More

    ಕನ್ನಡಿಗರಿಗೆ ಮಾತೃಭಾಷೆ ಕಲಿಸುವ ಅನಿವಾರ್ಯತೆ- ರಾಯಚೂರು ವಿವಿ ಕುಲಪತಿ ಹರೀಶ ರಾಮಸ್ವಾಮಿ ಅನಿಸಿಕೆ

    ರಾಯಚೂರು: ಭಾಷಾ ಅಸ್ಮಿತೆಯಿಂದಾಗಿ ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರ ನಡುವೆ ಸಂಘರ್ಷ ನಡೆಯುವಂತಾಗಿದೆ. ಆದರೆ ಆಂಧ್ರ, ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ರಾಯಚೂರು ಜಿಲ್ಲೆಯಲ್ಲಿ ತೆಲುಗು ಪ್ರಭಾವ ಇದ್ದರು ಸಾಮರಸ್ಯವನ್ನು ಕಾಣಬಹುದಾಗಿದೆ ಎಂದು ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಹೇಳಿದರು.

    ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭಾಷಾ ವ್ಯತ್ಯಾಸವಿದ್ದರೂ ಹೊಂದಾಣಿಕೆಯಿದ್ದಾಗ ಮಾತ್ರ ಸಾಮರಸ್ಯ ಕಾಣಬಹುದಾಗಿದೆ. ನಮ್ಮ ಮಾತೃಭಾಷೆಯಾಗಿರುವ ಕನ್ನಡವನ್ನು ನಮ್ಮವರಿಗೆ ಕಲಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ನಾವಿದ್ದೇವೆ. ಅಧಿಕಾರ ನಡೆಸಿದ ಯಾವ ಪಕ್ಷಗಳಿಂದಲೂ ಕರ್ನಾಟಕಕ್ಕೆ ಆಗಿರುವ ಅನ್ಯಾಯಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ 371 ಜೆ ವಿಶೇಷ ಸ್ಥಾನಮಾನ ನೀಡಲಾಗಿದ್ದರೂ ಅಭಿವೃದ್ಧಿ, ನೇಮಕಾತಿ ಆಗುತ್ತಿಲ್ಲ ಎಂದು ಹೇಳಿದರು.

    ಈ ಭಾಗದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಬರದಂತೆ ಸರ್ಕಾರಗಳು ತಾರತಮ್ಯ ಧೋರಣೆ ನಿಲ್ಲಿಸಬೇಕಾಗಿದೆ. ಕನ್ನಡ ನೆಲ, ಜಲ, ಭಾಷೆಗೆ ಧಕ್ಕೆಯುಂಟಾದಾಗ ಕಸಾಪ ಧ್ವನಿ ಎತ್ತಬೇಕಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ದಿ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕಾಗಿದೆ ಎಂದು ಪ್ರೊ.ಹರೀಶ ರಾಮಸ್ವಾಮಿ ಸಲಹೆ ನೀಡಿದರು.

    ಕಸಾಪ ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ರಂಗಣ್ಣ ಪಾಟೀಲ್ ಅಳ್ಳುಂಡಿ ಮಾತನಾಡಿ, ಪರಿಷತ್‌ಗೆ ತನ್ನದೇ ಆದ ಗೌರವವಿದ್ದು, ಸಾಹಿತಿಗಳು, ಮಾಜಿ ಅಧ್ಯಕ್ಷರು ಹಾಗೂ ಕನ್ನಡಾಭಿಮಾನಿಗಳ ಸಹಕಾರದೊಂದಿಗೆ ಪರಿಷತ್ ಅನ್ನು ಸದೃಢಗೊಳಿಸುವ ಕೆಲಸ ಮಾಡಲಾಗುವುದು. ಜಿಲ್ಲೆಯಲ್ಲಿ ಹೆಚ್ಚಿನ ಸಾಹಿತ್ಯ ಚಟುವಟಿಕೆ ನಡೆಯುವಂತೆ ಮಾಡಲಾಗುವುದು ಎಂದು ತಿಳಿಸಿದರು. ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts