More

    ಗ್ಯಾರಂಟಿಗಳನ್ನು ಜನರಿಗೆ ತಲುಪಿಸಿ

    ಕಾರಟಗಿ: ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಏಂಟು ತಿಂಗಳಲ್ಲಿ ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ. ಈ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಪ್ರಾಧಿಕಾರದ ಪದಾಧಿಕಾರಿಗಳು ಶ್ರಮಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

    ಪಟ್ಟಣದ ಸಚಿವರ ನಿವಾಸದ ಕಚೇರಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಸಮಿತಿಯಿಂದ ಸೋಮವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜಾತಿ-ಮತ, ಧರ್ಮವೆಂದು ಭೇದ-ಭಾವ ಮಾಡದೇ ಎಲ್ಲಾ ವರ್ಗದ ಬಡವರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ನಿರಂತರ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಬಡ ಜನತೆಗೆ ಗ್ಯಾರಂಟಿಗಳು ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿವೆ.

    ಜನತೆ ಯೋಜನೆಗಳನ್ನು ಮನಃಪೂರ್ವಕವಾಗಿ ಸ್ವೀಕರಿಸಿದ್ದಾರೆ. ಇವುಗಳ ಸಮಪರ್ಕ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಪ್ರತ್ಯೇಕ ಪ್ರಾಧಿಕಾರ ರಚಿಸಿ ಜಿಲ್ಲಾ ಮತ್ತು ತಾಲೂಕು ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇದುವರೆಗೂ ಕೆಲ ಅರ್ಹರಿಗೆ ಯೋಜನೆಗಳು ತಲುಪದಿರುವ ತಾಂತ್ರಿಕ ಕಾರಣಗಳನ್ನು ಪದಾಧಿಕಾರಿಗಳು ಪತ್ತೆ ಹಚ್ಚಿ ಜನತೆಗೆ ತಲುಪಿಸುವ ಕೆಲಸ ಮಾಡಬೇಕು. ಕೆಲವರು ಗ್ಯಾರಂಟಿಗಳ ಲಾಭ ಪಡೆದುಕೊಂಡಿದ್ದರೂ ರಾಜಕೀಯಕ್ಕಾಗಿ ಆತ್ಮಸಾಕ್ಷಿ ವಿರುದ್ಧವಾಗಿ ಅವಹೇಳನ ಮಾಡುತ್ತಿದ್ದಾರೆ. ಆದರೆ ಕುಟುಂಬ ನಿರ್ವಹಿಸುವವರಿಗೆ ಇದರ ಪರಿಣಾಮ ಏನೆಂಬುದು ಚೆನ್ನಾಗಿ ತಿಳಿದಿದೆ. ಹಾಗಾಗಿ ಸಮಿತಿ ಪದಾಧಿಕಾರಿಗಳು ಯೋಜನೆಗಳ ಮೇಲ್ವಿಚಾರಣೆ ಜತೆಗೆ ಜನತೆಯಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

    ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಮಾತನಾಡಿ, ಸಚಿವರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಜಿಲ್ಲೆ ಹಾಗೂ ವಿವಿಧ ತಾಲೂಕು ಸಮಿತಿಗಳ ಪದಾಧಿಕಾರಿಗಳನ್ನು ಒಗ್ಗೂಡಿಸಿಕೊಂಡು ಅವರ ಮಾರ್ಗದರ್ಶನ, ಸಹಕಾರದೊಂದಿಗೆ ಪ್ರಾಮಾಣಿಕತೆ, ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ಸರ್ಕಾರದ ಯೋಜನೆಗಳನ್ನು ಜನ ಸ್ನೇಹಿಯಾಗಿ ತಲುಪಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.
    ಪ್ರಮುಖರಾದ ಶರಣಬಸವರಾಜರೆಡ್ಡಿ ಬರಗೂರು, ಜನಗಂಡೆಪ್ಪ ಪೂಜಾರ್ ಸಿದ್ದಾಪುರ, ಶರಣಪ್ಪ ಪರಕಿ, ಮೊನ್ನೆ ಕೃಷ್ಣಮೂರ್ತಿ, ಕರ್ಟೂರಿ ಲಕ್ಷ್ಮೀ, ನಾಗಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts