

ಬೆಂಗಳೂರು: ಕನ್ನಡದ ಕಿಚ್ಚು ಅನ್ಯ ಭಾಷೆ, ದೇಶದ ಜನರ ಬದುಕು ಸುಡುವ ಬೆಂಕಿಯಾಗಬಾರದು, ಬೆಳಗುವ ದೀಪವಾಗಬೇಕು. ಅನ್ಯರಿಗೂ ಪರಿಚಯಿಸಿ, ಅನ್ನದ ಮಾರ್ಗಕ್ಕೆ ಕನ್ನಡ ಕಲಿಕೆ ಅನಿವಾರ್ಯತೆ ಸೃಷ್ಟಿಸುವ ಕೈದೀವಿಗೆಯಾಗಬೇಕು. ಪರಸ್ಪರ ಸಹಭಾಗಿತ್ವದೊಂದಿಗೆ ತಾಯ್ನಾಡು, ತಾಯ್ನುಡಿ ಸಮೃದ್ಧ ಗೊಳಿಸುವ ಕೆಚ್ಚು ಮೈಗೂಡಿಸಿಕೊಳ್ಳಬೇಕು ಎಂದು ಮೂರೂ ತಜ್ಞರು ಹುರಿದುಂಬಿಸಿದರು.
ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಹೆಸರು ನಾಮಕರಣದ ಸುವರ್ಣ ಮಹೋತ್ಸವ ನಿಮಿತ್ತ ಸಂವಾದದಲ್ಲಿ, ಹಿಂದೇನಾಯಿತು ಎಂದು ಕೆದಕುವ ಬದಲು ಮುಂದೇನಾಗಬೇಕು ಎಂಬುದಕ್ಕೆ ಪ್ರೊ.ರಾಜೀವ್ ಗೌಡ, ಪಿ. ಶೇಷಾದ್ರಿ ಹಾಗೂ ವಸುಧೇಂದ್ರ ದಿಕ್ಸೂಚಿ ಹಾಕಿಕೊಟ್ಟರು.
ಮಾಗೋಪಾಯಗಳಿಗೆ ಅಡಿಪಾಯ: ಇಂಗ್ಲಿಷ್ ಪಾರಮ್ಯ, ಆರ್ಥಿಕತೆ ಪ್ರಾಧಾನ್ಯದ ಬದುಕು, ತಂತ್ರಜ್ಞಾನದ ಕ್ರಾಂತಿ ಯುಗದಲ್ಲಿ ಯಾರೋ ಬಂದು ನಮ್ಮ ಭಾಷೆ, ನಮ್ಮತನವನ್ನು ಉದ್ಧರಿಸುತ್ತಾರೆ ಎಂದು ಕಾಯುತ್ತಾ ಕುಳಿತರಾಗುವುದಿಲ್ಲ. ನಮ್ಮ ಭಾಷೆ, ನಮ್ಮ ಬದುಕು, ನಮ್ಮತನದ ಏಳಿಗೆ ನಮ್ಮ ಕೈಯ್ಯಲ್ಲೇ ಇದೆ. ವೈಯಕ್ತಿಕ ಆಸಕ್ತಿ, ಶ್ರಮಕ್ಕೆ ಸರ್ಕಾರ ಮತ್ತು ಸಂಘ-ಸಂಸ್ಥೆಗಳು ಒತ್ತಾಸೆಯಾಗಿ ನಿಂತರೆ ಬದಲಾದ ಪರಿಸ್ಥಿತಿಗೆ ತಕ್ಕಂತೆ ಕನ್ನಡ ಜಾಗತಿಕವಾಗಿ ಅನ್ನದ ಭಾಷೆಯಾಗುತ್ತದೆ, ಕರ್ನಾಟಕ ಭವ್ಯ ನೆಲೆಯಾಗುತ್ತದೆ.
ಪ್ರತಿಯೊಬ್ಬ ಕನ್ನಡಿಗ ಹೆಮ್ಮೆಯಿಂದ ತಲೆ ಎತ್ತಿ ನಿಲ್ಲುವಂತಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಭಾಷೆ ಕಲಿಕೆ ವಿಷಯದಲ್ಲಿ ಫ್ರಾನ್ಸ್ನವರ ವ್ಯಾಮೋಹ, ತಂತ್ರಜ್ಞಾನ ಸಂಶೋಧನೆಯಲ್ಲಿ ಚೀನಾದವರ ಛಲ, ಹೊಸ ಆವಿಷ್ಕಾರಗಳನ್ನು ದುಡಿಸಿಕೊಳ್ಳುವಲ್ಲಿ ಜಪಾನ್ನವರ ಬುದ್ಧಿವಂತಿಕೆ ಮಾದರಿಯಾದರೆ ಕರ್ನಾಟಕದ ನಿಸರ್ಗ ಮತ್ತು ಪ್ರತಿಭಾನ್ವಿತ ಮಾನವ ಸಂಪತ್ತು ಸದ್ವಿನಿಯೋಗವಾಗಲಿದೆ. ಕನ್ನಡ ಭಾಷೆ, ಪರಂಪರೆ, ಸಂಸ್ಕೃತಿಯ ಸಿರಿವಂತಿಕೆಯ ಮೇಲೆ ಬದುಕು ಕಟ್ಟಿಕೊಳ್ಳಲು ಏನೆಲ್ಲ ಅವಶ್ಯ ಮತ್ತು ಅನಿವಾರ್ಯವೆಂಬ ಮಾಗೋಪಾಯ ಅನುಷ್ಠಾನಕ್ಕೆ ಸಾಮ, ಬೇಧ, ದಂಡೋಪಾಯಗಳು ಮುಖ್ಯ. ಹಾಗೆಯೇ ಕನ್ನಡ, ಕರ್ನಾಟಕ ಗಟ್ಟಿ ನೆಲೆಗಟ್ಟಾಗುವುದಕ್ಕೆ ಸರ್ಕಾರ, ಸಂಘ-ಸಂಸ್ಥೆ, ಪ್ರತಿಯೊಬ್ಬ ಕನ್ನಡಿಗ ಉತ್ತರದಾಯಿ, ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ರಾಯಭಾರಿ ಎನ್ನುವುದು ಪ್ರೊ.ರಾಜೀವ್ ಗೌಡ, ಪಿ. ಶೇಷಾದ್ರಿ ಮತ್ತು ವಸುಧೇಂದ್ರ ಜತೆಗಿನ ಸಂವಾದದ ಸಾರಾಂಶ.