More

    ಶಾಸಕರು ದೌರ್ಜನ್ಯ ಮಾಡುತ್ತಿದ್ದಾರೆ, ಮಾಜಿ ಸಚಿವ ಶಿವರಾಜ ತಂಗಡಗಿ ಗಂಭೀರ ಆರೋಪ

    ಕಾರಟಗಿ: ಕಾಂಗ್ರೆಸ್ ಅಳವಡಿಸಿದ್ದ ಬ್ಯಾನರ್‌ಗಳನ್ನು ಸ್ವತಃ ಶಾಸಕ ಬಸವರಾಜ ದಢೇಸುಗೂರು ಮಧ್ಯರಾತ್ರಿ ಮುಂದೆ ನಿಂತು ತೆರವುಗೊಳಿಸುವ ಮೂಲಕ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಮಾಜಿಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವರಾಜ ತಂಗಡಗಿ ಗಂಭೀರವಾಗಿ ಆರೋಪಿಸಿದರು.

    ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರದ ಶಾಸಕರು ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಪಾಲ್ಗೊಂಡಿರುವುದನ್ನು ವಿರೋಧಿಸಿ ಹಾಗೂ ಕ್ಷೇತ್ರದ ಶಾಸಕರ ದುರಾಡಳಿತ ಖಂಡಿಸಿ ಕಾಂಗ್ರೆಸ್‌ನಿಂದ ನ.17ರಂದು ಸಿದ್ದಾಪೂರದಿಂದ ಕಾರಟಗಿವರೆಗೆ ಜನಪ್ರತಿಜ್ಞಾ ಯಾತ್ರೆ ನಡೆಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ನ.15ರ ರಾತ್ರಿಯಿಂದ ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದಾರೆ. ಮಧ್ಯರಾತ್ರಿ ಒಂದು ಗಂಟೆಗೆ ಶಾಸಕ ಬಸವರಾಜ ದಢೇಸುಗೂರು ಸ್ಥಳಕ್ಕೆ ಆಗಮಿಸಿ ಪರವಾನಿಗೆ ಪಡೆದಿಲ್ಲವೆಂದು ದೌರ್ಜನ್ಯದಿಂದ ಬ್ಯಾನರ್‌ಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಶಾಸಕರದು ಬ್ಯಾನರ್ ತೆರವುಗೊಳಿಸುವ ಕೆಲಸವೇ?. ಇದಕ್ಕೆ ಉಪಯೋಗಿಸುವ ಸಮಯವನ್ನು ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸಲಿ. ಬ್ಯಾನರ್ ಅಳವಡಿಸಿದ ಮೇಲೂ ಪರವಾನಿಗೆ ಪಡೆಯಲು ಮತ್ತು ಅದನ್ನು ನೋಡಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳಿದ್ದಾರೆ.

    ಪಿಎಸ್‌ಐ ಹಗರಣವೆಂದ ಕೂಡಲೇ ಶಾಸಕರು ಬೆಚ್ಚಿಬೀಳುತ್ತಿದ್ದಾರೆ. ತಾವು ತಪ್ಪು ಮಾಡಿಲ್ಲವೆಂದರೆ ತಮ್ಮದೇ ಲೆಟರ್‌ಹೆಡ್ ಮೇಲೆ ಸರ್ಕಾರಕ್ಕೆ ಪತ್ರ ಬರೆದು ತನಿಖೆ ನಡೆಸುವಂತೆ ಸೂಚಿಸಲಿ. ಅವರನ್ನು ಸಾರ್ವಜನಿಕವಾಗಿ ಪ್ರಶಂಸಿಸುವೆ. ಇದೆಲ್ಲವನ್ನು ಹೊರತುಪಡಿಸಿ ಕೆಲವು ಜನರ ಗುಂಪು ಕಟ್ಟಿಕೊಂಡು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗುವುದು ಸರಿಯಲ್ಲ. ಕನಕಗಿರಿ ಕ್ಷೇತ್ರದ ಜನತೆ ಇಂತಹ ಕೃತ್ಯವನ್ನು ಎಂದೂ ಸಹಿಸುವುದಿಲ್ಲ. ಇದೆಲ್ಲದಕ್ಕೂ 2023ರ ವಿಧಾನಸಭಾ ಚುನಾವಣೆಯಲ್ಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ. ಅಲ್ಲದೇ, ಒಬ್ಬ ಪೊಲೀಸ್ ಅಧಿಕಾರಿ ರಾತ್ರೋ ರಾತ್ರಿ ಶಾಸಕರೊಂದಿಗೆ ಆಗಮಿಸಿ ಬ್ಯಾನರ್ ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿರುವುದು ಹಾಸ್ಯಾಸ್ಪದ. ಶಾಸಕರು ನಮ್ಮ ಹೋರಾಟವನ್ನು ಹತ್ತಿಕ್ಕಲು ಎಷ್ಟೇ ಪ್ರಯತ್ನಪಟ್ಟರು ಅದು ಸಾಧ್ಯವಿಲ್ಲ. ಕಾನೂನಿನ ಚೌಕಟ್ಟಿನೊಳಗೆ ನಾವು ಹೋರಾಟ ರೂಪಿಸಿ ಪಾದಯಾತ್ರೆ ನಡೆಸುತ್ತೇವೆ ಎಂದು ತಿಳಿಸಿದರು.

    ಪುರಸಭೆ ಸದಸ್ಯರಾದ ಹಿರೇಬಸಪ್ಪ ಸಜ್ಜನ್, ಮಂಜುನಾಥ ಮೆಗೂರು, ಕೆಪಿಸಿಸಿ ಸದಸ್ಯ ಬಸವರಾಜ ನೀರಗಂಟಿ, ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಿ.ಶಿವರೆಡ್ಡಿ ನಾಯಕ, ಶಶಿಧರಗೌಡ ಪಾಟೀಲ್, ಪ್ರಮುಖರಾದ ಅಂಬಣ್ಣ ನಾಯಕ, ಕೆ.ಸಿದ್ದನಗೌಡ, ಫಕೀರಪ್ಪ ಸುದ್ದಿ, ಅಬ್ದುಲ್ ರೌಫ್, ಅಮರೇಶ ಪೊಲೀಸ್ ಪಾಟೀಲ್, ವಿಜಯ್ ಕೋಲ್ಕಾರ್, ಬಿ.ಶರಣಯ್ಯಸ್ವಾಮಿ, ಹನುಮಂತಪ್ಪ ವಾಲೇಕಾರ್, ರವಿರಾಜ್ ಪಾಟೀಲ್, ಬಸವರಾಜ ಪಗಡದಿನ್ನಿ, ಅಯ್ಯಪ್ಪ ಉಪ್ಪಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts