More

    ರಾಜ್ಯದ ಮೂರೂ ಪಕ್ಷಕ್ಕೆ ಎಚ್ಚರಿಕೆ ಗಂಟೆ; ಬಿಜೆಪಿಗೆ ನಾಯಕತ್ವ ಸವಾಲು, ಕಾಂಗ್ರೆಸ್​ಗೆ ಒಗ್ಗಟ್ಟಿನ ಅನಿವಾರ್ಯತೆ

    |ರುದ್ರಣ್ಣ ಹರ್ತಿಕೋಟೆ ಬೆಂಗಳೂರು

    ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ರಾಜ್ಯದ ಮೂರು ಪಕ್ಷಗಳಿಗೂ ಒಂದೊಂದು ರೀತಿಯ ಸಂದೇಶ ರವಾನಿಸಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ 13 ತಿಂಗಳಷ್ಟೇ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಪಂಚ ರಾಜ್ಯಗಳ ಫಲಿತಾಂಶ ನೇರವಾಗಿ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ ರಾಜಕೀಯ ಪಕ್ಷಗಳಿಗೆ ಬೇರೆ ಬೇರೆ ಕಾರಣಗಳಿಗೆ ಎಚ್ಚರಿಕೆ ಗಂಟೆಯಾಗಿದೆ. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ, ಪುದುಚೇರಿ ಚುನಾವಣೆಗಳ ಫಲಿತಾಂಶದ ನಂತರ ಈ ಐದು ರಾಜ್ಯಗಳ ಫಲಿತಾಂಶ ರಾಜ್ಯದಲ್ಲೂ ವಿವಿಧ ಬಗೆಯ ಅವಲೋಕನ, ಆತ್ಮಾವಲೋಕನಗಳಿಗೆ ಪ್ರೇರಣೆಯಾಗಲಿದೆ.

    ಆಯಾ ರಾಜ್ಯಗಳ ಪರಿಸ್ಥಿತಿ ಹಾಗೂ ವಿಷಯಾಧಾರಿತವಾಗಿ ಚುನಾವಣೆ ನಡೆದಿರುತ್ತವೆ ಎಂಬುದನ್ನು ಫಲಿತಾಂಶಗಳೇ ರುಜುವಾತು ಪಡಿಸಿವೆ. ಪಂಚರಾಜ್ಯ ಸಾಧನೆ ಮೂಲಕ ಬಿಜೆಪಿ ಉತ್ಸಾಹ ಹೆಚ್ಚಿಸಿಕೊಂಡಿದೆ.

    ಬಿಜೆಪಿ ಮೇಲೇನು ಪರಿಣಾಮ:

    •   ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿ
    •   ಚುರುಕಾಗಲಿರುವ ಸಂಘಟನೆ
    •   ಪಕ್ಷ ತೊರೆಯಲು ಸಿದ್ಧರಾದವರಿಗೆ ಕಡಿವಾಣ, ವಲಸಿಗರು ಮರು ಆಲೋಚನೆ

    ಕಾಂಗ್ರೆಸ್​ನಲ್ಲಿ ಏನಾಗುತ್ತದೆ?:

    •   ಒಗ್ಗಟ್ಟಿನ ಮಂತ್ರ ಪಠಣ
    •   ಕಾರ್ಯತಂತ್ರ ಬದಲಾವಣೆ
    •   ಕೆಪಿಸಿಸಿ ಅಧ್ಯಕ್ಷರಿಗೆ ಕಡಿವಾಣ
    •   ಯುವ ನಾಯಕತ್ವಕ್ಕೆ ಆದ್ಯತೆ ಸಾಧ್ಯತೆ

    ಜೆಡಿಎಸ್​ಗೆ ಪಾಠವೇನು?:

    •   ಚುರುಕಾಗಬೇಕಾಗಿದೆ ಸಂಘಟನೆ
    •   ಕುಟುಂಬದ ಪಕ್ಷ ಎಂಬ ಹಣೆಪಟ್ಟಿಯಿಂದ ಹೊರಬರುವುದು
    •   ಎಲ್ಲ ಜಿಲ್ಲೆಗಳಲ್ಲಿ ಪಕ್ಷದ ಪುನಶ್ಚೇತನ
    •   ಹೊಂದಾಣಿಕೆಗೆ ಹಾತೊರೆಯಲ್ಲ ಎಂಬ ಸಂದೇಶ ನೀಡುವುದು

    ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಪರ ದೃಷ್ಟಿಕೋನ, ಡಬಲ್ ಎಂಜಿನ್ ಸರ್ಕಾರದ ಜನಪರ ಕೆಲಸ, ಪ್ರವಾಸೋದ್ಯಮ ಅಭಿವೃದ್ಧಿ, ಕರೊನಾ ನೆರವು, ಹಿಂದು ಮಂದಿರಗಳ ಪುನರ್​ನಿರ್ವಣ ಎಲ್ಲವನ್ನೂ ಜನ ಮೆಚ್ಚಿದ್ದಾರೆ ಎನ್ನಲು ಉತ್ತರಾಖಂಡ ಫಲಿತಾಂಶವೇ ಸಾಕ್ಷಿ.

    |ಪ್ರಲ್ಹಾದ ಜೋಷಿ ಕೇಂದ್ರ ಸಚಿವ

    ಐದು ರಾಜ್ಯಗಳ ಪೈಕಿ ಅಧಿಕಾರದಲ್ಲಿದ್ದ ಪಂಜಾಬ್​ನಲ್ಲಿ ಕಿತ್ತಾಟದಿಂದಲೇ ಕಾಂಗ್ರೆಸ್ ಅವಕಾಶ ಕಳೆದುಕೊಂಡಿದೆ. ದೆಹಲಿಗೆ ಸೀಮಿತವಾಗಿದ್ದ ಆಮ್ ಆದ್ಮಿ ತನ್ನ ನೆಲೆಯನ್ನು ಪಂಜಾಬ್​ಗೆ ವಿಸ್ತರಣೆ ಮಾಡಿಕೊಂಡಿದೆ. ಈ ಅಂಶಗಳೇ ರಾಜ್ಯದ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯಿಂದ ಸಂಘಟನೆಯಲ್ಲಿ ತೊಡಗುವಂತೆ ಸಂದೇಶ ನೀಡಿವೆ. 1 ವರ್ಷ ನಡೆದ ರೈತರ ಹೋರಾಟಕ್ಕೆ ಬೆನ್ನೆಲುಬಾಗಿದ್ದದ್ದು ಪಂಜಾಬ್ ಮತ್ತು ಉತ್ತರ ಪ್ರದೇಶ. ಆಮ್ ಆದ್ಮಿ ರೈತ ಹೋರಾಟವನ್ನು ಬಹಿರಂಗವಾಗಿ ಬೆಂಬಲಿಸಿರಲಿಲ್ಲ. 3 ಕೃಷಿ ಕಾನೂನುಗಳನ್ನು ಪ್ರಬಲ ವಾಗಿ ವಿರೋಧಿಸಿರಲಿಲ್ಲ. ಆದರೂ ಪಂಜಾಬ್ ಮತದಾರ ಆ ಪಕ್ಷದಲ್ಲಿ ಬದಲಾವಣೆ ಕಂಡಿದ್ದಾನೆ. ಪೂರ್ವ ಉತ್ತರ ಪ್ರದೇಶದಲ್ಲಿಯೇ ರೈತರ ಹೋರಾಟ ಜೋರಾಗಿತ್ತು. ಆದರೆ ಅಲ್ಲಿ ಮತದಾರ ಬಿಜೆಪಿಯ ಕೈ ಹಿಡಿದಿದ್ದಾನೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಸ್ಥಳೀಯ ಅಂಶಗಳು, ಸ್ಥಳೀಯ ವಾದ ಗಟ್ಟಿ ನಾಯಕತ್ವವೇ ಚುನಾವಣೆಯಲ್ಲಿ ಪಕ್ಷಗಳ ಕೈ ಹಿಡಿಯ ಬೇಕಾಗುತ್ತದೆ. ಬಿಜೆಪಿಗೆ ಪ್ರಧಾನಿ ಮೋದಿ ಹೆಸರಿನ ಜತೆಗೆ ಪ್ರಭಾವಿ ನಾಯಕತ್ವ ಸ್ಥಳೀಯವಾಗಿ ಬೇಕಾಗುತ್ತದೆ ಎಂಬ ಸಂದೇಶವನ್ನು ಚುನಾವಣೆ ನೀಡಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

    ಕಾಂಗ್ರೆಸ್​ಗೆ ಬೇಕು ಒಗ್ಗಟ್ಟಿನ ಮಂತ್ರ: ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಉಮೇದಿಯಲ್ಲಿರುವ ಕಾಂಗ್ರೆಸ್​ಗೆ ಒಗ್ಗಟ್ಟು ಮುಖ್ಯವಾಗಿದೆ. ಪಂಜಾಬ್​ನಲ್ಲಿ ಕಿತ್ತಾಟದ ಪರಿಣಾಮವೇ ಇದ್ದ ಅವಕಾಶ ಕೈತಪ್ಪಿಸಿದೆ. ಉತ್ತರಾಖಂಡ ಹಾಗೂ ಗೋವಾದಲ್ಲೂ ಕಾಂಗ್ರೆಸ್ ಗೆಲ್ಲುವ ಅವಕಾಶವನ್ನು ಹಾಳು ಮಾಡಿಕೊಂಡಿದೆ. ಮುಂದೆ ಇರುವ ಅವಕಾಶ ಕರ್ನಾಟಕದಲ್ಲಿ ಮಾತ್ರ. ಇಲ್ಲಿಯೂ ಗುಂಪುಗಾರಿಕೆಗೆ ಕಡಿವಾಣ ಹಾಕುವ ಅಗತ್ಯವಿದೆ. ರಾಜ್ಯದಲ್ಲಿಯೂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಗುಂಪಿನ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಪಕ್ಷದ ಹೈಕಮಾಂಡ್ ನಾಯಕರಲ್ಲಿ ಒಗ್ಗಟ್ಟು ಮೂಡಿಸದೇ ಹೋದರೆ ಮುಂದಿನ ಚುನಾವಣೆಯಲ್ಲಿ ಇರುವ ಅವಕಾಶವನ್ನು ಕೈಯಾರೆ ಹಾಳು ಮಾಡಿಕೊಳ್ಳಬೇಕಾಗುತ್ತದೆ ಎಂಬುದು ವಿಶ್ಲೇಷಕರ ಅಭಿಪ್ರಾಯ.

    ಪಕ್ಷ, ಶಾಸಕಾಂಗ ಪಕ್ಷದಲ್ಲಿ ಬಿರುಕು ಸರಿಪಡಿಸಬೇಕು. ಒಂದು ರೀತಿಯಲ್ಲಿ ಕಾಂಗ್ರೆಸ್​ಗೆ ಹಿರಿಯರೇ ಹೊರೆಯಾಗುತ್ತಿದ್ದಾರೆ. ಮತಗಳನ್ನು ತರುವ ಸಾಮರ್ಥ್ಯ ಇಲ್ಲದಿದ್ದರೂ ಸೋಲಿಸುವುದರಲ್ಲಿ ನಿಪುಣರು. ಪಕ್ಷದ ರಾಜ್ಯಾಧ್ಯಕ್ಷರು ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳದೇ ಎಲ್ಲರನ್ನೂ ಒಗ್ಗಟ್ಟಿನಿಂದ ಕರೆದುಕೊಂಡು ಹೋಗದಿದ್ದರೆ ಪಂಜಾಬ್ ಪರಿಸ್ಥಿತಿ ಬರಲಿದೆ ಎಂಬ ಆತಂಕ ಇದ್ದೇ ಇದೆ. ಸಾಮಾಜಿಕ ಸಮೀಕರಣ ಸರಿಯಾಗಿ ಮಾಡದೇ ಹೋದರೆ ಸಮಾಜವಾದಿ ಪಕ್ಷ ಉತ್ತರ ಪ್ರದೇಶದಲ್ಲಿ ಅನುಭವಿಸಿದ ಸೋಲು ಇಲ್ಲಿಯೂ ಕಾಂಗ್ರೆಸ್​ಗೆ ಕಟ್ಟಿಟ್ಟ ಬುತ್ತಿ ಎಂದೇ ಹೇಳಲಾಗುತ್ತಿದೆ.

    ಜೆಡಿಎಸ್​ಗಿದೆ ಸವಾಲು: ರಾಜ್ಯದಲ್ಲಿ ಪ್ರತಿಪಕ್ಷಕ್ಕೆ ವಿರೋಧ ಪಕ್ಷ ಎಂಬ ಆರೋಪ ಹೊತ್ತಿರುವ ಜೆಡಿಎಸ್ ತನ್ನ ಮೇಲಿನ ಬಿ ಟೀಮ್ ಆರೋಪ ಕಳಚಿಕೊಂಡು ಪಕ್ಷ ಸಂಘಟನೆಗೆ ಮುಂದಾಗಬೇಕು ಎಂಬ ಸಂದೇಶವನ್ನು ಚುನಾವಣೆ ಫಲಿತಾಂಶ ನೀಡಿದೆ. ಆಮ್ ಆದ್ಮಿ ಮೇಲೂ ಇದೇ ರೀತಿಯ ಆರೋಪಗಳಿದ್ದವು. ಆದರೆ ಪ್ರಾದೇಶಿಕ ಪಕ್ಷವೊಂದು ಇನ್ನೊಂದು ರಾಜ್ಯದಲ್ಲಿ ಅಧಿಕಾರ ಹಿಡಿದಿದೆ ಎಂದರೆ ಜೆಡಿಎಸ್ ಆಲೋಚಿಸಬೇಕಾಗಿದೆ. ಜೆಡಿಎಸ್ ಸದಾ ಅತಂತ್ರ ವಿಧಾನಸಭೆಯಲ್ಲಿ ಮೈ ಕಾಯಿಸಿಕೊಳ್ಳುವ ಆಲೋಚನೆ ಬಿಟ್ಟು ಹೊರಬರಬೇಕಾಗಿದೆ. ಆಮ್ ಆದ್ಮಿ ರೀತಿಯಲ್ಲಿ ಸಂಘಟನೆಗೆ ಮುಂದಾಗಬೇಕಾಗಿದೆ.

    ಮರು ಆಲೋಚನೆ: ಆಡಳಿತ ಪಕ್ಷ ಬಿಜೆಪಿ, ಜೆಡಿಎಸ್​ನಿಂದ ಅನೇಕರು ಕಾಂಗ್ರೆಸ್​ಗೆ ವಲಸೆ ಹೋಗಲಿದ್ದಾರೆಂದೇ ಹೇಳಲಾ ಗುತ್ತಿತ್ತು. ಆದರೆ ಈ ಚುನಾವಣೆಯ ಫಲಿತಾಂಶಗಳು ವಲಸೆಗೆ ಸಿದ್ಧರಾದವರು ಮರು ಆಲೋಚಿಸುವಂತೆ ಮಾಡಿದೆ. ಕಾಂಗ್ರೆಸ್​ನಿಂದ ಬಿಜೆಪಿಗೆ ವಲಸೆ ಬಂದರು ಆಶ್ಚರ್ಯ ಪಡಬೇಕಾಗಿಲ್ಲ. ಆದರೆ ರಾಜ್ಯದಿಂದ ರಾಜ್ಯಕ್ಕೆ ಪರಿಸ್ಥಿತಿಗಳು ವಿಭಿನ್ನವಾಗಿರುವುದರಿಂದ ಈಗಲೇ ಏನೂ ಹೇಳಲಾಗದು.

    ಆಮ್ ಆದ್ಮಿ ಬರುವುದೇ?: ರಾಜ್ಯದಲ್ಲಿಯೂ ಆಮ್ ಆದ್ಮಿ ಪಕ್ಷ ಸಂಘಟನೆಗೆ ಪ್ರಯತ್ನ ನಡೆದಿವೆ. ಪಂಜಾಬ್ ಗೆಲುವು ಆ ಪಕ್ಷಕ್ಕೆ ಟಾನಿಕ್ ನೀಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಈಗಾಗಲೆ ಬಿಬಿಎಂಪಿಗಾಗಿ ಪ್ರಯತ್ನ ನಡೆಸಿದೆ. ವಿಧಾನಸಭಾ ಚುನಾವಣೆಯಲ್ಲಿಯೂ ಖಾತೆ ತೆರೆಯುವ ಉತ್ಸಾಹವನ್ನು ಫಲಿತಾಂಶ ನೀಡಿದೆ.

    ಬುಲ್ಡೋಜರ್ ಎದುರು ನಡೆಯದ ಆಟ; ಅಬ್ಬರಿಸಲು ಹೋಗಿ ಮಕಾಡೆ ಮಲಗಿದ ಓವೈಸಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts