More

    ಕತ್ತಲೆಯಲ್ಲಿ ಕರಾವಳಿ ಬೈಪಾಸ್!

    ಉಡುಪಿ: ಮಂಗಳೂರು-ಕುಂದಾಪುರ-ಉಡುಪಿ-ಮಲ್ಪೆ ರಸ್ತೆಯ ಪ್ರಮುಖ ಸಂಪರ್ಕ ಕೇಂದ್ರ ಕರಾವಳಿ ಬೈಪಾಸ್ ಜಂಕ್ಷನ್ ಫ್ಲೈ ಓವರ್‌ಗೆ ಒಂದು ವರ್ಷ ಕಳೆದಿದ್ದು, ಇದೂವರೆಗೂ ಲೈಟ್ ಸಂಪರ್ಕ ಕಲ್ಪಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    800 ಮೀಟರ್ ಉದ್ದದ ಫ್ಲೈ ಓವರ್ 11 ಮೀಟರ್ ಅಗಲದ ಷಟ್ಪಥ ರಸ್ತೆ ಹೊಂದಿದೆ. ಒಮ್ಮೆಲೆ ಮೂರು ಘನ ವಾಹನಗಳು ಒಟ್ಟಿಗೆ ಸಾಗಬಹುದು. ಲೈಟ್ ಸಂಪರ್ಕ ಕಲ್ಪಿಸಲು ಈಗಾಗಲೇ ಕಂಬಗಳನ್ನು ಅಳವಡಿಸಲಾಗಿದೆ. ಕೆಲವು ಬಲ್ಪ್‌ಗಳನ್ನು ಹಾಕಿದ್ದಾರೆ. 20ಕ್ಕೂ ಅಧಿಕ ಕಂಬಗಳನ್ನು ವಿದ್ಯುತ್ ಸಂಪರ್ಕಕ್ಕಾಗಿ ಅಳವಡಿಸಲಾಗಿದೆ. ಆದರೆ ವರ್ಷ ಕಳೆಯುತ್ತಾ ಬಂದರೂ ಫ್ಲೈಓವರ್ ಮಾತ್ರ ಇನ್ನೂ ಕಗ್ಗತ್ತಲೆಯಲ್ಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿಯೂ ಈ ಬಗ್ಗೆ ಪ್ರಸ್ತಾಪಗೊಂಡಿದ್ದು, ಅಧಿಕಾರಿಗಳು ಈ ಬಗ್ಗೆ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ. ಸಂಸದರ ದಿಶಾ ಸಭೆಯಲ್ಲಿಯೂ ಈ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಳ್ಳಲಾಗಿದ್ದು, ಆದರು ಯಾವುದೆ ಪ್ರಗತಿ ಕಂಡು ಬಂದಿಲ್ಲ.

    ಮೋಜು-ಮಸ್ತಿಯ ತಾಣ: ಲೈಟ್ ವ್ಯವಸ್ಥೆ ಇಲ್ಲದ ಇರುವುದರಿಂದ ಕಾರು, ಬೈಕುಗಳಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡು ಬರುವ ಯುವಕರ ದಂಡು ಇಲ್ಲಿ ತಡರಾತ್ರಿವರೆಗೂ ಮೋಜು ಮಸ್ತಿ ಮಾಡುತ್ತಾರೆ. ಈ ಬೆಳವಣಿಗೆ ವಾಹನ ಸವಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೂಡಲೆ ಲೈಟ್ ವ್ಯವಸ್ಥೆಯನ್ನು ಕಲ್ಪಿಸಿ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

    ರಾತ್ರಿ ಸಂಚಾರ ಅಪಾಯ: ಜಂಕ್ಷನ್‌ನ ಸರ್ವಿಸ್ ರಸ್ತೆ, ಫ್ಲೈಓವರ್ ಮೇಲೆ ದ್ವಿಚಕ್ರ ವಾಹನ, ಕಾರು, ಮೀನು ಸಾಗಾಟ ಕಂಟೇನರ್, ಟೆಂಪೊ, ಪ್ರವಾಸಕ್ಕೆ ಬರುವ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಫ್ಲೈಓವರ್ ಮಾತ್ರವಲ್ಲದೇ ಇದಕ್ಕೆ ಹೊಂದಿಕೊಂಡಿರುವ 4 ದಿಕ್ಕಿನ ಸರ್ವಿಸ್ ರಸ್ತೆ ಮತ್ತು ಅಂಡರ್‌ಪಾಸ್‌ನಲ್ಲಿಯೂ ದೀಪದ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಇದರಿಂದ ರಾತ್ರಿ 7 ಗಂಟೆ ಬಳಿಕ ಸಂಚಾರ ಸಂಕಷ್ಟ. ಅಲ್ಲದೆ ಸರ್ವಿಸ್ ರಸ್ತೆಯಲ್ಲಿ ವಿರುದ್ದ ದಿಕ್ಕಿನ ವಾಹನ ಸಂಚಾರ ಮಿತಿ ಮೀರಿದೆ. ಅಂಡರ್‌ಪಾಸ್‌ನಲ್ಲಿ ಸಂಚರಿಸುವಾಗ ಸಾಕಷ್ಟು ಜಾಗ್ರತೆ ವಹಿಸಬೇಕಿದೆ.

    ಕರಾವಳಿ ಬೈಪಾಸ್ ಜಂಕ್ಷನ್ ಫ್ಲೈ ಓವರ್‌ಗೆ ಕಂಬ ಮತ್ತು ಕೆಲವು ಬಲ್ಪ್ ಅಳವಡಿಸಿ ಹಲವು ತಿಂಗಳು ಕಳೆದಿದೆ. ಇಲ್ಲಿವರೆಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಸರ್ವಿಸ್ ರಸ್ತೆ, ಅಂಡರ್‌ಪಾಸ್ ರಸ್ತೆಯದ್ದು ಇದೆ ಸಮಸ್ಯೆಯಾಗಿದೆ. ಇದರಿಂದ ವಾಹನ ಸವಾರರಿಗೆ ರಾತ್ರಿ ಸಂಚಾರ ಆತಂಕಕ್ಕೆ ಕಾರಣವಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಲೈಟ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಶೀಘ್ರ ಕ್ರಮಕೈಗೊಳ್ಳಬೇಕು.
    -ಚೇತನ್ ಮಟಪಾಡಿ, ಉಡುಪಿ ನಿವಾಸಿ

    ಕರಾವಳಿ ಬೈಪಾಸ್ ಫ್ಲೈಓವರ್ ಲೈಟ್ ವ್ಯವಸ್ಥೆ ಮಾಡುವ ಬಗ್ಗೆ ಹಿಂದಿನ ದಿಶಾ ಸಭೆಯಲ್ಲಿಯೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಹೆದ್ದಾರಿ ಸಮಸ್ಯೆ ನಿವಾರಣೆ, ಕಾಮಗಾರಿ ವಿಳಂಬಕ್ಕೆ ಸಂಬಂಧಿಸಿ ಹೆದ್ದಾರಿ ಅಧಿಕಾರಿಗಳ ಪ್ರತ್ಯೇಕ ಸಭೆ ಶೀಘ್ರ ನಡೆಸಲಾಗುವುದು
    – ಶೋಭಾ ಕರಂದ್ಲಾಜೆ, ಸಂಸದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts