More

    ರಾಜಧಾನಿಯಲ್ಲಿ ಮತ್ತೆ ಶುರುವಾಗಲಿದೆ ‘ಟೈಗರ್’ ಭರಾಟೆ

    ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
    ರಾಜಧಾನಿಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸುವ ವಾಹನಗಳನ್ನು ಸಂಚಾರ ಪೊಲೀಸರು ಮತ್ತೆ ಟೋಯಿಂಗ್ ಮಾಡಿ ದಂಡ ವಿಧಿಸಲಿದ್ದಾರೆ. ಆದರೆ, ಟೋಯಿಂಗ್ ಸ್ವರೂಪ ಬದಲಾಗಲಿದೆ.

    ವಾಹನ ಚಾಲಕ, ಸವಾರರಿಗೆ ಕಿರುಕುಳ, ಭ್ರಷ್ಟಾಚಾರ ಆರೋಪದಿಂದ ಟೋಯಿಂಗ್ ವ್ಯವಸ್ಥೆಯನ್ನೇ ಸಂಚಾರ ಪೊಲೀಸರು ಸಂಪೂರ್ಣ ನಿಲ್ಲಿಸಿದ್ದರು. ಆದರೆ, ಜನರು ವಾಹನಗಳನ್ನು ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುತ್ತಿರುವುದು ಹೆಚ್ಚಾಗುತ್ತಿದ್ದು, ಸಂಚಾರದಟ್ಟಣೆ ಉಂಟಾಗುತ್ತಿದೆ.
    ಈ ಮೊದಲು ಟೋಯಿಂಗ್ ಮಾಡುವಾಗ, ‘ಸಂಚಾರ ಪೊಲೀಸರು ನಿಯಮ ಪಾಲನೆ ಮಾಡುತ್ತಿಲ್ಲ. ಟೋಯಿಂಗ್ ವಾಹನ ಟೈಗರ್ ಉಸ್ತುವಾರಿ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ಮೈಕ್‌ನಲ್ಲಿ ಮಾಹಿತಿ ಕೊಡುವುದಿಲ್ಲ. ಗುತ್ತಿಗೆ ನೌಕರರನ್ನು ಬಿಟ್ಟು ಏಕಾಏಕಿ ವಾಹನ ಜಪ್ತಿ ಮಾಡುತ್ತಾರೆ. ಈ ವೇಳೆ ವಾಹನಗಳಿಗೆ ಹಾನಿ ಆಗುತ್ತಿದೆ. ಸ್ಥಳದಲ್ಲೇ ದಂಡ ಪಾವತಿ ಮಾಡುತ್ತೇವೆ ಎಂದರೇ ಬಿಡುವುದಿಲ್ಲ. ತುರ್ತು ಕೆಲಸ ಇದ್ದರೂ ವಾಹನ ಕೊಡುವುದಿಲ್ಲ. ಟೋಯಿಂಗ್ ಮಾಡಿದ ವಾಹನ ಎಲ್ಲಿ ನಿಲ್ಲಿಸಿದ್ದಾರೆ ಎಂಬ ಮಾಹಿತಿ ಸಹ ಸಿಗದೆ ತಾಸುಗಟ್ಟಲೆ ಹುಡುಕಬೇಕು. ಲಂಚ ಪಡೆದು ವಾಹನ ಬಿಡುತ್ತಾರೆ’ ಎಂದೆಲ್ಲ ವಿವಾದ ಸುತ್ತಿಕೊಂಡಿದ್ದವು. ಇದರಿಂದ ಹೊರಬರಲು ಟೋಯಿಂಗ್ ವ್ಯವಸ್ಥೆಯನ್ನೇ ಸಂಚಾರ ಪೊಲೀಸರು ಕೈಬಿಟ್ಟಿದ್ದರು. ಬದಲಿಗೆ, ಟ್ರಾಫಿಕ್ ಪೊಲೀಸರು ಮೊಬೈಲ್‌ನಲ್ಲಿ ೆಟೋ ತೆಗೆದು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿ ದಂಡ ವಿಧಿಸುತ್ತಿದ್ದರು.

    ಇದರ ನಡುವೆ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸುವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದ ಕಾರಣಕ್ಕೆ ಸಂಚಾರ ಪೊಲೀಸರು, ವಾಹನದ ಚಕ್ರಕ್ಕೆ ಕ್ಲ್ಯಾಂಪ್ ಅಳವಡಿಸಿ ಸ್ಥಳದಲ್ಲೇ ದಂಡ ವಸೂಲಿ ಮಾಡಿ ವಾಹನ ಬಿಟ್ಟು ಕಳುಹಿಸುತ್ತಿದ್ದಾರೆ. ಆದರೂ ವಾಹನ ಸವಾರ/ ಚಾಲಕರು ಪ್ರಮುಖ ರಸ್ತೆ, ಜಂಕ್ಷನ್‌ಗಳಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಪರಿಣಾಮ, ಪೀಕ್ ಅವರ್‌ನಲ್ಲಿ ಸಂಚಾರದಟ್ಟಣೆ ಉಂಟಾಗುತ್ತಿದೆ. ಸ್ಥಳದಲ್ಲಿ ಚಾಲಕ, ಸವಾರರು ಇಲ್ಲದೆ ಪೊಲೀಸರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಲು ಸಾಧ್ಯವಾಗುತ್ತಿಲ್ಲ. ಇತರ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಆದರಿಂದ ಮತ್ತೆ ಟೋಯಿಂಗ್ ಶುರು ಮಾಡಬೇಕೆಂಬ ಕೂಗು ಕೇಳಿಬಂದಿದೆ. ವಿವಾದ ಸುತ್ತಿಕೊಳ್ಳದಂತೆ ಟೋಯಿಂಗ್ ವ್ಯವಸ್ಥೆಗೆ ಹೊಸ ರೂಪ ಕೊಡುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ.

    ಸರ್ಕಾರದಿಂದಲೇ ಟೈಗರ್ ಖರೀದಿ

    ಈ ಮೊದಲು ಟೋಯಿಂಗ್ ವಾಹನ (ಟೈಗರ್) ಮತ್ತು ಸಿಬ್ಬಂದಿಗೆ ಟೆಂಡರ್ ಕರೆಯಲಾಗುತ್ತಿತ್ತು. ಟೈಗರ್ ವಾಹನಕ್ಕೆ ಓರ್ವ ಎಎಸ್‌ಐ ನೇಮಕ ಮಾಡಿ ಟಾರ್ಗೆಟ್ ನೀಡಲಾಗುತ್ತಿತ್ತು. ಆದರೆ, ಇದೀಗ ಸರ್ಕಾರವೇ ಟೋಯಿಂಗ್ ವಾಹನ ಖರೀದಿಸಿ ಪ್ರತಿ ಠಾಣೆಗೆ ಅಥವಾ ಡಿಸಿಪಿ ವಿಭಾಗಕ್ಕೆ ಕೊಡುವುದು, ಅಗತ್ಯ ಸಿಬ್ಬಂದಿಗೆ ದಿನಗೂಲಿ ಕೊಟ್ಟು ನೇಮಕ ಮಾಡಿಕೊಳ್ಳುವುದು, ಟಾರ್ಗೆಟ್ ನೀಡುವ ಬದಲು ಅಗತ್ಯ ಇರುವ ಕಡೆಗೆ ಅಥವಾ ಪೀಕ್ ಅವರ್‌ನಲ್ಲಿ ಟೋಯಿಂಗ್ ನಡೆಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಒಳಿತು ಎನ್ನಲಾಗುತ್ತಿದೆ.

    ನೋ ಪಾರ್ಕಿಂಗ್ ದಂಡ ವಸೂಲಿ ಮಾತ್ರ

    ವ್ಹೀಲ್ ಕ್ಲ್ಯಾಂಪ್ ಅಳವಡಿಸಿದ್ದರೆ ಅಂತಹ ವಾಹನ ಚಾಲಕ/ ಸವಾರರಿಂದ ನೋ ಪಾರ್ಕಿಂಗ್ ದಂಡ ವಸೂಲಿ ಮಾಡುತ್ತಿದ್ದಾರೆ. ದ್ವಿಚಕ್ರ ವಾಹನಗಳಿಗೆ ಮೊದಲು 500 ರೂ., 2ನೇ ಬಾರಿಗೆ ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಅದೇ ರೀತಿ ಭಾರಿ ವಾಹನಗಳಿಗೆ 500 ರೂ. ಹೆಚ್ಚುವರಿ ಜುಲ್ಮಾನೆ ಬೀಳಲಿದೆ. ಈ ಮೊದಲು ಟೋಯಿಂಗ್ ಆದ ದ್ವಿಚಕ್ರ ವಾಹನಕ್ಕೆ 1,150 ರೂ. (500 ರೂ. ದಂಡ, ಸರ್ಕಾರಿ ಶುಲ್ಕ 350 ರೂ. ಮತ್ತು 350 ರೂ. ಟೋಯಿಂಗ್ ಶುಲ್ಕ) ವಿಧಿಸಲಾಗುತ್ತಿತ್ತು. ಇದು ಜನರಿಗೂ ಹೊರೆಯಾಗಿ ರಸೀದಿ ಬೇಡವೆಂದು ಲಂಚ ಕೊಟ್ಟು ವಾಹನ ಬಿಡಿಸಿಕೊಳ್ಳುತ್ತಿದ್ದರು. ಇದಕ್ಕೆ ಕೆಲವೊಮ್ಮೆ ಪೊಲೀಸರ ಸಹಕಾರವೂ ಇರುತ್ತಿತ್ತು. ಆದರೆ, ಇದೀಗ ಪೊಲೀಸರೇ ಟೋಯಿಂಗ್ ನಡೆಸುವ ಪರಿಣಾಮ ಕೇವಲ ನೋ ಪಾರ್ಕಿಂಗ್ ದಂಡ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಇದು ಜನರಿಗೂ ಹೊರೆ ಅನಿಸುವುದಿಲ್ಲ. ನಿಯಮ ಉಲ್ಲಂಸಿದರೆ ದಂಡದ ಎಂಬ ಭಯ ಇರಲಿದೆ. ಜೊತೆಗೆ ಟ್ರಾಫಿಕ್ ಜಾಮ್ ತಗ್ಗಿಸಲು ಅನುಕೂಲವಾಗಲಿದೆ.

    ಇತರ ಮಾರ್ಗದಲ್ಲಿ ದಂಡ ವಸೂಲಿ

    2023ರಲ್ಲಿ ಟೋಯಿಂಗ್ ಮಾಡದೆ ನೋ ಪಾರ್ಕಿಂಗ್ ಸ್ಥಳದಲ್ಲಿ ದಂಡ ವಸೂಲಿ ಮಾಡಲಾಗಿದೆ. ಕೂಡು ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡಿದವರಿಂದ 11,040 ರೂ. ಮತ್ತು ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಇತರೆ ವಾಹನ ಪಾರ್ಕಿಂಗ್ ಮಾಡಿದ ಚಾಲಕರಿಂದ 5,499 ರೂ. ಹಾಗೂ ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ 78,238 ರೂ., ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆಯಿಂದ 11,30,855 ರೂ. ದಂಡವನ್ನು ಸಂಚಾರ ಪೊಲೀಸರು ವಸೂಲಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts