More

    ಚಿಕ್ಕಮಗಳೂರಿನ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಚಿಕ್ಕಮಗಳೂರು : ಜಿಲ್ಲೆಯಿಂದ ಸಮಾಜ ಸೇವಾ ಕ್ಷೇತ್ರದಿಂದ ಇಬ್ಬರು ಹಾಗೂ ಶಿಕ್ಷಣ ಕ್ಷೇತ್ರದಿಂದ ಒಬ್ಬರು ಸೇರಿ ಒಟ್ಟು ಮೂವರು ಸಾಧಕರು ಈ ಬಾರಿಯ ರಾಜ್ಯಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
    ಸಮಾಜ ಸೇವಾ ಕ್ಷೇತ್ರದಿಂದ ಮೋಹಿನಿ ಸಿದ್ದೇಗೌಡ ಹಾಗೂ ಪ್ರೇಮಾ ಕೋದಂಡ ರಾಮ ಶ್ರೇಷ್ಠಿ ಹಾಗೂ ಶಿಕ್ಷಣ ಕ್ಷೇತ್ರದಿಂದ ಎಂ.ಎನ್.ಷಡಕ್ಷರಿ ಅವರನ್ನು ಆಯ್ಕೆ ಮಾಡಲಾಗಿದೆ.

    ಮೋಹಿನಿ ಸಿದ್ದೇಗೌಡ

    ಕಸ್ತೂರಿಬಾ ಸದನದ ಕಾರ್ಯದರ್ಶಿ, ಕೌಟುಂಬಿಕಾ ಸಲಹಾ ಕೇಂದ್ರದ ಅಧ್ಯಕ್ಷೆಯಾಗಿದ್ದು, 1996 ರಿಂದ ಕೈಗೊಂಡಿರುವ ಸಮಾಜ ಸೇವೆ ಅನನ್ಯ. ಕೌಟುಂಬಿಕಾ ಸಲಹಾ ಕೇಂದ್ರ, ಉದ್ಯೋಗಸ್ಥ ಮಹಿಳೆಯರ ವಸತಿಗೃಹ, ಮಹಿಳಾ ಮಂಡಳಿಗಳ ಮುಖಾಂತರ ಮಹಿಳೆಯರ ಅಭಿವೃದ್ಧಿ ಸಾಧಿಸಿದ್ದಾರೆ. ಕುಟುಂಬದಿಂದ ಪರಿತ್ಯಕ್ತರಾದ ಮಹಿಳೆಯರಿಗೆ ಆಸರೆ ಕಲ್ಪಿಸಿದ ಹಿರಿಮೆಯೂ ಅವರಿಗಿದೆ.
    ಸಾಂತ್ವನ ಕೇಂದ್ರ, ಶಿಶುಪಾಲನಾ ಕೇಂದ್ರ, ಅನೌಪಚಾರಿಕ ಶಿಕ್ಷಣ ಕೇಂದ್ರದ ಯೋಜನೆಗಳನ್ನು ನೊಂದ ಮಹಿಳೆಯರಿಗೆ ಒದಗಿಸುತ್ತಿದ್ದಾರೆ. ಮಹಿಳಾ ಜಾಗೃತಿ ಶಿಬಿರ, ಕಾನೂನು ಶಿಬಿರ ಆಯೋಜಿಸಿದ್ದಾರೆ. ಸಾರಾಯಿ ಮಾರಾಟ, ಮಹಿಳಾ ದೌರ್ಜನ್ಯ ಹಾಗೂ ಸಾಮಾಜಿಕ ಅನ್ಯಾಯದ ವಿರುದ್ಧ ಹೋರಾಟಗಳನ್ನು ಸಂಘಟಿಸಿದ್ದಾರೆ.

    ಅನೇಕ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದಲ್ಲದೆ, ಇಬ್ಬರು ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ಭರಿಸಿದ್ದಾರೆ. 2001-02 ರಲ್ಲಿ ಕಸ್ತೂರಿಬಾ ಸದನಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ, 2018-19 ರಲ್ಲಿ ಸುವರ್ಣಾದೇವಿ ಪ್ರಶಸ್ತಿ, 2019-20 ರಲ್ಲಿ ಜಾಗೃತಿ ಸಂಘದಿಂದ ಮಹಿಳಾ ರತ್ನ ಪ್ರಶಸ್ತಿ ಸಂದಿದೆ.

    ಎಂ.ಎನ್.ಷಡಕ್ಷರಿ

    ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾಗಿರುವ ಎಂ.ಎನ್.ಷಡಕ್ಷರಿ ಶಿಕ್ಷಣ ತಜ್ಞರಾಗಿದ್ದು, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮುಖ್ಯ ಆಯುಕ್ತರು. ಮಾಡೆಲ್ ಇಂಗ್ಲೀಷ್ ಪ್ರೌಢಶಾಲೆ ಮುಖೇನ ಸಹಸ್ರಾರು ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯಲ್ಲಿ ನೂರಾರು ಮಕ್ಕಳನ್ನು ರಾಷ್ಟ್ರಪತಿ ಪುರಸ್ಕಾರಕ್ಕೆ ಅರ್ಹರನ್ನಾಗಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ದೇಶ ವಿದೇಶಗಳಲ್ಲಿ ನಡೆದ ಜಾಂಬೂರಿಗಳಲ್ಲಿ ಭಾಗವಹಿಸಿದ್ದಾರೆ. ಜಿಲ್ಲಾ ಸ್ಕೌಟ್ ಮತ್ತು ಗೈಡ್ ಸಂಸ್ಥೆಯಲ್ಲಿ ಮಕ್ಕಳ ಸಂಖ್ಯೆಯನ್ನು 3 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

    ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸೇವೆಗೆ ರಾಷ್ಟ್ರಪತಿಗಳ ಸಿಲ್ವರ್ ಸ್ಟರ್ ಪುರಸ್ಕಾರ, ಸ್ಯಾಂಚ್ಯುರಿ ಮ್ಯಾಗಜೀನ್‍ನ ಗ್ರೀನ್ ಟೀಚರ್ ರಾಷ್ಟ್ರೀಯ ಪುರಸ್ಕಾರ, ಶಿಕ್ಷಣ ಮತ್ತು ಪರಿಸರದ ಸೇವೆಗಾಗಿ ರಾಜ್ಯೋತ್ಸವ ಮತ್ತಿತರ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

    ಪ್ರೇಮಾ ಕೋದಂಡರಾಮ ಶ್ರೇಷ್ಠಿ

    ಭಗವದ್ಗೀತೆ ಕಲಿಸುವುದರಲ್ಲಿ ಸಮಾಜಸೇವೆಯ ಸಂತಸ ಕಂಡವರು ಪ್ರೇಮಾ ಕೋದಂಡರಾಮ ಶ್ರೇಷ್ಠಿ. ತಮ್ಮ 15ನೇ ವಯಸ್ಸಿನಲ್ಲೇ ಭಗವದ್ಗೀತಾ ಪಠಣವನ್ನು ಕಂಠಸ್ಥಗೊಳಿಸಿಕೊಂಡಿರುವ ಅವರು ತಮ್ಮ ಮನೆ ಆವರಣದಲ್ಲಿ ಮಕ್ಕಳಿಗೆ ಭಗವದ್ಗೀತೆ ಕಲಿಸುತ್ತಿದ್ದರು.
    ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಭಾರತದ ಅನೇಕ ಯೋಗಿಗಳು, ತಪಸ್ವಿಗಳಿಂದ ಧರ್ಮ ಪ್ರವಚನ, ಸಾಹಿತಿಗಳಿಂದ ಉಪನ್ಯಾಸ ಆಯೋಜಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

    ಎಂ.ಜೆ.ಕೋದಂಡರಾಮ ಶ್ರೇಷ್ಠಿ ದಂಪತಿ ತಮ್ಮ ಬದುಕಿನುದ್ದಕ್ಕೂ ಧಾರ್ಮಿಕ, ಸಾಂಸ್ಕøತಿಕ, ಸಾಹಿತ್ಯ ಸಿರಿಹಬ್ಬವನ್ನೇ ಏರ್ಪಡಿಸಿದ್ದರು. ಪ್ರೇಮ ಆಧ್ಯಾತ್ಮದ ಜತೆಗೆ ತಮ್ಮ ಆಸಕ್ತಿಯನ್ನು ಸಂಗೀತ ಕ್ಷೇತ್ರಕ್ಕೂ ವಿಸ್ತರಿಸಿಕೊಂಡು ಭಗವದ್ಗೀತೆಯ ಉಚಿತ ತರಗತಿಗಳ ಮೂಲಕ ಆಸಕ್ತ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ತಮ್ಮ ಮನೆಯಲ್ಲೇ ವಿಶಾಲ ಪ್ರಾರ್ಥನಾ ಮಂದಿರ ನಿರ್ಮಿಸಿ 50 ಜನರ ಎರಡು ತಂಡಗಳನ್ನು ಮಾಡಿ ಗೀತಾ ತರಗತಿಗಳನ್ನು ನಡೆಸುತ್ತಿದ್ದರು.

    ವಿದೇಶಯಾತ್ರೆ ಕೈಗೊಂಡ ಸಂದರ್ಭ ಅಮೇರಿಕಾದ ಚಿಕಾಗೋದ ರಾಮಕೃಷ್ಣಾಶ್ರಮದ ಸ್ವಾಮೀಜಿ ಸಮ್ಮುಖದಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ವಿವಿಧ ರಾಗಗಳಲ್ಲಿ ಹಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು. ವಿವಿಧ ಸಂಘಸಂಸ್ಥೆಗಳ ಮೂಲಕ 25ಕ್ಕೂ ಹೆಚ್ಚು ಆಧ್ಯಾತ್ಮಿಕ ಸಂಸ್ಥೆಗಳನ್ನು ಸಂದರ್ಶಿಸಿ ಕಾವ್ಯವಾಚನ, ಗೀತಾ ತರಗತಿಗಳನ್ನು ನಡೆಸಿಕೊಟ್ಟಿದ್ದು ವಿಶೇಷ. ಭಗವದ್ಗೀತೆಯ ಗೀತಗಾಯನದಲ್ಲಿ ಅಪಾರ ಜ್ಞಾನ ಸಂಪಾದಿಸಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇವರ ಸಾಧನೆಗೆ ಅನೇಕ ಸಂಘ-ಸಂಸ್ಥೆಗಳು ಗೌರವಿಸಿದ್ದು, ಗುರುರತ್ನ ಬಿರುದಿಗೂ ಪಾತ್ರರಾಗಿದ್ದಾರೆ. ಚಿಕಾಗೋ ರಾಮಕೃಷ್ಣಾಶ್ರಮ ಪಾರಿತೋಷಕ ನೀಡಿ ಗೌರವಿಸಿತ್ತು. ವಿಶೇಷವೆಂದರೆ ಇವರ ಪತಿ ಕೋದಂಡ ರಾಮ ಶ್ರೇಷ್ಠಿ ಸಹ 1981ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts