More

    3.55 ಕೋಟಿ ರೂ.ವಸ್ತು ರಿಕವರಿ…ಬರೋಬ್ಬರಿ 223 ಪ್ರಕರಣ ಭೇದಿಸಿದ ಪೊಲೀಸರು

    ಶಿವಮೊಗ್ಗ: ಪ್ರಕರಣ-1: ತಾಯಿ ಜತೆ ನಿತ್ಯವೂ ಅಡಕೆ ಕೆಲಸಕ್ಕೆ ಹೋಗುತ್ತಿದ್ದ ಸಂಬಂಧಿಯೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿನ್ನಾಭರಣ ಮತ್ತು 50 ಸಾವಿರ ರೂ. ನಗದು ಕಳವು ಮಾಡಿದ್ದರು. ವಾರದ ಬಳಿಕ ಮಾಲೀಕರಿಗೆ ಮನೆಯಲ್ಲಿ ಕಳ್ಳತನ ಆಗಿರುವುದು ಗೊತ್ತಾಗಿತ್ತು. ಅಷ್ಟರಲ್ಲಿ ಅದೇ ಹಣದಲ್ಲಿ ಮನೆಗೆ ಹೊಸ ಫ್ರಿಜ್, ಬೀರು ಮತ್ತು ಬೆಳ್ಳಿಯ ಆಭರಣಗಳನ್ನು ಖರೀದಿಸಲಾಗಿತ್ತು.

    ಪ್ರಕರಣ-2 ಬರೋಬ್ಬರಿ 34 ಸಾವಿರ ರೂ. ಮೌಲ್ಯದ ಮೊಬೈಲ್ ಖರೀದಿಸಿ ಕೇವಲ ಮೂರು ದಿನವಾಗಿತ್ತು. ಅ.19ರಂದು ಸಿಟಿ ಬಸ್‌ನಲ್ಲಿ ಪ್ರಯಾಣಿಸುವಾಗಿ ಕಳ್ಳತನವಾಗಿತ್ತು. ಮತ್ತೆ ಮೊಬೈಲ್ ಸಿಗುತ್ತದೆಂಬ ವಿಶ್ವಾಸವೂ ನಮಗಿರಲಿಲ್ಲ. ಆದರೆ ಪೊಲೀಸರು ಮೊಬೈಲ್ ಪತ್ತೆ ಮಾಡಿ ವಾಪಸ್ ಕೊಡಿಸಿದ್ದಾರೆ.

    ಪ್ರಕರಣ-3 ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಆದರೆ ಮನೆಗೆ ಕನ್ನ ಹಾಕಿದ್ದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹೊತ್ತೊಯ್ದಿದ್ದರು. ಈ ಬಗ್ಗೆ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೆವು. ಕಳ್ಳತನ ಆಗಿರುವ ಚಿನ್ನಾಭರಣ ಮತ್ತೆ ನಮ್ಮ ಕೈಸೇರುತ್ತದೆಂದು ಕನಸಿನಲ್ಲೂ ಯೋಚಿಸಿರಲಿಲ್ಲ. ಇಂದು ಮತ್ತೆ ಕೈಸೇರಿದ್ದು ನಂಬಲಿಕ್ಕೂ ಸಾಧ್ಯವಾಗುತ್ತಿಲ್ಲ.
    ಇದು ಹಲವಾರು ದಿನಗಳ ಹಿಂದೆ ಕಳೆದುಕೊಂಡಿದ್ದ ಚಿನ್ನಾಭರಣ, ಮೊಬೈಲ್, ಹಣ, ವಾಹನಗಳು ಮರಳಿ ಕೈಸೇರಿದಾಗ ಮಾಲೀಕರ ಮುಖದಲ್ಲಿ ಖುಷಿ ಇಮ್ಮಡಿಗೊಳಿಸಿತ್ತು.

    ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಸ್ತಿ ಮರಳಿಸುವ ಪರೇಡ್‌ನಲ್ಲಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಐದು ಉಪ ವಿಭಾಗ ವ್ಯಾಪ್ತಿಯಲ್ಲಿ ಪೊಲೀಸರು ಜಪ್ತಿ ಮಾಡಿದ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ವಾಹನಗಳು ಮತ್ತು ನಗದನ್ನು ಮಾಲೀಕರಿಗೆ ಹಸ್ತಾಂತರ ಮಾಡಲಾಯಿತು.

    2022ರ 42 ಪ್ರಕರಣ, 2023ರ 181 ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು 3.55 ಕೋಟಿ ರೂ. ಮೌಲ್ಯದ ವಸ್ತುಗಳನ್ನು ರಿಕವರಿ ಮಾಡಿ ಮಾಲೀಕರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.

    ಉಪ ವಿಭಾಗಗಳಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಮುಂದಿನ 10-15 ದಿನಗಳಲ್ಲಿ ಮತ್ತಷ್ಟು ಪ್ರಕರಣಗಳ ಪತ್ತೆ ಮಾಡಿ ವಸ್ತುಗಳನ್ನು ರಿಕವರಿ ಮಾಡಲಾಗುವುದು. ಭದ್ರಾವತಿ ವಿಭಾಗದಲ್ಲಿ ಬೈಕ್‌ಗಳು, ಶಿಕಾರಿಪುರ ವಿಭಾಗದಲ್ಲಿ ಶ್ರೀಗಂಧದ ತುಂಡುಗಳು, ತೀರ್ಥಹಳ್ಳಿ ವಿಭಾಗದಲ್ಲಿ ಪೂಜಾ ಸಾಮಗ್ರಿಗಳನ್ನು ಪತ್ತೆ ಮಾಡಲಾಗಿದೆ. ವಿಶೇಷವಾಗಿ ಕ್ರೈಂ ಸಿಬ್ಬಂದಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಡಿಸೆಂಬರ್ ತಿಂಗಳಲ್ಲಿ ಅಪರಾಧ ಮಾಸಾಚರಣೆ ಮಾಡಲಾಗಿದ್ದು ಅದರ ಅಂಗವಾಗಿ ಶಾಲಾ-ಕಾಲೇಜುಗಳಲ್ಲಿ ಜಾಗೃತಿ, ಗಾಂಜಾ ಬಗ್ಗೆ ಅರಿವು ಸೇರಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಾಲ್ಕೈದು ದಿನಗಳಲ್ಲೇ 4 ಗಾಂಜಾ ಪ್ರಕರಣ ದಾಖಲಿಸಿದ್ದು ಈ ವರ್ಷ 200ಕ್ಕೂ ಅಧಿಕ ಗಾಂಜಾ ಸೇವನೆ ಮಾಡಿದವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.

    ಎಎಸ್ಪಿಗಳಾದ ಅನಿಲ್‌ಕುಮಾರ್ ಭೂಮರಡ್ಡಿ ಮತ್ತು ಎ.ಜಿ.ಕಾರಿಯಪ್ಪ, ಡಿವೈಎಸ್ಪಿಗಳಾದ ಬಿ.ಬಾಲರಾಜ್, ಗಜಾನನ ಸುತಾರ, ಟಿ.ಆರ್.ಮಂಜುನಾಥ ಇತರರಿದ್ದರು.

    ಏನೆಲ್ಲ ರಿಕವರಿ?
    *ಸಿಇಐಆರ್ ಮೂಲಕ 333 ಮೊಬೈಲ್ ಜಪ್ತಿ
    *493 ಕಳವು, 27 ಮನೆಗಳ್ಳತನ, 33 ಸಾಮಾನ್ಯ ಕಳವು ಪ್ರಕರಣದ ವಸ್ತು
    * ತಲಾ ಒಂದು ಲಾಭಕ್ಕಾಗಿ ಕೊಲೆ, ಶ್ರೀಗಂಧ ಮರ ಕಡಿತಲೆ ಪತೆ
    * ತಲಾ 7 ದರೋಡೆ, ಸರಗಳ್ಳತನ, ಜಾನುವಾರು ವಶ
    * 11 ಸುಲಿಗೆ, 8 ವಂಚನೆ, 78 ವಾಹನ, 43 ಕನ್ನ ಕಳವು ಪ್ರಕರಣ ಪತ್ತೆ

    ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪರ ನಟ ಸುದೀಪ್ ಪ್ರಚಾರಕ್ಕೆ ಶಿರಾಳಕೊಪ್ಪಕ್ಕೆ ಬಂದಾಗ 18 ಸಾವಿರ ರೂ. ಮೌಲ್ಯದ ಮೊಬೈಲ್ ಕಳೆದುಹೋಗಿತ್ತು. ಕಳೆದುಹೋದ ಮೊಬೈಲ್ ಮರಳಿ ಕೈಸೇರುತ್ತದೆ ಎಂಬ ನಂಬಿಕೆಯೇ ಇರಲಿಲ್ಲ. ಆದರೂ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೆ. ಇದೀಗ ಪತ್ತೆ ಮಾಡಿ ಮೊಬೈಲ್ ಕೊಟ್ಟಿದ್ದಾರೆ. ತುಂಬ ಖುಷಿಯಾಗುತ್ತಿದೆ.

    ಶಶಿಕುಮಾರ್, ಶಿರಾಳಕೊಪ್ಪ

    ಮನೆಯಲ್ಲಿ ಗಾರೆ ಮಾಡಿಸಲೆಂದು ಇಟ್ಟಿದ್ದ ಹಣ ಹಾಗೂ ಚಿನ್ನಾಭರಣವನ್ನು ಕಳೆದ ನವೆಂಬರ್‌ನಲ್ಲಿ ಕಳವು ಮಾಡಲಾಗಿತ್ತು. ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಚಿನ್ನಾಭರಣ ಪತ್ತೆ ಮಾಡಿಕೊಟ್ಟಿದ್ದಾರೆ. ಆದರೆ ಹಣವನ್ನು ಕಳ್ಳರು ಖರ್ಚು ಮಾಡಿದ್ದಾರೆ. ಇಷ್ಟಾದರೂ ಸಿಕ್ಕಿತ್ತೆಂಬ ಸಮಾಧಾನ, ಖುಷಿ ಎರಡೂ ಆಗುತ್ತಿದೆ.

    ರೇಣುಕಮ್ಮ, ಸಾಗರ

    ದ್ರಾವತಿ ತಾಲೂಕಿನ ಹೊಳೆಗಂಗೂರಿನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿನ್ನಾಭರಣ ಕಳವು ಮಾಡಲಾಗಿತ್ತು. ಈ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದೇವು. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಚಿನ್ನಾಭರಣ ಮರಳಿಸಿದ್ದಾರೆ. ಮತ್ತೆ ಸಿಗುತ್ತವೆಂಬ ನಂಬಿಕೆಯೇ ಇರಲಿಲ್ಲ. ಆದರೆ ಪೊಲೀಸರು ಪತ್ತೆ ಮಾಡಿಕೊಟ್ಟಿದ್ದು ಅವರಿಗೆ ಧನ್ಯವಾದ ತಿಳಿಸುತ್ತೇವೆ.

    ಶೀಲಾ, ಹೊಳೆಗಂಗೂರು

    ಕಳ್ಳತನ ಆದ ಬಳಿಕ ನೊಂದವರು ವಸ್ತುಗಳು ಮರಳಿ ಸಿಗುತ್ತವೋ ಅಥವಾ ಇಲ್ಲವೋ ಎಂಬ ಚಿಂತೆಯಲ್ಲಿರುತ್ತಾರೆ. ಬೆಲೆ ಬಾಳುವ ವಸ್ತುಗಳು ಕಳವು ಆದಾಗ ಸಹಜವಾಗಿ ನೋವುಂಟಾಗುತ್ತದೆ. ಆದರೆ ವಸ್ತುಗಳು ರಿಕವರಿ ಆದಾಗ ಪೊಲೀಸರ ಮೇಲೆ ನಂಬಿಕೆ ಬರುತ್ತದೆ. ಭದ್ರಾವತಿ ಉಪ ವಿಭಾಗದಲ್ಲಿ ಹೆಚ್ಚು ರಿಕವರಿ ಮಾಡಲಾಗಿದೆ.

    ಜಿ.ಕೆ.ಮಿಥುನ್‌ಕುಮಾರ್, ಎಸ್ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts