More

    ಕಾಂತಾವರ -ಕೇಪ್ಲಾಜೆ ಸಂಪರ್ಕ ರಸ್ತೆ ಸಮಸ್ಯೆ, ಅವೈಜ್ಞಾನಿಕ ಕಾಮಗಾರಿಯಿಂದ ವಾಹನ ಸವಾರರಿಗೆ ತೊಂದರೆ

    ಹರಿಪ್ರಸಾದ್ ನಂದಳಿಕೆ ಬೆಳ್ಮಣ್

    ಕಾಂತಾವರ ಹೈಸ್ಕೂಲ್‌ನಿಂದ ಕೇಪ್ಲಾಜೆ ಮಾರಿಗುಡಿ ಸಂಪರ್ಕ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದ ನಿತ್ಯ ವಾಹನ ಸವಾರರು ಪರದಾಡುವಂತಾಗಿದೆ.
    ಕಾಂತಾವರ ಹೈಸ್ಕೂಲ್‌ನಿಂದ ಕೇಪ್ಲಾಜೆ ಮಾರಿಗುಡಿ ಸಂಪರ್ಕಿಸುವ ರಸ್ತೆಗೆ ಕಾಂಕ್ರೀಟ್ ಅಳವಡಿಸಲಾಗಿದ್ದರೂ ಮುಖ್ಯ ರಸ್ತೆಯಿಂದ ಸಂಪರ್ಕ ಕಲ್ಪಿಸದೆ ಎರಡೂ ರಸ್ತೆಗಳು ಕೂಡುವಲ್ಲಿ ಜಲ್ಲಿ ಕಲ್ಲುಗಳು ಎದ್ದಿವೆ. ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಿದ ಗುತ್ತಿಗೆದಾರ ಮುಖ್ಯರಸ್ತೆಗೆ ತಾಗಿಕೊಂಡು ಕೆಲಸ ಮಾಡದೆ ಅರ್ಧಕ್ಕೆ ನಿಲ್ಲಿಸಿದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಕಾಂತಾವರ -ಬೆಳುವಾಯಿ ಮುಖ್ಯರಸ್ತೆಗೆ ತಾಗಿಕೊಂಡಿರುವ ಈ ಕೂಡು ರಸ್ತೆಗೆ ಸಂಪರ್ಕ ಸಾಧಿಸಲು ವಾಹನ ಸವಾರರು ಹರಸಾಹಸಪಡಬೇಕಾಗಿದೆ. ಮುಖ್ಯರಸ್ತೆಗೆ ಸಂಪರ್ಕ ಆಗುವಂತೆ ಕೆಲಸ ಮಾಡಿಕೊಡುವಂತೆ ಸ್ಥಳೀಯರು ಕೇಳಿಕೊಂಡಿದ್ದರೂ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಗುತ್ತಿಗೆದಾರ ಹೇಳಿದ್ದಾಗಿ ಸ್ಥಳೀಯರು ದೂರಿದ್ದಾರೆ. ಎರಡೂ ರಸ್ತೆಯ ಕಾಮಗಾರಿ ನಿರ್ವಹಿಸಿದ ಇಬ್ಬರೂ ಗುತ್ತಿಗೆದಾರರು ನಮ್ಮದಲ್ಲ ಎಂದು ಜಾರಿಕೊಳ್ಳುತ್ತಿದ್ದು ಜನಸಾಮಾನ್ಯರು ಕಷ್ಟ ಅನುಭವಿಸುವಂತಾಗಿದೆ.

    ಪ್ರತಿನಿತ್ಯ ಬೈಕ್ ಸವಾರರು ಇಲ್ಲಿ ಕಷ್ಟಪಡುವುದು ಮಾಮೂಲಿಯಾಗುತ್ತಿದೆ. ರಸ್ತೆಗೆ ಸಂಪರ್ಕ ಕಲ್ಪಿಸುವಲ್ಲಿ ಅರ್ಧಕ್ಕೆ ಕೆಲಸ ಸ್ಥಗಿತಗೊಳಿಸಿದ್ದು, ಜಲ್ಲಿ ಕಲ್ಲಿನಲ್ಲೇ ಸಂಚಾರ ನಡೆಸುವಂತಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ.
    ಸಂಜೀವ ಕೋಟ್ಯಾನ್, ಸ್ಥಳೀಯ ನಿವಾಸಿ

    ಜಲ್ಲಿ ಕಲ್ಲು ಎದ್ದು ಚಲ್ಲಾಪಿಲ್ಲಿಯಾದ ರಸ್ತೆಯಲ್ಲಿ ಸಾಕಷ್ಟು ಜನ ಬಿದ್ದು ಗಾಯಗೊಂಡಿದ್ದಾರೆ. ರಸ್ತೆ ಸರಿಪಡಿಸುವಂತೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
    ಮನೋಹರ್ ಕುಮಾರ್, ಗ್ರಾಮಸ್ಥ

    ಸಮಸ್ಯೆಯನ್ನು ಗುತ್ತಿಗೆದಾರರ ಗಮನಕ್ಕೆ ತಂದಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ನಮ್ಮದಲ್ಲ ಎಂದು ಈ ಸಮಸ್ಯೆಯ ಬಗ್ಗೆ ಗಮನವೇ ಹರಿಸುತ್ತಿಲ್ಲ.
    ಸುಧಾಕರ್ ಎಂ.ಸಾಲ್ಯಾನ್, ಕಾಂತಾವರ ಗ್ರಾಪಂ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts