More

    ಕಾರಟಗಿಯಲ್ಲಿ ದಾಖಲೆಯ ಮಳೆ: ತುಂಬಿ ಹರಿದ 31ನೇ ಉಪಕಾಲುವೆ; 16ನೇ ವಾರ್ಡ್ ಬಹುತೇಕ ಜಲಾವೃತ

    ಕಾರಟಗಿ: ಸೋಮವಾರ ಮಧ್ಯರಾತ್ರಿಯಿಂದ ಬೆಳಗ್ಗವರೆಗೆ ಸುರಿದ ಧಾರಾಕಾರ ಮಳೆ ಅವಾಂತರ ಸೃಷ್ಟಿಸಿತು. ಪಟ್ಟಣದಲ್ಲಿ 110.6 ಮಿಮೀ ದಾಖಲೆಯ ಮಳೆಯಾಗಿದ್ದು, ತಾಲೂಕಿನ ವಿವಿಧ ಗ್ರಾಮಗಳಲ್ಲೂ ವರುಣ ಅಬ್ಬರಿಸಿದ್ದಾನೆ.

    ಪಟ್ಟಣದ ಮಧ್ಯಭಾಗದಿಂದ ಹಾದುಹೋಗುವ ತುಂಗಭದ್ರಾ ಎಡದಂಡೆ ಕಾಲುವೆಯ 31ನೇ ಉಪನಾಲೆಯಲ್ಲಿ ಯಥೇಚ್ಛವಾಗಿ ನೀರು ಹರಿದ ಪರಿಣಾಮ ಪಕ್ಕದ 16ನೇ ವಾರ್ಡ್ ಬಹುತೇಕ ಜಲಾವೃತವಾಗಿತ್ತು. ನಾಲೆಯ ಮೇಲಿನ ಜಾಗದಲ್ಲಿ ಹಲವು ವರ್ಷಗಳಿಂದ ಬಡವರು ಹಾಕಿಕೊಂಡಿದ್ದ ಗುಡಿಸಲು, ಶೆಡ್‌ಗಳಿಗೆ ನೀರು ನುಗ್ಗಿದ ಪರಿಣಾಮ ಜೀವ ಕೈಯಲ್ಲಿ ಜಾಗರಣೆ ಮಾಡಿದರು. ಎಡದಂಡೆ ಕಾಲುವೆಯಿಂದ ಉಪನಾಲೆಗೆ ನೀರು ಪೂರೈಕೆ ಪ್ರಮಾಣ ಕಡಿಮೆ ಮಾಡಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತು. ಪುರಸಭೆ ಸದಸ್ಯರಾದ ಎಚ್.ಈಶಪ್ಪ, ದೊಡ್ಡಬಸವ ಬೂದಿ, ನೀರು ಹರಿವು ತಗ್ಗಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಸಾರ್ವಜನಿಕರು ಮಧ್ಯಾಹ್ನದವರೆಗೆ ಪರದಾಡಬೇಕಾಯಿತು.

    ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಚರಂಡಿ ತುಂಬಿ ರಸ್ತೆಗೆ ನೀರು ಹರಿಯಿತು. 12ನೇ ವಾರ್ಡ್ ರಾಜೀವ್‌ಗಾಂಧಿ ನಗರದಲ್ಲಿ 31ನೇ ಕಾಲುವೆಯ ಉಪಕಾಲುವೆ ಒಡೆದು ಬಡಾವಣೆಗೆ ನೀರು ನುಗ್ಗಿತು. ಇದರಿಂದ ಮನೆಗಳಿಗೆ ಕೊಳಚೆ ನೀರು ಹರಿದಿದ್ದರಿಂದ ತಡೆಯಲು ಜನರು ಪರದಾಡಿದರು. 6ನೇ ವಾರ್ಡ್‌ನಲ್ಲಿ ಕಲಾವತಿ ಹಂಪಯ್ಯ ಎನ್ನುವವರ ಮನೆ ಕುಸಿದಿದೆ.

    ಮುಂಗಾರು ಹಂಗಾಮಿನ ಭತ್ತನಾಟಿ ಪ್ರಕ್ರಿಯೆ ಕೊನೆಯ ಹಂತ ತಲುಪಿದೆ. ಧಾರಾಕಾರ ಮಳೆಗೆ ಭತ್ತದ ಗದ್ದೆಗಳು ನೀರಲ್ಲಿ ಸಂಪೂರ್ಣವಾಗಿ ಮುಳುಗಿದ್ದವು. ಜಮೀನಿನಲ್ಲಿನ ನೀರು ಖಾಲಿಗೊಳಿಸಲು ರೈತರು ಮಳೆಯಲ್ಲಿಯೇ ಹರಸಾಹಸ ಪಡುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts