More

    ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರಕಟ: ಇಬ್ಬರಿಗೆ ಗೌರವ ಪ್ರಶಸ್ತಿ, 7 ವಿಭಾಗಗಳಲ್ಲಿ 16 ಮಂದಿ ವಾರ್ಷಿಕ ಪ್ರಶಸ್ತಿ..

    ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2022-23ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಪ್ರಕಟಿಸಿದ್ದು, ‘ಗೌರವ ಪ್ರಶಸ್ತಿ’ಗೆ ಚನ್ನರಾಯಪಟ್ಟಣದ ಕರ್ನಾಟಕ ಸಂಗೀತ ಕಲಾವಿದ ಸಿ.ಆರ್. ರಾಮಚಂದ್ರ ಹಾಗೂ ಮಂಗಳೂರಿನ ನೃತ್ಯಗುರು ಗೀತಾ ಸರಳಾಯ ಭಾಜನರಾಗಿದ್ದಾರೆ.

    ಕನ್ನಡ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ ಅಕಾಡೆಮಿ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ ಅವರು, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ, ಗಮಕ, ಕೀರ್ತನೆ ಸೇರಿ ಏಳು ವಿಭಾಗಗಳಲ್ಲಿ 16 ಕಲಾವಿದರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಗೌರವ ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು ಹಾಗೂ ವಾರ್ಷಿಕ ಪ್ರಶಸ್ತಿಯು ತಲಾ 25 ಸಾವಿರ ರೂ. ನಗದು ಮತ್ತು ಸನ್ಮಾನ ಒಳಗೊಂಡಿದೆ ಎಂದು ಹೇಳಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.

    ಕರ್ನಾಟಕ ಕಲಾಶ್ರೀ ವಾರ್ಷಿಕ ಪ್ರಶಸ್ತಿ ಪುರಸ್ಕೃತರು

    • ಕರ್ನಾಟಕ ಸಂಗೀತ: ಸಿ.ಎ. ನಾಗರಾಜ, ಮೈಸೂರು – ಹಾಡುಗಾರಿಕೆ, ಎಂ.ನಾರಾಯಣ, ಮಂಗಳೂರು – ಹಾಡುಗಾರಿಕೆ ಮತ್ತು ಪಿ.ಕೆ.ದಾಮೋದರಂ, ಪುತ್ತೂರು – ಸ್ಯಾಕ್ಸೋಫೋನ್
    • ಹಿಂದೂಸ್ತಾನಿ ಸಂಗೀತ: ಎಂ.ಪಿ.ಹೆಗಡೆ ಪಡಿಗೆರೆ, ಶಿರಸಿ – ಗಾಯನ, ಮಹಾದೇವಪ್ಪ ನಿಂಗಪ್ಪ ಹಳ್ಳಿ, ಗದಗ – ಗಾಯನ, ಹನುಮಂತಪ್ಪ ಬ. ತಿಮ್ಮಾಪೂರ, ಹಾವೇರಿ – ವಯಲಿನ್ (ಅಂಧರು), ಯ್ಯಜ್ ಖಾನ್, ಬೆಂಗಳೂರು – ಸಾರಂಗಿ/ಗಾಯನ
    • ನೃತ್ಯ: ರೋಹಿಣಿ ಇಮಾರತಿ, ಧಾರವಾಡ, ಪುಷ್ಪ ಕೃಷ್ಣಮೂರ್ತಿ, ಶಿವಮೊಗ್ಗ, ಪುರುಷೋತ್ತಮ, ಬೆಂಗಳೂರು.
    • ಸುಗಮಸಂಗೀತ: ಸಿದ್ರಾಮಪ್ಪ ಪೋಲೀಸ್ ಪಾಟೀಲ್, ಕಲಬುರಗಿ (ಅಂಧರು), ಮಧರಾ ರವಿಕುಮಾರ್, ಬೆಂಗಳೂರು,
    • ಕಥಾಕೀರ್ತನ: ಶೀಲಾ ನಾಯ್ಡು, ಬೆಂಗಳೂರು
    • ಗಮಕ: ಅನಂತ ನಾರಾಯಣ, ಹೊಸಹಳ್ಳಿ ಮತ್ತು ಚಂದ್ರಶೇಖರ ಕೇದಿಲಾಯ, ಉಡುಪಿ
    • ವಿಶೇಷ ಪ್ರಶಸ್ತಿ: ಪ್ರವೀಣ್ ಡಿ. ರಾವ್, ಬೆಂಗಳೂರು – ವಾದಕರು, ಸಂಯೋಜಕರು

    ಸಾಕ್ಷ್ಯಚಿತ್ರ ನಿರ್ಮಾಣ ಯೋಜನೆ

    ಕಲಾವಿದರ ಸಾಧನೆ ಹಾಗೂ ಸಂಗೀತ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಅಕಾಡೆಮಿ ವತಿಯಿಂದ ಪ್ರಸಕ್ತ ಸಾಲಿನಲ್ಲಿ ನಾಡಿನ ಪ್ರಸಿದ್ಧ ಕಲಾವಿದರ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಕಲಾವಿದರಾದ ಗರ್ತಿಕೆರೆ ರಾಘವೇಂದ್ರ, ಸೋಮನಾಥ ಮರಡೂರು, ಆರ್.ಎನ್. ತ್ಯಾಗರಾಜನ್ ಹಾಗೂ ಆರ್.ಎನ್. ತಾರಾನಾಥನ್ ಅವರ ಜೀವನ ಸಾಧನೆಗಳನ್ನು ಅನಾವರಣ ಮಾಡುವ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲಾಗುವುದು.
    ರಾಜ್ಯದ ಪ್ರತಿಭಾನ್ವಿತ ನೃತ್ಯ ಕಲಾವಿದರಿಂದ ಸೆ.16 ಮತ್ತು 17ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ನಾಟ್ಯ ನವೋದಯ ನೃತ್ಯ ಸಂಯೋಜನಾ ಉತ್ಸವ’ ಹಮ್ಮಿಕೊಳ್ಳಲಾಗಿದೆ. ಸಂಗೀತ, ನೃತ್ಯ ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂದರ್ಶನ ನಡೆಸಿ, 100 ಮಂದಿಗೆ ತಲಾ 10 ಸಾವಿರ ಶಿಷ್ಯವೇತನ ನೀಡಲಾಗುವುದು. ಸೆ.21ರಿಂದ 23ರವರೆಗೆ ಮಂಗಳೂರಿನಲ್ಲಿ ನೃತ್ಯ ಕಲಾವಿದರಾದ ರಾಜೇಂದ್ರ ಹಾಗೂ ನಿರುಪಮಾ ರಾಜೇಂದ್ರ ನೇತೃತ್ವದಲ್ಲಿ ಕಥಕ್ ನೃತ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ ಮಾಹಿತಿ ನೀಡಿದರು.

    ಖ್ಯಾತ ನಟನಿಗೆ ಕ್ಯಾನ್ಸರ್​, ಧನಸಹಾಯಕ್ಕಾಗಿ ಸಾರ್ವಜನಿಕರಲ್ಲಿ ಕೋರಿಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts