More

    ಜಗ್ಗದ ಡಿಕೆಶಿ, ಬಗ್ಗದ ಸಿದ್ದು; ಸಿಎಂ ಆಯ್ಕೆ ವಿಳಂಬ | ನಾಯಕರ ಮನವೊಲಿಕೆಗೆ ಹೈಕಮಾಂಡ್ ಹೈರಾಣ

    ರಾಘವ ಶರ್ಮ ನಿಡ್ಲೆ,
    ನವದೆಹಲಿ: ರಾಜ್ಯ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಹೊರತಾಗಿಯೂ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಸಂಘರ್ಷ ಹೈಕಮಾಂಡನ್ನು ಹೈರಾಣಾಗಿಸಿದೆ. ಸಿಎಂ ಸ್ಥಾನದ ಬೇಡಿಕೆಯಿಂದ ಇಬ್ಬರೂ ಹಿಂದೆ ಸರಿಯದಿರುವುದು ಕಾಂಗ್ರೆಸ್ ವರಿಷ್ಠರಿಗೆ ತಲೆನೋವು ತಂದಿದೆ. ಮುಖ್ಯವಾಗಿ ಡಿಕೆ ಶಿವಕುಮಾರ್ ಅವರು ರಾಹುಲ್ ಗಾಂಧಿ ಮನವೊಲಿಕೆ ಪ್ರಯತ್ನದ ನಂತರವೂ ಪಟ್ಟು ಮುಂದುವರಿಸಿರುವುದರಿಂದ ಬುಧವಾರವೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಆಯ್ಕೆ ವಿಚಾರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ.

    ಶಾಸಕಾಂಗ ಪಕ್ಷದ ನಾಯಕನ ಹುದ್ದೆಗೆ ಇಬ್ಬರೂ ಜಗಜಟ್ಟಿಗಳಂತೆ ಸೆಣಸಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಮಧ್ಯೆ ಪರಸ್ಪರ ಸರಣಿ ಸಭೆಗಳ ನಂತರವೂ ಬುಧವಾರ ರಾತ್ರಿವರೆಗೆ ಸಿಎಂ ಯಾರೆಂಬ ನಿರ್ಧಾರ ಹೊರಬಿದ್ದಿಲ್ಲ. ರಾಹುಲ್ ಮತ್ತು ಖರ್ಗೆ ಅವರನ್ನು ಭೇಟಿಯಾದ ಬಳಿಕ ಶಿವಕುಮಾರ್ ಸೋದರ ಸುರೇಶ್ ನಿವಾಸದಲ್ಲಿ ಆಪ್ತರೊಂದಿಗೆ ಸಭೆ ನಡೆಸಿ, ನನ್ನ ನಿಲುವಲ್ಲಿ ಯಾವುದೇ ಬದಲಿಲ್ಲ, ಹೆಜ್ಜೆ ಹಿಂದಿಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

    ಈ ಬೆಳವಣಿಗೆಗಳಿಂದ ಆಕ್ರೋಶಗೊಂಡ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ಖರ್ಗೆ ನಿವಾಸದಿಂದ ಹೊರಬಂದು, ಇನ್ನೂ ಸಮಾಲೋಚನೆ ನಡೆಯುತ್ತಿದೆ. ಶಾಸಕಾಂಗ ಪಕ್ಷದ ನಾಯಕನ ತೀರ್ವನವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಏತನ್ಮಧ್ಯೆ, ಪುಷ್ಪಾ ಅಮರನಾಥ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸುರ್ಜೆವಾಲಾ ತೀರ್ವನಿಸಿದ್ದಾರೆ ಎನ್ನಲಾಗಿದ್ದು, ಹೊಸಬರನ್ನು ನೇಮಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ. ಕಳೆದೆರಡು ದಿನಗಳಿಂದ ಪುಷ್ಪಾ ಅಮರ್ ನಾಥ್ ದೆಹಲಿಯಲ್ಲಿದ್ದು, ಸಿದ್ದರಾಮಯ್ಯ ಜತೆಗೆ ಕಾಣಿಸಿಕೊಳ್ಳುತ್ತಿದ್ದಾರೆ.

    ಪರಿಶ್ರಮಕ್ಕೆ ಬೆಲೆ ಬೇಕು: 5 ವರ್ಷ ಸಿಎಂ, ಅದಕ್ಕೂ ಮುನ್ನ ವಿಪಕ್ಷ ನಾಯಕ, ಕಳೆದ 4 ವರ್ಷ ಕೂಡ ವಿಪಕ್ಷ ನಾಯಕ. ಇಷ್ಟೆಲ್ಲ ಅಧಿಕಾರ ಅನುಭವಿಸಿದ ಮೇಲೂ ಮತ್ತದೇ ವ್ಯಕ್ತಿಗೆ ಅಧಿಕಾರ ನೀಡುವುದಾದರೆ ನಾವ್ಯಾಕೆ ಪಕ್ಷಕ್ಕಾಗಿ ಈ ಪರಿ ಕೆಲಸ ಮಾಡಬೇಕು ಎಂಬ ಡಿಕೆಶಿ ಗಡಸು ದನಿ ಹೈಕಮಾಂಡ್​ಗೆ ಪರಿಸ್ಥಿತಿಯನ್ನು ಅರ್ಥಮಾಡಿಸಿದೆ. ದಿನೇಶ್ ಗುಂಡೂರಾವ್ ಅಧ್ಯಕ್ಷ ಸ್ಥಾನ ಬಿಟ್ಟಾಗ ಪಕ್ಷದ ಪರಿಸ್ಥಿತಿ ಏನಿತ್ತು? ಈಗ ಹೇಗೆ ಬದಲಾಗಿದೆ ಎನ್ನುವುದು ಕಣ್ಣ ಮುಂದೆಯೇ ಇದೆ. ನಮ್ಮ ಪರಿಶ್ರಮಕ್ಕೆ ಬೆಲೆ ಕೇಳುತ್ತಿದ್ದೇವೆ. ಜನರ ಆಶೋತ್ತರ ಈಡೇರಿಸುವ ಅವಕಾಶ ನೀಡುವುದು ನಿಮ್ಮ ಜವಾಬ್ದಾರಿ ಎಂದು ಡಿಕೆಶಿ ವರಿಷ್ಠರಿಗೆ ತಿಳಿಸಿ ಬಂದಿದ್ದಾರೆ.

    ಪರಿಸ್ಥಿತಿ ಬಿಗಡಾಯಿಸಲು ಐದು ಕಾರಣ

    • ಸಿದ್ದರಾಮಯ್ಯ ಪರವಾಗಿ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಬಲವಾಗಿ ನಿಂತಿರುವುದು.
    • ನನ್ನ ಪರ ಹೆಚ್ಚು ಶಾಸಕರಿದ್ದಾರೆಂದು ಸಿದ್ದರಾಮಯ್ಯ ಹೈಕಮಾಂಡ್​ಗೆ ಮನವರಿಕೆ ಮಾಡಿಕೊಟ್ಟಿರುವ ಕಾರಣ, ಪಕ್ಷಕ್ಕೆ ಇದನ್ನು ಕಡೆಗಣಿಸಲು ಆಗುತ್ತಿಲ್ಲ.
    • ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಬಗ್ಗೆ ಖಚಿತತೆ ಇಲ್ಲ. ಬಹಿರಂಗವಾಗಿ ಸ್ಪಷ್ಟಪಡಿಸಲು ಪಕ್ಷ ಮುಂದಾಗಿಲ್ಲ.
    • ಡಿ.ಕೆ.ಶಿವಕುಮಾರ್ ಬೇಡಿಕೆ ಸರಿ ಇದೆ ಎನ್ನುವ ಹೈಕಮಾಂಡ್, ಸಿದ್ದರಾಮಯ್ಯ ಮನವೊಲಿಸಲು ಹೆಚ್ಚು ಪ್ರಯತ್ನ ಮಾಡಿಲ್ಲ.
    • ಅಧಿಕಾರ ಹಂಚಿಕೆ ಸೂತ್ರ ಜಾರಿಯಾಗುವ ಬಗ್ಗೆ ಅಪನಂಬಿಕೆ ಹೆಚ್ಚಾಗಿದೆ. ಈ ಕಾರಣಕ್ಕೆ ಇಬ್ಬರೂ ಹಿಂದೇಟು ಹೊಡೆದಿದ್ದಾರೆ.

    ಬಿಕ್ಕಟ್ಟು ಪರಿಹಾರಕ್ಕೆ ಮೂರೇ ದಾರಿ

    • ಅಧಿಕಾರ ಹಂಚಿಕೆ ಸೂತ್ರದ ಮೊದಲ ಎರಡೂವರೆ ವರ್ಷ ಅಧಿಕಾರವನ್ನು ಡಿಕೆಶಿ ಅವರಿಗೆ ನೀಡುವುದು. ಇದಕ್ಕಾಗಿ ಸಿದ್ದರಾಮಯ್ಯರನ್ನು ರಾಹುಲ್ ಗಾಂಧಿ ಮನವೊಲಿಸುವುದು.
    • ಡಿಕೆಶಿ ಅವರನ್ನು ಸೋನಿಯಾ ಗಾಂಧಿ ಅಥವಾ ಪ್ರಿಯಾಂಕಾ ಖುದ್ದಾಗಿ ಮನವೊಲಿಸಿ,2 ವರ್ಷ ವಾದ ಕೂಡಲೇ ಅಧಿಕಾರದ ಖಾತರಿ ನೀಡುವುದು.
    • ಸಿದ್ದರಾಮಯ್ಯ, ಶಿವಕುಮಾರ್ ಅವರನ್ನು ಹೊರತುಪಡಿಸಿ ಖರ್ಗೆ ಅಥವಾ ಪರಮೇಶ್ವರ್ ಅವರಿಗೆ ಲೋಕಸಭೆ ಚುನಾವಣೆವರೆಗೆ ಸಿಎಂ ಮಾಡುವುದು. ಇದರ ಜಾರಿ ಕಷ್ಟಸಾಧ್ಯ.

    ಮುಂದೇನು?

    • ಡಿ.ಕೆ. ಶಿವಕುಮಾರ್ ಪರವಾಗಿ ಒಕ್ಕಲಿಗ ಸಮುದಾಯ ದನಿ ಎತ್ತುವ ಎಲ್ಲ ಲಕ್ಷಣ ಕಾಣಿಸಿದೆ. ಸಿದ್ದರಾಮಯ್ಯ ಪರ ಕುರುಬ ಸಮುದಾಯ ಬೀದಿಗಿಳಿಯಲಿದೆ. ಇದು ಪಕ್ಷಕ್ಕೆ ಇನ್ನಷ್ಟು ಇಕ್ಕಟ್ಟು ಸೃಷ್ಟಿಸಲಿದೆ.
    • ಇವರಿಬ್ಬರಲ್ಲಿ ಸಿಎಂ ಆಗದೆ ನಂತರ ಪಕ್ಷದ ಒತ್ತಡಕ್ಕೆ ಸಿಲುಕಿ ಮೌನಕ್ಕೆ ಜಾರಿದರೂ, ಅವರು ಪ್ರತಿನಿಧಿಸುವ ಸಮುದಾಯದ ಕಾವನ್ನು ಪಕ್ಷ ಎದುರಿಸಲೇ ಬೇಕಾಗುತ್ತದೆ. ಇದರ ಪರಿಣಾಮ ಲೋಕಸಭೆ ಚುನಾವಣೆಯ ಮೇಲೂ ಆಗಲಿದೆ.
    • ಪಕ್ಷದಲ್ಲಿ 2 ಬಣ ಕಾಣಿಸಿದ್ದು, ಶಾಸಕರು ತಮ್ಮ ನಾಯಕನ ಜತೆ ಗುರುತಿಸಿಕೊಳ್ಳಲಾರಂಭಿಸಿದ್ದಾರೆ. ಸರ್ಕಾರ ರಚನೆಯಾದ ಬಳಿಕವೂ ಅಡ್ಡ ಪರಿಣಾಮ ಹೆಚ್ಚು.

    ಸೋನಿಯಾ ಕರೆ ಮಾಡಿಲ್ಲ!

    ನಾಯಕಿ ಸೋನಿಯಾ ಗಾಂಧಿ ಭೇಟಿಯಾಗಲು ಡಿಕೆಶಿ ಬಯಸಿದ್ದರೂ ಅವರು ಶಿಮ್ಲಾದಲ್ಲಿರುವುದರಿಂದ ಭೇಟಿ ಸಾಧ್ಯವಾಗಿಲ್ಲ. ಹೀಗಾಗಿ, ಡಿಕೆಶಿ ಜತೆ ಸೋನಿಯಾ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, 2 ವರ್ಷ ಆದ ಬಳಿಕ ನಾವೇ ಅಧಿಕಾರ ಹಸ್ತಾಂತರ ಮಾಡಿಸುತ್ತೇವೆ. ಅವರೊಂದಿಗೆ ಸಂಪುಟದಲ್ಲಿ ಜತೆಯಾಗಿ ಕೆಲಸ ಮಾಡಲು ಇಷ್ಟವಿಲ್ಲವೆಂದಾದರೆ ಪಕ್ಷದ ಜವಾಬ್ದಾರಿಯಲ್ಲಿ ಮುಂದುವರಿಯಿರಿ. ಪಕ್ಷಕ್ಕಾಗಿನ ನಿಮ್ಮ ಪ್ರಯತ್ನದ ಅರಿವಿದೆ ಎಂದು ಭರವಸೆ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ರೊಬ್ಬರು ತಿಳಿಸಿದರು. ಈ ಬಗ್ಗೆ ವಿಜಯವಾಣಿಗೆ ಸ್ಪಷ್ಟೀಕರಣ ನೀಡಿರುವ ಸಂಸದ ಡಿಕೆ ಸುರೇಶ್, ಇಂಥ ಮಾತುಕತೆ ನಡೆದಿಲ್ಲ. ಅಧಿಕಾರ ಹಂಚಿಕೆ ಬಗ್ಗೆ ಮಾತುಕತೆಯೇ ಆಗಿಲ್ಲ’ ಎಂದಿದ್ದಾರೆ.

    ಹಬ್ಬಿದ ಸುಳ್ಳು ಸುದ್ದಿ

    ಬುಧವಾರ ಬೆಳಗ್ಗೆ 11.30ರ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹಬ್ಬಿತ್ತು. ಯಾವುದೇ ಅಧಿಕೃತ ಘೊಷಣೆಯಾಗದಿದ್ದರೂ ಈ ಸುದ್ದಿ ಹಬ್ಬಿದ್ದು ಹೇಗೆ ಎಂಬುದು ವರಿಷ್ಠ ನಾಯಕರನ್ನು ಕಕ್ಕಾಬಿಕ್ಕಿಗೊಳಿಸಿತ್ತು. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ತಮ್ಮ ಟ್ವಿಟರ್ ಖಾತೆಯಲ್ಲಿ ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆಯಾಗಿದ್ದಾರೆ’ ಎಂದು ಟ್ವೀಟ್ ಮಾಡಿದ್ದಲ್ಲದೆ, ಟಿವಿ ಮಾಧ್ಯಮಕ್ಕೂ ಹೇಳಿಕೆ ನೀಡಿ, ಸುಳ್ಳು ಸುದ್ದಿ ಹಬ್ಬಿಸಿದ್ದರು. ಅಲ್ಲದೆ, ಸಿದ್ದರಾಮಯ್ಯ ಆಪ್ತ ಬಣವೂ ಹಲವರಿಗೆ ಫೋನ್ ಮಾಡಿ, ಸಾಹೇಬರ ಹೆಸರು ಕ್ಲಿಯರ್ ಆಗಿದೆ ಎಂದು ತಿಳಿಸಿದ್ದರು. ಇದು ಡಿಕೆಶಿ ಮತ್ತು ಬಣವನ್ನು ಮತ್ತಷ್ಟು ವ್ಯಘ್ರಗೊಳಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts