More

    ಮಂಗಳೂರು ವಿಮಾನ ನಿಲ್ದಾಣಕ್ಕೆ ಕೊನೆಗೂ ಬಸ್ ಸಂಪರ್ಕ

    ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ‘ಕರಾವಳಿ ಕನ್ನಡ ತೇರು’ ಹೆಸರಿನ ಮೂರು ಬಸ್‌ಗಳಿಗೆ ಕನ್ನಡ ರಾಜ್ಯೋತ್ಸವದಂದು ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.

    ಬಸ್‌ಗಳಿಗೆ ಚಾಲನೆ ನೀಡಿದ ದ.ಕ. ಸಂಸದ ಮಾತನಾಡಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉಡುಪಿ ಹಾಗೂ ಮಂಗಳೂರಿನಿಂದ ನೇರವಾಗಿ ವೋಲ್ವೊ ಬಸ್ ಸೇವೆಗಳಿಗೆ ಚಾಲನೆ ನೀಡಲಾಗಿದ್ದು, ಈ ಭಾಗದ ಜನರ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಖಾಸಗಿ ಬಸ್‌ಗಳು ಕೆಎಸ್ಸಾರ್ಟಿಸಿ ಬಸ್‌ಗಳೊಂದಿಗೆ ಪೈಪೋಟಿಗಿಳಿದಿರುವುದು ಗಮನಕ್ಕೆ ಬಂದಿದೆ. ಪೈಪೋಟಿ ಆರೋಗ್ಯಕರವಾಗಿದ್ದರೆ ಸ್ವಾಗತಿಸುತ್ತೇವೆ, ಬಸ್ ಸಂಚಾರಕ್ಕೆ ತೊಂದರೆಯುಂಟು ಮಾಡಿದರೆ ಖಾಸಗಿ ಬಸ್‌ಗಳ ಮೇಲೆ ಕ್ರಮ ಕೈಗೊಳ್ಳಲು ಬೇಕಾದ ವ್ಯವಸ್ಥೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರಗಳಿಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದ್ದು, ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ತನ್ನದೇ ಆದ ನಿಯಮಗಳನ್ನು ರೂಪಿಸಲಾಗಿದೆ. ಒಂದು ವೇಳೆ ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ತೊಂದರೆಯಾದರೆ ಜಿಲ್ಲೆಯಾದ್ಯಂತ ಕೆಎಸ್ಸಾರ್ಟಿಸಿ ಬಸ್ ಸಂಚಾರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಶಾಸಕರಾದ ವೇದವ್ಯಾಸ್ ಕಾಮತ್, ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ್, ಕೆಎಸ್ಸಾರ್ಟಿಸಿ ವಿಭಾಗಿಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಸಹಿತ ಹಲವರು ಇದ್ದರು.

    ವಿಜಯವಾಣಿ ಪ್ರತಿನಿಧಿ ಪ್ರಯತ್ನ
    ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳೂರು ಬಸ್‌ನಿಲ್ದಾಣ, ಸ್ಟೇಟ್‌ಬ್ಯಾಂಕ್ ಅಥವಾ ಪ್ರಯಾಣಿಕರಿಗೆ ಅನುಕೂಲವಾಗುವ ಸ್ಥಳದಿಂದ ಸರ್ಕಾರಿ ಬಸ್ ಸೇವೆ ಆರಂಭಿಸಬೇಕು ಎಂದು ಸಾರಿಗೆ ಸಚಿವ ಶ್ರೀರಾಮುಲು ದೆಹಲಿಗೆ ಬಂದಿದ್ದ ವೇಳೆ ವಿಜಯವಾಣಿ ದೆಹಲಿ ಪ್ರತಿನಿಧಿ ರಾಘವ ಶರ್ಮ ಮನವಿ ಮಾಡಿದ್ದರು. ಮಾರನೇ ದಿನವೇ (ಜುಲೈ 24) ಬಸ್ ಆರಂಭಕ್ಕೆ ಸಚಿವರು ಆದೇಶಿಸಿದ್ದರೂ ಬಸ್ ಸೇವೆ ಮಾತ್ರ ಆರಂಭಗೊಂಡಿರಲಿಲ್ಲ. ಶ್ರೀರಾಮುಲು ಅವರ ಸಹಾಯಕರು, ಇಲಾಖೆ ಅಧಿಕಾರಿಗಳಿಗೆ ಮತ್ತೆ ಒತ್ತಡ ಹಾಕಿದ ಬಳಿಕ ಬೆಂಗಳೂರಿನಿಂದ ಬಸ್ ಬಂದರೂ, ತಾಂತ್ರಿಕ ಸಮಸ್ಯೆಗಳ ನೆಪ ಒಡ್ಡಲಾಯಿತು. ಅಂತೂ ಈಗ, 96 ದಿನಗಳ ಬಳಿಕ ನ.1ರಂದು ಕರ್ನಾಟಕ ರಾಜ್ಯೋತ್ಸವ ದಿನ ಬಸ್ ಸೇವೆ ಆರಂಭಕ್ಕೆ ಚಾಲನೆ ಸಿಕ್ಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts