ಕಲಬುರಗಿ: ಫೆಬ್ರವರಿ 5ರಿಂದ ಮೂರು ದಿನ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಎಲ್ಲರಿಗೂ ಸೂಕ್ತ ಊಟೋಪಚಾರದ ವ್ಯವಸ್ಥೆ ಮಾಡಬೇಕು ಎಂದು ಸಮ್ಮೇಳನದ ಆಹಾರ ಸಮಿತಿ ಅಧ್ಯಕ್ಷರಾದ ಶಾಸಕ ಬಸವರಾಜ ಮತ್ತಿಮೂಡ ಸೂಚಿಸಿದರು.
ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಸಿದ ಅವರು, ಸಮ್ಮೇಳನದಲ್ಲಿ ಉಪಾಹಾರ ಮತ್ತು ಊಟಕ್ಕಾಗಿ ಪ್ರತ್ಯೇಕ ನಾಲ್ಕು ಕೌಂಟರ್ ತೆರೆಯಬೇಕು. ಸ್ಥಳೀಯ ಆಹಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆ ಇದ್ದುದ್ದರಿಂದ ಆಹಾರ ಮತ್ತು ಶುದ್ಧ ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ಸಮ್ಮೆಳನಕ್ಕೆ ಆಗಮಿಸುವ ಸಾಹಿತ್ಯಾಭಿಮಾನಿಗಳಿಗೆ ಊಟದ ಮಾಹಿತಿ ನೀಡಲು ಧ್ವನಿವರ್ಧಕ ಅಳವಡಿಸಬೇಕು. ಊಟ ಮತ್ತು ಉಪಾಹಾರಕ್ಕಾಗಿ ನೂಕುನುಗ್ಗಲು ಆಗುವ ಸಾಧ್ಯತೆ ಇರುವುದರಿಂದ ಕೌಂಟರಗಳನ್ನು ಅಳವಡಿಸಿ ಟೋಕನ್ ನಂಬರ್ ಕೊಡಬೇಕು. ಪಾಸ್ಗಳನ್ನು ಮೊದಲೇ ವಿತರಿಸಬೇಕು ಎಂದು ಸಲಹೆ ನೀಡಿದರು.
ಸ್ವಚ್ಛತೆಗೆ ಸಂಬಂಧಿಸಿದಂತೆ ಈಗಾಗಲೇ ಸ್ವಚ್ಛತಾ ಸಮಿತಿಗೆ ಸೂಚನೆ ನೀಡಲಾಗಿದೆ. ಕುಡಿಯಲು ಮತ್ತು ಕೈತೊಳೆದುಕೊಳ್ಳಲು ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡಬೇಕು. ಸಮ್ಮೇಳನಕ್ಕೆ ಕೇಂದ್ರ ಸಮಿತಿಯಿಂದ 50, ಎಲ್ಲ್ಲ ಜಿಲ್ಲೆಗಳ ಜಿಲ್ಲಾಧ್ಯಕ್ಷರು 40, ಸದಸ್ಯರು ಮತ್ತು ಕಾರ್ಯಕಾರಿ ಸದಸ್ಯರು ಆಗಮಿಸುತ್ತಾರೆ ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಸತೀಶ್ ಕೆ.ಎಚ್. ಮಾತನಾಡಿ, ಆಹಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಸಭೆ ನಡೆಸಲಾಗುತ್ತದೆ. ಆಹಾರ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಸೂಕ್ತ ಮಾಹಿತಿ ನೀಡಬೇಕು ಎಂದು ಕೋರಿದರು.
ಊಟದ ವ್ಯವಸ್ಥೆಗೆ ನಾಲ್ಕು ಕೌಂಟರ್ ತೆರೆಯಲು ನಿರ್ಧರಿಸಿದ್ದು, ಕುಡಿಯುವ ಮತ್ತು ಕೈತೊಳೆಯುವ ನೀರಿಗಾಗಿ ಪ್ರತ್ಯೇಕವಾಗಿ 70 ಕೌಂಟರ್ ತೆರೆಯಲಾಗುತ್ತದೆ. ಸಮ್ಮೇಳನದ ಎಲ್ಲ್ಲ ಸಮಿತಿಗಳಿಂದ ಅತಿಥಿಗಳು ಮತ್ತು ಸದಸ್ಯರ ಮಾಹಿತಿ ನೀಡಿದರೆ ಆಹಾರ ವ್ಯವಸ್ಥೆ ಮಾಡಲು ಅನುಕೂಲವಾಗುತ್ತದೆ ಎಂದರು.
ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸೂಗೂರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ದೇವೇಂದ್ರಪ್ಪ ಪಾಣಿ, ಜಿಲ್ಲಾ ಆಹಾರ ಸುರಕ್ಷತಾಧಿಕಾರಿ ಡಾ.ದೀಪಕ, ಜಿಪಂ ಸದಸ್ಯ ಸಂತೋಷಕುಮಾರ, ಜಿಪಂ ಮುಖ್ಯ ಯೋಜನಾಧಿಕಾರಿ ಪ್ರವೀಣಪ್ರಿಯಾ ಡೇವಿಡ್, ದಾಲ್ಮಿಲ್ಲರ್ಸ ಅಸೋಸಿಯೇಷನ್ ಅಧ್ಯಕ್ಷ ಶಿವಶರಣಪ್ಪ ನಿಗ್ಗುಡಗಿ, ವೈನ್ ಮರ್ಚಂಟ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ ಗುತ್ತೇದಾರ್, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶಂಕರರಾವ ಪವಾರ್, ವಿಠ್ಠಲರಾವ ಮಾಲಿಪಾಟೀಲ್ ಇತರರಿದ್ದರು.
ಕಲಬುರಗಿಯನ್ನು ಮದುವೆ ಮಂಟಪದಂತೆ ಸಿಂಗರಿಸಿ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ನಗರವನ್ನು ಮದುವೆ ಮಂಟಪದಂತೆ ಸಿಂಗರಿಸಬೇಕು ಎಂದು ಜಿಪಂ ಅಧ್ಯಕ್ಷರಾದ ಸಮ್ಮೇಳನ ಅಲಂಕಾರ ಸಮಿತಿ ಅಧ್ಯಕ್ಷೆ ಸುವರ್ಣ ಮಲಾಜಿ ಅಧಿಕಾರಿಗಳಿಗೆ ಸೂಚಿಸಿದರು. ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಅಲಂಕಾರ ಸಮಿತಿ ಮೊದಲ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಗರವನ್ನು ಅಲಂಕರಿಸುವುದರ ಜತೆಗೆ ಪ್ರಮುಖ ಬೀದಿಗಳಲ್ಲಿ ಕನ್ನಡ ಧ್ವಜ ರಾರಾಜಿಸಬೇಕು. ಹಿರಿಯ ಸಾಹಿತಿಗಳ ಭಾವಚಿತ್ರ ಅಳವಡಿಸಬೇಕು. ಸಕರ್ಾರಿ ಕಟ್ಟಡದ ಮೇಲೆ ಗೋಡೆಬರಹ ಬರೆಸಬೇಕು ಎಂದು ಸಲಹೆ ನೀಡಿದರು. ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಕಾರ್ಯನಿವರ್ಾಹಕ ಇಂಜಿನಿಯರ್ ಶಿವನಗೌಡ ಪಾಟೀಲ್ ಉಪಸ್ಥಿತರಿದ್ದರು.
ಗುಲ್ಬರ್ಗ ವಿವಿ ಆವರಣ ವೀಕ್ಷಣೆ
ಸಮ್ಮೇಳನ ನಡೆಯುವ ಸ್ಥಳ ಗುಲ್ಬರ್ಗ ವಿವಿ ಆವರಣವನ್ನು ಆಹಾರ ಸಮಿತಿ ಅಧ್ಯಕ್ಷ ಬಸವರಾಜ ಮತ್ತಿಮೂಡ, ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ವೀಕ್ಷಿಸಿದರು. ಜಿಪಂ ಮುಖ್ಯ ಯೋಜನಾಧಿಕಾರಿ ಪ್ರವೀಣಪ್ರಿಯಾ ಡೇವಿಡ್, ಜಂಟಿ ಕೃಷಿ ನಿದರ್ೇಶಕ ರಿತೇಂದ್ರನಾಥ ಸೂಗೂರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಸತೀಶ ಕೆ.ಎಚ್., ಜಿಪಂ ಸದಸ್ಯ ಸಂತೋಷಕುಮಾರ ಮಾಲಿಪಾಟೀಲ್, ಅಶೋಕ ಗುತ್ತೇದಾರ್, ದೌಲತರಾವ್ ಮಾಲಿಪಾಟೀಲ್ ಇದ್ದರು.
