More

    ರಾಹುಲ್ ಗಾಂಧಿ ಸೂಚನೆಯಂತೆ ಕೇರಳ ವ್ಯಕ್ತಿಗೆ ರಾಜ್ಯ ಸರ್ಕಾರ ಪರಿಹಾರ: ವಿಜಯೇಂದ್ರ, ಸಿಟಿ ರವಿ ಖಂಡನೆ

    ಬೆಂಗಳೂರು: ಕೇರಳದ ವಯನಾಡ್‍ನಲ್ಲಿ ಇತ್ತೀಚೆಗೆ ಆನೆ ತುಳಿತಕ್ಕೆ ಒಳಗಾಗಿ ಮೃತಪಟ್ಟ ವ್ಯಕ್ತಿಗೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರ ಸೂಚನೆಯಂತೆ ಕರ್ನಾಟಕ ಸರ್ಕಾರ 15 ಲಕ್ಷ ರೂ. ಪರಿಹಾರ ಘೋಷಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ:“ಕೊಟ್ಟಿದ್ದು ಮಾಡಿದ್ದು ಹೇಳಬಾರದು…”: ಕಾಟೇರ ಚಿತ್ರದ ಕಥೆ ಬಗ್ಗೆ ಮಾತನಾಡಿದ ನಿರ್ಮಾಪಕ ಉಮಾಪತಿ ಗೌಡಗೆ ಡಿ ಬಾಸ್ ಪಂಚ್

    ವಿಧಾನಸೌಧದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಒಂದು ಕಡೆ ರಾಜ್ಯದಲ್ಲಿ ಬರಗಾಲವಿದ್ದು, ರೈತರಿಗೆ ಹೆಕ್ಟೇರಿಗೆ 2 ಸಾವಿರವನ್ನು ಭಿಕ್ಷೆಯಂತೆ ಕೊಡಲಾಗುತ್ತಿದೆ. ಇನ್ನೊಂದೆಡೆ ರಾಹುಲ್ ಗಾಂಧಿ, ಕಾಂಗ್ರೆಸ್ ಹೈಕಮಾಂಡನ್ನು ತೃಪ್ತಿಪಡಿಸಲು, ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ನಮ್ಮ ರಾಜ್ಯದ ತೆರಿಗೆಯನ್ನು ದುರುಪಯೋಗಪಡಿಸಿಕೊಂಡದ್ದು ಖಂಡನೀಯ ಎಂದು ಟೀಕಿಸಿದರು.

    ರಾಜ್ಯ ಸರ್ಕಾರ ಯಾರನ್ನು ಕೇಳಿ ಇಂಥ ನಿರ್ಧಾರ ಕೈಗೊಂಡಿದೆ ಎಂದು ಪ್ರಶ್ನಿಸಿದ ಅವರು, ನಿಮ್ಮ ನಾಯಕರನ್ನು ಖುಷಿ ಪಡಿಸಲು ಏನು ಬೇಕಾದರೂ ಮಾಡ್ತೀರ. ಎಂತ ನಿರ್ಧಾರ ತೆಗದುಕೊಳ್ತೀರ. ಹೇಳುವವರು ಕೇಳುವವರು ಯಾರೂ ಇದ್ದಂತಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಕಿಡಿಕಾರಿದರು.

    ಸಂಚಾರ ನಿಷೇಧ ರದ್ದು ಮಾಡಿರಲಿಲ್ಲ: ಬಂಡೀಪುರ ಸಂರಕ್ಷಿತ ಅರಣ್ಯ ಪ್ರದೇಶ. ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಅಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಲಾಗಿದೆ. ರಾತ್ರಿ ವಾಹನ ಸಂಚಾರ ನಿಷೇಧವನ್ನು ರದ್ದು ಮಾಡಿ, ಕೇರಳ- ಕರ್ನಾಟಕದ ಮಧ್ಯೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಅರಣ್ಯ ಸಚಿವರು ಸಾಕಷ್ಟು ಒತ್ತಡ ಹಾಕಿದ್ದರು. ಆದರೆ, ಆಗ ಯಡಿಯೂರಪ್ಪನವರ ಮೇಲೆ ಕೇರಳ ಸಿಎಂ ಫೋನ್ ಮಾಡಿ ಒತ್ತಡ ಹಾಕಿದ್ದರೂ ಯಡಿಯೂರಪ್ಪನವರು ಮತ್ತು ಬಿಜೆಪಿ ಸರಕಾರ ವಾಹನ ಸಂಚಾರ ನಿಷೇಧ ರದ್ದು ಮಾಡಿರಲಿಲ್ಲ. ಅದು ಮೀಸಲು ಅರಣ್ಯವಾಗಿದ್ದು, ಪ್ರಾಣಿಗಳ ಸಂಚಾರಕ್ಕೆ ತೊಂದರೆ ಆಗುವುದರಿಂದ ರಾತ್ರಿ ವಾಹನ ಸಂಚಾರ ರದ್ದು ಕುರಿತು ಗಟ್ಟಿ ನಿರ್ಧಾರ ಮಾಡಿತ್ತು ಎಂದು ಹೇಳಿದರು.

    ಆದರೆ, ಈಗ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ರಾತ್ರಿ ಹೊತ್ತು ತುರ್ತು ವಾಹನಗಳಿಗೆ ಅವಕಾಶ ಕೊಡುವ ಧಾಟಿಯಲ್ಲಿ ಉತ್ತರ ಕೊಟ್ಟಿದ್ದಾರೆ ಎಂದು ಆಕ್ಷೇಪ ಸೂಚಿಸಿದರು. ತಮ್ಮ ಹೈಕಮಾಂಡನ್ನು ಖುಷಿಪಡಿಸಲು, ತಮ್ಮ ನಾಯಕ ರಾಹುಲ್ ಗಾಂಧಿಯವರನ್ನು ಖುಷಿ ಪಡಿಸಲು ರಾಜ್ಯದ ಹಿತಾಸಕ್ತಿಯನ್ನು ಕಡೆಗಣಿಸಲಾಗುತ್ತಿದೆ. ಅಲ್ಲದೆ ರಾಜ್ಯದ ಜನರ ದುಡ್ಡನ್ನು ಪೋಲು ಮಾಡುತ್ತಿದ್ದಾರೆ. ಮತ್ತೊಂದು ಕಡೆ ಕಾಡುಪ್ರಾಣಿಗಳಿಗೆ ತೊಂದರೆ ಕೊಡುವಂಥ ತೀರ್ಮಾನ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.

    ರಾಜ್ಯದ ಹಿತಾಸಕ್ತಿ ಬಲಿ ಕೊಡುವ, ರಾಜ್ಯದ ಹಣ ದುರುಪಯೋಗ ಮಾಡುವ, ಬಂಡಿಪುರದಲ್ಲಿ ಪ್ರಾಣಿಗಳಿಗೆ ತೊಂದರೆ ಆಗುವಂಥ ತೀರ್ಮಾನ ಮಾಡಬಾರದು ಎಂದು ಅವರು ಆಗ್ರಹಿಸಿದರು.

    ಕರ್ನಾಟಕದ ಹಣ ಕೇರಳಕ್ಕೆ ಕೊಡಲು ನಾಚಿಕೆ ಆಗಲ್ವ: ಸಿಟಿ ರವಿ ಟೀಕೆ

    ಘಟನೆ ನಡೆದಿರೋದು ಕೇರಳದಲ್ಲಿ, ಪರಿಹಾರ ಕೊಡಬೇಕಿರೋದು ಕೇರಳ ಸರ್ಕಾರ ಆನೆ ಕರ್ನಾಟಕದ್ದು, ಕೇರಳದ್ದು, ತಮಿಳುನಾಡಿನದ್ದು ಅಂತ ಸೀಲ್ ಹಾಕಿದ್ದಾರಾ. ಹೈಕಮಾಂಡ್ ಮೆಚ್ಚಿಸಲು ರಾಜಕೀಯ ಹಿತಾಸಕ್ತಿಗೆ ಕರ್ನಾಟಕದ ಹಣ ಬಳಸಿಕೊಳ್ಳುತ್ತಿದ್ದಾರೆ ರಾಜ್ಯ ಸರ್ಕಾರ ಮಾನ-ಮರ್ಯಾದೆ ಎಲ್ಲವನ್ನೂ ಬಿಟ್ಟಿದೆ ಎಂದು ಮಾಜಿ ಶಾಸಕ ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿ ನನ್ನ ತೆರಿಗೆ ನನ್ನ ಹಕ್ಕು ಅಂದ್ರು, ನಿಮ್ಮ ರಾಜಕೀಯ ಹಿತಾಸಕ್ತಿಗೆ ಕರ್ನಾಟಕದ ಹಣವನ್ನು ಕೇರಳಕ್ಕೆ ಕೊಡಲು ನಾಚಿಕೆ ಆಗಲ್ವ ಎಂದು ಟೀಕಿಸಿದರು.

    ಕೇರಳದಲ್ಲಿ ನಿಮ್ಮದ್ದೇ ಮೈತ್ರಿ ಕೂಟದ ಸರ್ಕಾರವಿದೆ, ಪರಿಹಾರ ಕೊಡಿಸೋ ಯೋಗ್ಯತೆ ಇಲ್ವಾ ದೆಹಲಿಯಲ್ಲಿ ಎಲ್ಲಾ ಒಂದು ಅಂತಾರೆ, ಪರಿಹಾರ ಕೊಡ್ಸಕ್ಕೆ ರಾಹುಲ್ ಗಾಂಧಿಗೆ ಆಗಲ್ವ ಕರ್ನಾಟಕದಲ್ಲಿ ನಿಮ್ಮ ವೇಣುಗೋಪಾಲ್ ದು ಏನು ನಡೆಯಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜಮ್ಮುವಿನಲ್ಲಿ 32,000 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ನರೇಂದ್ರ ಮೋದಿ ಚಾಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts