More

    27 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ-ಸಭೆ ಕರೆಯದೇ ಆಯ್ಕೆ ನಡೆಸಿದ ಬಗ್ಗೆ ಕಸಾಪ ಆಕ್ಷೇಪ

    ಕಾರವಾರ: ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳ 17 ಜನ ಹಾಗೂ 9 ಅಧಿಕಾರಿಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ. ನ.1 ರಂದು ಜಿಲ್ಲಾಡಳಿತದಿಂದ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜಿಲ್ಲಾ ರಾಜ್ಯೋತ್ಸವ ಸಮಿತಿ ಆಯ್ಕೆ ಸಮಿತಿ ಪ್ರಕಟಣೆ ತಿಳಿಸಿದೆ. ಇದು ಎರಡನೇ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯಾಗಿದ್ದು, ಯಾವುದೇ ನಗದು ಬಹುಮಾನ ಹೊಂದಿಲ್ಲ.

    ಕ್ರೀಡಾ ಕ್ಷೇತ್ರದಲ್ಲಿ ಹೊನ್ನಾವರದ ರಾಜೇಶ.ಕೆ.ಮಡಿವಾಳ, ಸಂಗೀತದಲ್ಲಿ ಹೊನ್ನಾವರದ ಗಜಾನನ ಸುಬ್ರಾಯ ಭಂಡಾರಿ, ಕೃಷಿಯಲ್ಲಿ ಶಿರಸಿಯ ಅಬ್ದುಲ್ ಕರೀಮ ಮಹ್ಮದ ಅಲಿ ಹಾಗೂ ಕುಮಟಾದ ಚಿದಾನಂದ ಗಣಪತಿ ಹೆಗಡೆ, ಸಾಹಿತ್ಯದಲ್ಲಿ ಹಳಿಯಾಳದ ಸಂತೋಷ ಕುಮಾರ ಮೆಹೆಂದಳೆ, ಸಮಾಜಸೇವೆಯಲ್ಲಿ ಕುಮಟಾದ ದಿವಾಕರ ನಾಗೇಶ ನಾಯ್ಕ, ಕಾರವಾರದ ಎಸ್.ವಿ.ನಾಯ್ಕ ರಾಣೆ,ಇಬ್ರಾಹಿಂ ಕಲ್ಲೂರ, ಹಾಗೂ ಯಮುನಾ ಗಾಂವ್ಕರ, ಶಿಲ್ಪಕಲೆಯಲ್ಲಿ ಕುಮಟಾದ ಶಿವಮೂರ್ತಿ.ಎಸ್.ಭಟ್ ಹಾಗೂ ಭಟ್ಕಳದ ಲಕ್ಷ್ಮಣ ಮಂಜುನಾಥ ನಾಯ್ಕ, ಜಾನಪದ ಕ್ಷೇತ್ರದಲ್ಲಿ ಭಟ್ಕಳದ ಕಾಳಿ ಸಂಕಯ್ಯ ಗೊಂಡ, ಪತ್ರಿಕೋದ್ಯಮದಲ್ಲಿ ಕುಮಟಾದ ಎಂ.ಜಿ.ನಾಯ್ಕ, ಯಕ್ಷಗಾನದಲ್ಲಿ ಕುಮಟಾದ ಬೋಮ್ಮಯ್ಯ.ವಿ.ಗಾಂವಕರ, ನಾಟಕ,ಸಂಗೀತದಲ್ಲಿ ಭಟ್ಕಳದ ರಾಜಾರಾಮ ಸುರೇಶ ಪ್ರಭು, ಕಲೆಯಲ್ಲಿ ಅಂಕೋಲಾದ ಶಿವಾನಂದ ಸಾತು ನಾಯಕ, ಶಿಕ್ಷಣ ಕ್ಷೇತ್ರದಲ್ಲಿ ಯಲ್ಲಾಪುರದ ಬೀರಣ್ಣ ನಾಯಕ ಮೊಗಟಾ, ಅಧಿಕಾರಿಗಳಲ್ಲಿ, ಶಿರಸಿ ಎಸಿ ದೇವರಾಜ, ಕಾರವಾತ ತಹಸೀಲ್ದಾರ್ ನಿಶ್ಚಲ ನರೋನಾ, ಭಟ್ಕಳದ ಟಿಎಚ್‌ಒ ಸವಿತಾ ಕಾಮತ್, ಹಳಿಯಾಳ ತಾಪಂ ಇಒ ಪರಶುರಾಮ ಗಸ್ತೆ, ಜಿಲ್ಲಾ ಮಾಲಿನ್ಯ ನಿಯಂತ್ರಣಾಽಕಾರಿ ಬಿ.ಕೆ. ಸಂತೋಷ , ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ, ಭಟ್ಕಳ ಬೆಳಕೆ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ ಶಿರಾಲಿ,ಪೊಲೀಸ್ ಇಲಾಖೆಯ ಶಾಖಾ ಅಧೀಕ್ಷಕಿ ಸವಿತಾ ಎಂ. ನಾಯ್ಕ, ಜೊಯಿಡಾ ತಾಪಂ ಇಒ ಆನಂದ ಬಡಕುಂದ್ರಿ ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ ಎಂದು ಜಿಲ್ಲಾ ರಾಜ್ಯೋತ್ಸವ ಸಮಿತಿ ಆಯ್ಕೆ ಸಮಿತಿ ಪ್ರಕಟಣೆ ತಿಳಿಸಿದೆ.

    ಸಭೆ ಕರೆಯದೇ ಆಯ್ಕೆ ಆಕ್ಷೇಪ

    ಜಿಲ್ಲಾಡಳಿತ ಸೋಮವಾರ ಘೋಷಣೆ ಮಾಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆಯ ಬಗ್ಗೆ ಆಕ್ಷೇಪ ಕೇಳಿ ಬಂದಿದೆ.
    ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ ಮಾಡಿ ಅರ್ಜಿ ಆಹ್ವಾನಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದರು. ಅದರಲ್ಲಿ ಕಸಾಪ ಜಿಲ್ಲಾಧ್ಯಕ್ಷರು, ಶಿವಾಜಿ ಬಿಎಡ್ ಕಾಲೇಜ್ ಪ್ರಾಂಶುಪಾಲರು, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರು ಅಽಕಾರೇತರ ಸದಸ್ಯರಾಗಿದ್ದರು. ನೂರಕ್ಕೂ ಅಧಿಕ ಅರ್ಜಿಗಳು ಬಂದಿದ್ದವು.

    ಅ.30 ರಂದು ಆಯ್ಕೆ ಸಮಿತಿ ಸಭೆ ಆಯೋಜನೆಯಾಗಿರುವ ಬಗ್ಗೆ ಅಽಕಾರೇತರ ಸದಸ್ಯರಿಗೆ ಮಾಹಿತಿ ಬಂದಿತ್ತು ಎನ್ನಲಾಗಿದೆ. ಆದರೆ, ಅ.30 ರ ಮಧ್ಯಾಹ್ನವೇ ಆಯ್ಕೆ ಪಟ್ಟಿ ಸಿದ್ಧವಾಗಿತ್ತು. ಜಿಲ್ಲೆಯಲ್ಲಿ ಕಲೆ, ಸಂಸ್ಕೃತಿ, ಸಮಾಜ ಸೇವೆಯಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಕೊಡಲಾಗುವುದು ಎಂದು ಅರ್ಜಿ ಕರೆದು ಅರ್ಧಕ್ಕರ್ಧ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳಿಗೇ ಪ್ರಶಸ್ತಿ ನೀಡಲಾಗಿದೆ. ಅಧಿಕಾರಿಗಳಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರತ್ಯೇಕವಾಗಿದೆ. ಹೀಗಿರುವಾಗ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನೂ ಅವರಿಗೇ ಕೊಡುವುದರ ಅರ್ಥವೇನು ಎಂದು ಆಯ್ಕೆ ಸಮಿತಿಯಲ್ಲಿದ್ದ ಸದಸ್ಯರು ಪ್ರಶ್ನಿಸಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಪ್ರಶಸ್ತಿಗಳನ್ನು ಘೋಷಿಸಲಾಗಿದೆ ಎಂಬ ದೂರು ಕೇಳಿ ಬಂದಿದೆ. ಜಿಲ್ಲೆಯ ಕಲೆ, ಸಂಸ್ಕೃತಿಯ ಮಹತ್ವವೇ ತಿಳಿಯದ ಅಽಕಾರಿಗಳು ಕುಳಿತು ಪ್ರಶಸ್ತಿ ಘೋಷಣೆ ಮಾಡಿರುವುದರಿಂದ ಪ್ರಶಸ್ತಿ ಘನತೆ, ಗೌರವ ಕಳೆದುಕೊಂಡಿದೆ ಎಂದು ಸಮಿತಿ ಸದಸ್ಯರೊಬ್ಬರು ಅಸಮಾಧಾನ ಹೊರ ಹಾಕಿದರು.

    B.N.Vasare

    ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾಮಟ್ಟದಲ್ಲಿ ನೀಡಲ್ಪಡುವ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಆಯ್ಕೆ ಸಮಿತಿಯ ಗಮನಕ್ಕೂ ತಾರದೇ, ಕೇವಲ ಅಧಿಕಾರಿಗಳ ಸಭೆ ನಡೆಸಿ ಆಯ್ಕೆಪಟ್ಟಿ ಪ್ರಕಟಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಧೋರಣೆಯಾಗಿದೆ. ಇದನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಖಂಡಿಸುತ್ತದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್‌.ವಾಸರೆ ತಿಳಿಸಿದ್ದಾರೆ.

    ಪತ್ರಿಕಾ ಹೇಳಿಕೆ ನೀಡಿರುವ ಅವರು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಕಾರ್ಯಕ್ರಮ ಕಳೆದ ವರ್ಷದಿಂದ ಆರಂಭವಾಗಿತ್ತು. ಈ ಪ್ರಶಸ್ತಿಯನ್ನು ನೀಡುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು  ಹಾಗೂ ಇನ್ನೂ ಕೆಲವು ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡು ಆಯ್ಕೆ ಸಮಿತಿಯನ್ನು ರಚಿಸಲಾಗುತ್ತಿತ್ತು. ಈ ವರ್ಷ ಕೂಡ ಆ ಆಯ್ಕೆ ಸಮಿತಿಯನ್ನು ರಚಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷನಾದ ನನಗೆ ಪತ್ರವನ್ನು ರವಾನಿಸಿದ್ದರು. ನಂತರ ಅಕ್ಟೋಬರ್ 30ರಂದು ಸಂಜೆ 5 ಗಂಟೆಗೆ ರಾಜ್ಯೋತ್ಸವ ಪ್ರಶಸ್ತಿಗೆ ಬಂದ ಅರ್ಜಿಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿ ಸಭೆಯನ್ನು ಕರೆದಿದ್ದರು. ಈ ಪತ್ರ ಕೂಡ ನಮಗೆ ತಲುಪಿತ್ತು. ಆದರೆ ಈ ಸಭೆಯನ್ನೂ ನಡೆಸದೆ , ಆಯ್ಕೆ ಸಮಿತಿಯ ಎಲ್ಲ ಸದಸ್ಯರನ್ನೂ ಕತ್ತಲಲ್ಲಿಟ್ಟು, ಒಂದು ದಿನ ಮುಂಚಿತವಾಗಿಯೇ ಅಧಿಕಾರಿಗಳು ತಮ್ಮ ಕಾರ್ಯಾಲಯದಲ್ಲಿ  ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ನಡೆಸಿರುವುದು  ಗೊತ್ತಾಗಿದೆ. ಇದು ಇಡೀ ಆಯ್ಕೆ ಸಮಿತಿಗೆ ಮಾಡಿದ ಅವಮಾನವಾಗಿದೆ.

    ಇದನ್ನೂ ಓದಿ ಅಧಿಕಾರಿಗಳು ರಾಜಕಾರಣ ಮಾಡಲು ಹೋಗ್ಬೇಡಿ-ಸಚಿವ ಮಂಕಾಳ ಖಡಕ್‌ ಎಚ್ಚರಿಕೆ

    ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆ ಸಂದರ್ಭದಲ್ಲಿ ಕಸಾಪ ರಾಜ್ಯಾಧ್ಯಕ್ಷರು ಕೂಡ ಆಯ್ಕೆ ಸಮಿತಿ ಸದಸ್ಯರಾಗಿರುತ್ತಾರೆ. ಜಿಲ್ಲಾ ಮಟ್ಟದ ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಆಯ್ಕೆ ಸಮಿತಿಯ ಸದಸ್ಯರಾಗಿರುವುದು ನಿಯಮ. ಆದರೆ ಜಿಲ್ಲಾಧಿಕಾರಿಗಳು ಹಾಗೂ ಮತ್ತು ಅವರ ಇಲಾಖೆ ಶಿಷ್ಠಾಚಾರಕ್ಕೂ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಗಮನಕ್ಕೆ  ಹಾಗೂ  ಆಯ್ಕೆ ಸಮಿತಿಯ ಯಾವ ಸದಸ್ಯರ ಗಮನಕ್ಕೂ ತಾರದೆ, ಸಭೆಯನ್ನೂ ನಡೆಸದೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿರುವುದು ಅಧಿಕಾರಶಾಹಿ ಹಾಗೂ  ಒಂದು ರೀತಿಯ ಸರ್ವಾಧಿಕಾರದ ಧೋರಣೆಯಾಗಿದೆ. ಇದನ್ನು ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

    ಪ್ರಾದೇಶಿಕ ಅಸಮಾನತೆ

    ಪ್ರಕಟವಾಗಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಯಾದಿಯನ್ನ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಯಲ್ಪಟ್ಟಿದ್ದು,  ಈ ಆಯ್ಕೆ ಪಟ್ಟಿಯಲ್ಲಿ  ಪ್ರಾದೇಶಿಕ ಅಸಮಾನತೆಯಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಕರಾವಳಿ ಭಾಗಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗಿದ್ದು,  ಘಟ್ಟದ ಮೇಲಿನ ತಾಲೂಕುಗಳನ್ನ ಕಡೆಗಣಿಸಲಾಗಿದೆ. ಸಾರ್ವಜನಿಕ ಕ್ಷೇತ್ರದ 17 ಪ್ರಶಸ್ತಿಗಳಲ್ಲಿ ಕರಾವಳಿ ತಾಲೂಕಿನ ಒಂದೇ ತಾಲೂಕಿಗೆ  ಐದು ಪ್ರಶಸ್ತಿಗಳು ಬಂದಿವೆ. ಮತ್ತೆರಡು ಕರಾವಳಿ ತಾಲೂಕಿಗೆ ತಲಾ ನಾಲ್ಕು ಪ್ರಶಸ್ತಿಗಳು,  ಬಂದಿದೆ. ದಾಂಡೇಲಿ, ಹಳಿಯಾಳ, ಜೋಯಿಡಾ, ಮುಂಡಗೋಡ, ಸಿದ್ದಾಪುರಕ್ಕೆ ಒಂದೇ ಒಂದು ಪ್ರಶಸ್ತಿ ಬಂದಿರುವುದಿಲ್ಲ. ಇದು ರಾಜಕೀಯ ಅಥವಾ ಆಳುವವರ ಒತ್ತಡವೋ, ಸಚಿವರ, ಶಾಸಕರ ಹಸ್ತಕ್ಷೇಪವೋ  ಸ್ಪಷ್ಠ ಪಡಿಸಬೇಕಾಗಿದೆ.

     ಜೊತೆಗೆ ಸಮಾಜ ಸೇವೆ ವಿಭಾಗಕ್ಕೊಂದೇನೇ ನಾಲ್ಕು ಪ್ರಶಸ್ತಿಗಳನ್ನ ನೀಡಲಾಗಿದ್ದು,  ರಂಗಭೂಮಿ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಯಾವುದೇ ಸಂಘಟನೆಗಳಿಗೆ ಪ್ರಶಸ್ತಿಯನ್ನು ನೀಡಿಲ್ಲ. ನಮ್ಮ ಜಿಲ್ಲೆಯಿಂದ ಹೊರಗಿರುವ ವ್ಯಕ್ತಿಗಳಿಗೂ ಕೂಡ ಪ್ರಶಸ್ತಿಯನ್ನು ನೀಡಲಾಗಿದೆ. 

    ಇದರ ಜೊತೆಗೆ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ಇಲಾಖೆ ಮತ್ತು ಇಲಾಖೆ ಅಧಿಕಾರಿಗಳಿಗೆ ನೀಡಿರಲಿಲ್ಲ. (ಆವರಿಗೆ ಸರ್ವೋತ್ತಮ ಪ್ರಶಸ್ತಿಗಳು ಬೇರೆ ಸಂದರ್ಭದಲ್ಲಿರುತ್ತವೆ)  ಈ ವರ್ಷ ಇಲ್ಲಿ ಅಗತ್ಯಕ್ಕಿಂತ  ಹೆಚ್ಚಾಗಿ ಇಲಾಖೆ ಅಧಿಕಾರಿಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಇನ್ನೊಂದು ವ್ಯಂಗ್ಯವೆಂದರೆ ಉತ್ತರ ಕನ್ನಡ ಜಿಲ್ಲೆಗೆ  ಕೇವಲ ಆರು ತಿಂಗಳ ಹಿಂದಷ್ಟೇ ವರ್ಗವಾಗಿ ಬಂದಿರುವ ಅಧಿಕಾರಿ ಕೂಡಾ ಪ್ರಶಸ್ತಿ ನೀಡಿರುವುದು ವಿಪರ್ಯಾಸವಾಗಿದೆ.  ಇಲಾಖೆಗೆ ಪ್ರಶಸ್ತಿ ನೀಡುವಾಗಲೂ ಕೂಡ ಸಿರಿಸಿ, ಕಾರವಾರ, ಭಟ್ಕಳ, ಹಳಿಯಾಳ ಮತ್ತು ಕಾರವಾರ ತಾಲೂಕನ್ನು ಮಾತ್ರ ಪರಿಗಣಿಸಲಾಗಿದೆ. ಉಳಿದ ತಾಲೂಕುಗಳನ್ನು ನಿರ್ಲಕ್ಷಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹೊರ ಬಿದ್ದಿರುವ ಈ ಆಯ್ಕೆ ಪ್ರಕ್ರಿಯೆ ಹಲವು ಗೊಂದಲ ಮತ್ತು ಪ್ರಶ್ನೆಗಳಿಗೆ ಎಡೆಯಾಗಿದ್ದು,  ಜಿಲ್ಲಾಧಿಕಾರಿಗಳ ಈ ನಡೆ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯದಲ್ಲಿ ಅಸಮಾಧಾನವನ್ನು ಉಂಟುಮಾಡಿದೆ. 

    ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ

    ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರಾಗಿರುವರಲ್ಲಿ ಕೆಲವರು ಯೋಗ್ಯರು ಮತ್ತು ಪ್ರಶಸ್ತಿಗೆ ಅರ್ಹತೆಯಿದ್ದವರಿದ್ದಾರೆ. ಪ್ರಶಸ್ತಿ ಪುರಸ್ಕೃತರನ್ನು ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತದೆ. ಇದು ಪ್ರಶಸ್ತಿಗೆ ಆಯ್ಕೆಯಾದವರ ಬಗೆಗಿನ ಅಸಮಾಧಾನವಲ್ಲ. ಜಿಲ್ಲಾಧಿಕಾರಿಗಳ ನಡೆಯ ಬಗೆಗಿನ ಆಕ್ಷೇಪ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts