More

    ರೈಲ್ವೆ ನಿಲ್ದಾಣದ ರಸ್ತೆ ಕಳಪೆ!

    ಪಂಪಾರಡ್ಡಿ ಅರಳಹಳ್ಳಿ ಕಾರಟಗಿ
    ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆ ಮಾತು ಅಕ್ಷರಶಃ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಅನ್ವಯವಾಗುತ್ತದೆ.

    ಆರ್.ಜಿ.ಮುಖ್ಯ ರಸ್ತೆಯಿಂದ ಕೊಪ್ಪಳ ಗ್ರೀನ್ ಪವರ್ ಲಿಮಿಟೆಡ್(ಕೆಜಿಪಿಎಲ್) ಮುಂಭಾಗದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 2021ನೇ ಸಾಲಿನ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ (ಡಿಎಂಎಫ್)ಯಿಂದ 85ಲಕ್ಷ ರೂ. ವೆಚ್ಚದಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ(ಕೆಆರ್‌ಐಡಿಎಲ್)ದಿಂದ ಸಿಸಿ ನಿರ್ಮಿಸಲಾಗುತ್ತಿದೆ. ಸರ್ಕಾರದ ಅಂಗ ಸಂಸ್ಥೆಯಾದ ಕೆಆರ್‌ಡಿಎಲ್‌ನ ಇಂಜಿನಿಯರ್‌ಗಳೇ ಕಳಪೆ ಕಾಮಗಾರಿ ನಡೆಸುತ್ತಿದ್ದರೂ ಚುನಾಯಿತ ಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಜಾಣ ನಡೆ ಅನುಸರಿಸುತ್ತಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಕೆಆರ್‌ಐಡಿಎಲ್ ಅಂದಾಜು ಪತ್ರಿಕೆಯ ಪ್ರಸ್ತಾವನೆಗೆ ಡಿಎಂಎಫ್ 2022ರ ಮೇ 30ರಂದು ಜಿಲ್ಲಾಧಿಕಾರಿಗಳೇ ಅನುಮೋದನೆ ನೀಡಿದ್ದಾರೆ. ಕಾಮಗಾರಿ ನಡೆಸಲು 2022ರ ಜು.12ರಂದು 42.50 ಲಕ್ಷ ರೂ.ಗಳನ್ನು ಡಿಎಂಎಫ್ ಕೆಆರ್‌ಐಡಿಎಲ್‌ಗೆ ಅನುದಾನ ಬಿಡುಗಡೆಗೊಳಿಸಿದೆ. ಅಂದಾಜು ಪತ್ರಿಕೆಯ ಪ್ರಕಾರ 360 ಮೀಟರ್(1180.8 ಅಡಿ) ಉದ್ದ, 7.20 ಮೀ.(23.6 ಅಡಿ) ಅಗಲವಿದೆ. ಇದರಲ್ಲಿ ಈಗಿರುವ ರಸ್ತೆಯ ಮಣ್ಣನ್ನು ಒಂದೂವರೆ ಅಡಿ ಆಳ ತೆಗೆದು ಅದನ್ನು ಸ್ಥಳಾಂತರಿಸಬೇಕು. ಬಳಿಕ ಸಮತಟ್ಟುಗೊಳಿಸುವ ಜತೆಗೆ ನೀರು ಸಿಂಪಡಿಸಿ ಅರ್ಧ ಅಡಿ ನೆಲ ಗಟ್ಟಿಗೊಳಿಸಬೇಕು.

    ಬಳಿಕ ಮತ್ತೊಮ್ಮೆ ಇದರ ಮೇಲೆ ಹಂತಹಂತವಾಗಿ 16 ಇಂಚು ಹೊಸ ಮರಂ ಹಾಕಬೇಕು. ಇದರ ಮೇಲೆ 4 ಇಂಚು ಜಿಎಸ್‌ಬಿ(ಜಲ್ಲಿ) ಹಾಕಿ, 125 ಮೈಕ್ರಾನ್ ಥಿಕ್ ಪಾಲಿಥೀನ್ ಶೀಟ್ ಹಾಕಿದ ಬಳಿಕ ಅರ್ಧ ಅಡಿ ಸಿಸಿ ಹಾಕಬೇಕು. ರಸ್ತೆಯ ಎರಡೂ ಬದಿ 1 ಅಡಿ ಮರಂ ಹಾಕಿ ಗಟ್ಟಿಗೊಳಿಸಬೇಕು. ಸಿಸಿ ರಸ್ತೆಗೆ 14 ದಿನಗಳ ಕಾಲ ನೀರುಣಿಸಬೇಕು. ಆದರೆ, ಪ್ರಸ್ತುತ ನಡೆಸಿರುವ ಕಾಮಗಾರಿಯಲ್ಲಿ ನೆಲ ಅಗೆಯದೇ ಅರೆಬರೆ ಮರಂ, ಜಲ್ಲಿ ಹಾಕಿ ಅದರ ಮೇಲೆ ಸಿಸಿ ಹಾಕಲಾಗಿದೆ. ಸಿಸಿ ಹಾಕಿ 15 ದಿನಗಳು ಕಳೆದರೂ ಸಮರ್ಪಕವಾಗಿ ನೀರು ಸಿಂಪಡಿಸಿಲ್ಲ. ಅಲ್ಲಲ್ಲಿ ಗನ್ನಿಬ್ಯಾಗ್‌ಗಳನ್ನು ಹಾಕಲಾಗಿದೆ. ಕಾಮಗಾರಿ ನಿರ್ವಹಿಸುತ್ತಿರುವ ಕೆಆರ್‌ಐಡಿಎಲ್ ಇಂಜಿನಿಯರ್ ಅಂದಾಜು ಪತ್ರಿಕೆಯಲ್ಲಿನ ಮಾನದಂಡ ಉಲ್ಲಂಘಿಸಿ ಸಿಸಿ ರಸ್ತೆ ನಿರ್ಮಿಸುತ್ತಿದ್ದಾರೆ.

    ಈ ರಸ್ತೆಯ ಅಕ್ಕಪಕ್ಕದಲ್ಲಿ ರೈಸ್‌ಮಿಲ್‌ಗಳಿದ್ದು ಭತ್ತ, ಅಕ್ಕಿ ಹೊತ್ತ ಭಾರವಾದ ವಾಹನಗಳು ಸಂಚರಿಸುತ್ತವೆ. ಅಲ್ಲದೇ, ಸಾರ್ವಜನಿಕರು ಕಾರು, ಆಟೋಗಳಲ್ಲಿ ರೈಲ್ವೆ ನಿಲ್ದಾಣಕ್ಕೆ ತೆರಳಲು ಇದೇ ರಸ್ತೆ ಅವಲಂಬಿಸಿದ್ದಾರೆ. ಶಾಸಕ ಬಸವರಾಜ ದಢೇಸುಗೂರು, ಅನುದಾನ ಮಂಜೂರುಗೊಳಿಸಿದ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಕೆಆರ್‌ಐಡಿಎಲ್ ಮೇಲಧಿಕಾರಿಗಳು ಗುಣಮಟ್ಟದ ಕಾಮಗಾರಿ ಕುರಿತು ಕಾಳಜಿ ವಹಿಸದಿರುವುದು ವಿಪರ್ಯಾಸ.

    ರೈಲ್ವೆ ನಿಲ್ದಾಣದ ರಸ್ತೆ ಕಳಪೆ!
    ಕಾರಟಗಿ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆಗೆ ಅಲ್ಲಲ್ಲಿ ಗನ್ನಿಬ್ಯಾಗ್ ಹಾಕಿರುವುದು.
    • ಅಧಿಕಾರಿಯ ಉದ್ಧಟತನ: ಸಿಸಿ ರಸ್ತೆ ಕಾಮಗಾರಿಯನ್ನು ಅಂದಾಜು ಪತ್ರಿಕೆಯ ಪ್ರಕಾರ ನಿರ್ಮಿಸುವಂತೆ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಆರ್.ಜಿ.ಶ್ರೀನಿವಾಸ ಕೆಆರ್‌ಐಡಿಎಲ್ ಇಂಜಿನಿಯರ್ ದೇವರಾಜ ಅವರಿಗೆ ತಿಳಿಸಿದ್ದಾರೆ. ಆದರೂ, ಕಾಮಗಾರಿ ಗುಣಮಟ್ಟ ಕಾಣದಿದ್ದರಿಂದ ಕೊಪ್ಪಳ ಕೆಆರ್‌ಐಡಿಎಲ್ ಡಿಡಿ ಝಡ್.ಎಂ.ಚಿಂಚೋಳಿಕರ್‌ಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೂ, ಅಧಿಕಾರಿ ಈ ಬಗ್ಗೆ ಕ್ರಮ ಕೈಗೊಳ್ಳದೆ ಉದ್ಧಟತನ ಮೆರೆದಿದ್ದಾರೆ. ಅಧಿಕಾರಿಗಳ ನೆರಳಲ್ಲಿಯೇ ಲಕ್ಷಾಂತರ ರೂ. ಹಗಲು ದರೋಡೆ ನಡೆಯುತ್ತಿದ್ದರೂ ಯಾರೊಬ್ಬರೂ ಚಕಾರ ಎತ್ತುತ್ತಿಲ್ಲ.

    ಕಾಮಗಾರಿಗೆ ಸಂಬಂಧಿಸಿದಂತೆ ತಾಂತ್ರಿಕವಾಗಿ ಏನೇನು ಆಗಿದೆ ಎನ್ನುವುದನ್ನು ಪರಿಶೀಲಿಸಲು ಉಪ ವಿಭಾಗಾಧಿಕಾರಿ ಅವರನ್ನು ಕಳುಹಿಸಿ ಕೋಡುತ್ತೇನೆ. ಅವರಿಂದ ವರದಿ ಬಂದ ಬಳಿಕ ನಾನು ಕೂಡ ಒಮ್ಮೆ ಭೇಟಿ ನೀಡಿ ಪರಿಶೀಲಿಸುತ್ತೇನೆ.
    ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ ಕೊಪ್ಪಳ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts