More

    ಪೇಯಿಂಗ್ ಗೆಸ್ಟ್‌ಗಳಿಗೆ ಕನ್ನ; ಸೋದರ ಸಂಬಂಧಿ ಗ್ಯಾಂಗ್ ಸೆರೆ

    ಬೆಂಗಳೂರು: ಬೆಳಗಿನ ಜಾವ ಪೇಯಿಂಗ್ ಗೆಸ್ಟ್‌ಗಳಿಗೆ ನುಗ್ಗಿ ಲ್ಯಾಪ್‌ಟಾಪ್ ಮತ್ತು ಮೊಬೈಲ್ ದೋಚುತ್ತಿದ್ದ ಸೋದರ ಸಂಬಂಧಿಗಳು ಸೇರಿ ಮೂವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

    ಆಂಧ್ರಪ್ರದೇಶದ ಚಿತ್ತೂರಿನ ಪ್ರಭು, ಈತನ ಸಂಬಂಧಿ ಯುವರಾಜ್ ಬಂಧಿತ ಕಳ್ಳರು. ಕದ್ದ ವಸ್ತುಗಳನ್ನು ಖರೀದಿ ಮಾಡುತ್ತಿದ್ದ ತಮಿಳುನಾಡಿನ ಸೆಲ್ವರಾಜ್ ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಗಳಿಂದ 16 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 50 ಲ್ಯಾಪ್‌ಟಾಪ್‌ಗಳು ಹಾಗೂ 7 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ನಾಲ್ವರ ಪತ್ತೆಗೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಯಶವಂತಪುರ ಠಾಣಾ ವ್ಯಾಪ್ತಿಯಲ್ಲಿ ಲ್ಯಾಪ್‌ಟಾಪ್ ಕಳ್ಳತನ ಹೆಚ್ಚಾಗಿ ವರದಿಯಾಗಿದ್ದವು. ಮತ್ತಿಕೆರೆ ಬಳಿ ಮುಂಜಾನೆ ಗಸ್ತಿನಲ್ಲಿದ್ದ ಪೊಲೀಸರು, ಶಂಕಾಸ್ಪದವಾಗಿ ಓಡಾಡುತ್ತಿದ್ದ ಯುವರಾಜ್ ಮತ್ತು ಪ್ರಭು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಕೃತ್ಯಗಳು ಬೆಳಕಿಗೆ ಬಂದಿವೆ.
    ಸೋದರ ಸಂಬಂಧಿಕರಾದ ಪ್ರಭು ಮತ್ತು ಯುವರಾಜ್ ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶಕ್ಕೆ ಕಳ್ಳತನಕ್ಕೆ ಇಳಿದಿದ್ದರು. ತಮ್ಮ ನಾಲ್ಕೈದು ಸ್ನೇಹಿತರನ್ನು ಸೇರಿಸಿ ಪಿಜಿಗಳಲ್ಲಿ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳನ್ನು ದೋಚಲು ಈ ಸಂಬಂಧಿಕರು ತಂಡ ಕಟ್ಟಿದ್ದರು.

    ಚಿತ್ತೂರಿನಿಂದ ಬಸ್ ಮತ್ತು ರೈಲಿನಲ್ಲಿ ಚಿತ್ತೂರು ಗ್ಯಾಂಗ್ ಬೆಂಗಳೂರಿಗೆ ಬಂದು ವಿದ್ಯಾರ್ಥಿಗಳು ಹೆಚ್ಚಾಗಿ ವಾಸವಾಗಿರುವ ಪೇಯಿಂಗ್ ಗೆಸ್ಟ್‌ಗಳನ್ನು ಗುರುತಿಸುತ್ತಿದ್ದರು. ಮುಂಜಾನೆ ವೇಳೆ ಬಾಗಿಲು ತೆರೆದು ಪಿಜಿಗಳಲ್ಲಿ ವಿದ್ಯಾರ್ಥಿಗಳು ನಿದ್ದೆಗೆ ಜಾರಿದ್ದ ವೇಳೆ ಕೋಣೆಗಳಿಗೆ ನುಗ್ಗಿ ಲ್ಯಾಪ್‌ಟಾಪ್, ಮೊಬೈಲ್ ಮತ್ತು ಕೈಗೆ ಸಿಕ್ಕ ಬೆಲೆಬಾಲುವ ವಸ್ತುಗಳನ್ನು ಕಳವು ಮಾಡುತ್ತಿದ್ದರು. ಕದ್ದ ವಸ್ತುಗಳನ್ನು ಸೆಲ್ವರಾಜ್ ಮೂಲಕ ವಿಲೇವಾರಿ ಮಾಡಿಸುತ್ತಿದ್ದರು.

    ಕಳೆದ ಎರಡು ವರ್ಷಗಳಿಂದ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಯಶವಂತಪುರ, ಸೋಲದೇವನಹಳ್ಳಿ, ಗಂಗಮಮ್ಮನಗುಡಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 20ಕ್ಕೂ ಹೆಚ್ಚು ಲ್ಯಾಪ್‌ಟಾಪ್ ಕಳ್ಳತನ ಪ್ರಕರಣ ಬೆಳಕಿಗೆ ಬಂದಿವೆ. ಕದ್ದ 1 ಲ್ಯಾಪ್‌ಟಾಪ್‌ನ್ನು 15 ರಿಂದ 20 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts