More

    ಪ್ರತಿ ಮನೆಯ ಆಡುಭಾಷೆ ಕನ್ನಡವಾಗಲಿ : ಮುಳಬಾಗಿಲು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಾನ್‌ಪಾಷಾ ಕರೆ

    ಮುಳಬಾಗಿಲು : ಕನ್ನಡಭಾಷೆ ಶ್ರೀಮಂತಗೊಳಿಸಲು ಕನ್ನಡಿಗರು ಪ್ರಯತ್ನಿಸಬೇಕು, ಪ್ರತಿ ಮನೆಯ ಆಡು ಭಾಷೆ ಕನ್ನಡವಾಗಬೇಕು, ಈ ನಿಟ್ಟಿನಲ್ಲಿ ಕನ್ನಡಿಗರನ್ನು ಜಾಗೃತಿಗೊಳಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದು ಮುಳಬಾಗಿಲು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಾನ್‌ಪಾಷಾ ಕರೆ ನೀಡಿದರು.

    ನಗರದ ಡಿವಿಜಿ ಗಡಿ ಕನ್ನಡಭವನದಲ್ಲಿ ಶನಿವಾರ ಆಯೋಜಿಸಿದ್ದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಕೃತಿ ಪರಂಪರೆಯಲ್ಲಿ ಸದೃಢ ಸಮಾಜಕ್ಕೆ ಬೇಕಾಗುವ ಅಂಶಗಳನ್ನು ಭದ್ರಬುನಾದಿಯಾಗಿ ಪೂರ್ವಿಕರು ಹಾಕಿಕೊಟ್ಟಿದ್ದಾರೆ. ಮಾತೃ ದೇವೋಭವ, ಪಿತೃದೇವೋಭವ, ಆಚಾರ್ಯ ದೇವೋಭವ ಎಂಬ ಶ್ಲೋಕ ಅರ್ಥೈಸಿಕೊಂಡರೆ ಸುಸಂಸ್ಕೃತ ಕುಟುಂಬ, ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ, ಇದರಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.

    ಹೆಣ್ಣು ಮಕ್ಕಳು ವಿದ್ಯಾವಂತರಾಗಿ ಎಲ್ಲ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸುವ ಅವಕಾಶಗಳಿದ್ದು, ಧರ್ಮಾತೀತವಾಗಿ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು, ವಿಶೇಷವಾಗಿ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿ ಮನೆಯಲ್ಲಿ ಕನ್ನಡ ಭಾಷೆ ಮಾತೃಭಾಷೆಯಾಗುವ ವಾತಾವರಣ ನಿರ್ಮಿಸಬೇಕು, ಬ್ಯಾಂಕಿಂಗ್, ಐ.ಟಿ, ಬಿಟಿ ಕ್ಷೇತ್ರಗಳಲ್ಲೂ ಕನ್ನಡ ಕಡ್ಡಾಯ ಮಾಡುವ ಜತೆಗೆ ಗೋಕಾಕ್ ವರದಿ ಜಾರಿಗೊಳಿಸಬೇಕು ಎಂದರು.

    ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಗಳ ಆಯ್ಕೆ ಅಭಿವೃದ್ಧಿ ಬಗ್ಗೆ ಆಯಾ ರಾಜ್ಯ ಸರ್ಕಾರಗಳಿಗೆ ವಹಿಸಿದ್ದು ಪೂರ್ವ, ಪ್ರಾಥಮಿಕ ತರಗತಿಯಿಂದ 10ನೇ ತರಗತಿವರೆಗೂ ಕಡ್ಡಾಯವಾಗಿ ಕನ್ನಡ ಮಾಧ್ಯಮ ಜಾರಿಗೊಳಿಸಬೇಕು. ಉನ್ನತ ಶಿಕ್ಷಣದಲ್ಲಿ ಒಂದು ಭಾಷೆ ಕನ್ನಡ ಅಧ್ಯಯನಕ್ಕೆ ಅವಕಾಶ ಮಾಡಿ ವಿಶೇಷ ಅಂಕ ನೀಡಬೇಕು, ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಪ್ರೇರೇಪಣೆಯಾಗುತ್ತದೆ ಎಂದರು.

    ನಿರ್ಭರ ಭಾರತದಡಿ ನಮ್ಮ ದೇಶ ಹಾಗೂ ರಾಜ್ಯದ ಯುವಕರು, ನಾಗರಿಕರು ವೋಕಲ್ ಟು ಲೋಕಲ್, ಮೇಕ್ ಇನ್ ಇಂಡಿಯಾ ಟು ಮೇಕಿಂಗ್ ಎ ನೇಷನ್ ಮಾಡಲು ಶ್ರಮಿಸಬೇಕು, ಕೃಷಿ ಕ್ಷೇತ್ರದಲ್ಲೂ ಪ್ರಗತಿಯಾಗಬೇಕು, ಉಚಿತವಾಗಿ ಶುದ್ಧ ಕುಡಿಯುವ ನೀರು ಮೂಲಸೌಲಭ್ಯ ನೀಡುವ ಜವಾಬ್ದಾರಿಯನ್ನು ಸರ್ಕಾರ ನಿರ್ವಹಿಸಬೇಕಿದೆ ಎಂದರು.

    ಸರ್ವಧರ್ಮ ಸಮನ್ವಯದ ಬೀಡು : ಮುಳಬಾಗಿಲು ಚೋಳರ ಕಾಲದಲ್ಲಿ ಶತಕವಾಟಪುರಿಯಾಗಿದ್ದು ವಿಜಯನಗರ ಸಾಮ್ರಾಜ್ಯದಲ್ಲಿ ಎರಡನೇ ರಾಜಧಾನಿಯಾಗಿ ಸರ್ವಧರ್ಮ ಸಮನ್ವಯದ ಬೀಡಾಗಿದೆ. ತಾಲೂಕಿನ ಹಲವಾರು ಸಾಧಕರು ನ್ಯಾಯಾಂಗ, ರಾಜಕೀಯ, ಕಾರ್ಯಾಂಗ, ವೈದ್ಯಕೀಯ ಕ್ಷೇತ್ರಗಳನ್ನೊಳಗೊಂಡಂತೆ ದೇಶ ಮತ್ತು ರಾಜ್ಯದ ಸೇವೆ ಸಲ್ಲಿಸುತ್ತಿರುವುದು ಇಂದಿನ ಯುವಪೀಳಿಗೆಗೆ ಮಾರ್ಗದರ್ಶಿಯಾಗಿದೆ ಎಂದು ಚಾನ್‌ಪಾಷಾ ಹೇಳಿದರು.

    ಗಡಿಭಾಗಗಳಲ್ಲಿ ಕನ್ನಡ ಕಟ್ಟುವ ಕೆಲಸ : ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಕೆ.ಎನ್.ರಾಜಶೇಖರ್ ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿ ವಿಜೃಂಭಿಸಬೇಕು. ಈ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು, ಕನ್ನಡ ಸಾಹಿತ್ಯ ಪರಿಷತ್ ಸೇರಿ ವಿವಿಧ ಸಂಘ-ಸಂಸ್ಥೆಗಳು ಕಾರ್ಯನಿರ್ವಹಿಸುತ್ತಾ ಗಡಿ ಭಾಗಗಳಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

    ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ : ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ 40ಕ್ಕೂ ಹೆಚ್ಚು ಸಾಹಿತ್ಯ ಸಮ್ಮೇಳನ ಮಾಡಿದ್ದು 300ಕ್ಕೂ ಹೆಚ್ಚು ಗೋಷ್ಠಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಪ್ರಚಾರ ಪಡಿಸುವ ಕೆಲಸ ಮಾಡಲಾಗಿದೆ. 3 ಸಾವಿರಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಸಾಹಿತ್ಯ ಪರಿಷತ್ತಿನ ಸಂಪರ್ಕ ಕಲ್ಪಿಸಲಾಗಿದೆ. ಗಡಿ ಭಾಗಗಳಲ್ಲಿ ಕನ್ನಡ ಧ್ವಜ ಸ್ಥಂಭ ಸ್ಥಾಪನೆ ಮಾಡಿ ಸದಾ ಕಾಲ ಕನ್ನಡ ಬಾವುಟ ಹಾರಿಸುವಂತೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಹೇಳಿದರು.

    ಪಲ್ಲಕ್ಕಿ ಮೆರವಣಿಗೆ : ಮುಳಬಾಗಿಲು ನಗರದ ಸೋಮೇಶ್ವರಪಾಳ್ಯ ವೃತ್ತದಿಂದ ಸಮ್ಮೇಳನಾಧ್ಯಕ್ಷ ಚಾನ್‌ಪಾಷಾ ಶಮೀಮ್ ಉನ್ನೀಸ ದಂಪತಿಯನ್ನು ಗಡಿ ಕನ್ನಡ ಭವನದವರೆಗೆ ಪಲ್ಲಕ್ಕಿ ಮೆರವಣಿಗೆ ಮೂಲಕ ಕರೆತರಲಾಯಿತು. ಚಾನ್‌ಪಾಷಾ ಶಮೀಮ್ ಉನ್ನೀಸ ಹಾಗೂ ಮತ್ತಿತರರ ಗಣ್ಯರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ರಸ್ತೆಯುದ್ದಕ್ಕೂ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts