಹಿತ್ಯವನ್ನು ಬೆಂಬಲಿಸಬೇಕು. ಯುವಕರ ಸ್ವತಂತ್ರ ಪುಸ್ತಕಗಳ ಪ್ರಕಟಣೆಗಳಿಗೆ ಪ್ರೋತ್ಸಾಹ ನೀಡಬೇಕು. ಹೋಬಳಿ ಮಟ್ಟದ ಸಮ್ಮೇಳನಗಳನ್ನು ಮಾಡಬೇಕು. ಅಲ್ಲಿಂದ ಬರಹದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಬೇಕು. ಸ್ಥಾನಿಕ ಬರಹಗಾರರನ್ನು ಗುರುತಿಸುವ ಕೆಲಸ ಮಾಡಬೇಕು. ಬರಹ ಶೈಲಿ ಒಬ್ಬೊಬ್ಬ ಲೇಖಕರದೂ ಭಿನ್ನವಾಗಿರುತ್ತದೆ. ಬರಹ ಹೀಗೆ ಇರಬೇಕೆಂದು ನಿಯಮವೂ ಇಲ್ಲ. ನಿಬಂಧನೆಯೂ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವ ವಿಶಾಲ ಮನೋಭಾವ ಅಗತ್ಯವಿದೆ. ಯಾವುದೇ ವ್ಯಕ್ತಿಯ ವ್ಯಕ್ತಿತ್ವ ಚಟುವಟಿಕೆಗಳು ಅವರವರ ವಯಕ್ತಿಕ ಆದರ್ಶ, ತತ್ವಗಳನ್ನು ಆಧರಿಸಿರುತ್ತದೆ. ಅಂತೆಯೇ, ಬರಹದ ಸಾಧಕರು, ಪರಿಚಾರಕರನ್ನು ಪೂರ್ವಗ್ರಹದ ಹಂಗಿಲ್ಲದೆ ಗುರುತಿಸುವ ಪ್ರಾಮಾಣಿಕ ಕಾರ್ಯ ಪರಿಷತ್ತಿನಿಂದ ಆಗಬೇಕು. ವಿಭಿನ್ನತೆಯಿಂದ ಏಕತೆ ಸಾಧಿಸುವ ವೈಚಾರಿಕ ಮನೋಧರ್ಮದಿಂದ ಮಾತ್ರ ಸಾಹಿತ್ಯಕ ವಾತಾವರಣವನ್ನು ಸಮಾಜದಲ್ಲಿ ಬಿತ್ತನೆ ಮಾಡಲು ಸಾಧ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts