More

  ಕನಕಗಿರಿ ಉತ್ಸವಕ್ಕೆ ಉತ್ಸಾಹದ ಕೊರತೆ

  ಕನಕಗಿರಿ: ಹಂಪಿಯಲ್ಲಿ ಜ.27ರಿಂದ 29ರವರೆಗೆ ನಡೆಯುವ ಉತ್ಸವಕ್ಕೆ ಭರದಿಂದ ಸಿದ್ಧತೆಗಳು ನಡೆದಿವೆ. ಆದರೆ, ವಿಜಯನಗರ ಅರಸರ ಸಾಮಂತರ ನಾಡಾದ ಕನಕಗಿರಿ ಉತ್ಸವಕ್ಕೆ ಜಿಲ್ಲಾಡಳಿತ ಉತ್ಸಾಹ ತೋರದಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.

  ಪಕ್ಷೇತರರಾಗಿ ಗೆದ್ದು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಶಿವರಾಜ ತಂಗಡಗಿ 2010ರಲ್ಲಿ ಕನಕಗಿರಿ ಉತ್ಸವ ಆಚರಿಸಿ ಮುನ್ನುಡಿ ಬರೆದಿದ್ದರು. ಆ ಬಳಿಕ 2013ರಲ್ಲಿ ಅದೇ ಬಿಜೆಪಿ ಸರ್ಕಾರದಲ್ಲಿ ಎರಡನೇ ಬಾರಿಯೂ ಆಚರಿಸಲಾಗಿತ್ತು. ನಂತರ ಕಾಂಗ್ರೆಸ್ ಸೇರಿ ಗೆದ್ದ ತಂಗಡಗಿ, ಸಿದ್ದರಾಮಯ್ಯ ಸರ್ಕಾರವಿದ್ದಾಗ 2015ರಲ್ಲಿ ಒಮ್ಮೆ ಉತ್ಸವ ಆಚರಿಸಿದ್ದರು. 2018ರ ಚುನಾವಣೆಯಲ್ಲಿ ಬಸವರಾಜ ದಢೇಸುಗೂರು ಜಯ ಸಾಧಿಸಿದ ಮೇಲೆ ಉತ್ಸವ ನಡೆಯಲಿಲ್ಲ. 2020 ಹಾಗೂ 2021ರಲ್ಲಿ ಕರೊನಾ ಅಡ್ಡಿಯಾಯಿತು. ಈಗ ಯಾವ ಅಡೆತಡೆ ಇಲ್ಲ. ಉತ್ಸವಕ್ಕೆ ಶಾಸಕರು, ಜಿಲ್ಲಾಡಳಿತ ಉತ್ಸಾಹ ತೋರಬೇಕು ಎಂಬ ಒತ್ತಾಯ ಕೇಳಿಬಂದಿದೆ.

  ಹೊಸಪೇಟೆ ಪ್ರತಿನಿಧಿಸುವ ಆನಂದಸಿಂಗ್ ಪ್ರವಾಸೋದ್ಯಮ ಸಚಿವರಾಗಿದ್ದು, ಹಂಪಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಉತ್ಸುಕತೆ ತೋರಿದ್ದಾರೆ. ಆದರೆ, ಅವರೇ ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು, ಕ್ಷೇತ್ರದ ಶಾಸಕರು ಬಿಜೆಪಿಗರೇ ಆಗಿದ್ದರೂ ಕನಕಗಿರಿ ಉತ್ಸವ ಆಚರಣೆಗೆ ಮುಂದಾಗಿಲ್ಲ. ಈಗಾಗಲೇ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಇದಕ್ಕೆ ಸಿದ್ಧಗೊಳ್ಳುತ್ತಿರುವ ಶಾಸಕ ದಢೇಸುಗೂರು, ಉತ್ಸವ ಆಚರಣೆಗೆ ತಮ್ಮದೇ ಸರ್ಕಾರದ ಮೇಲೆ ಒತ್ತಡ ಹಾಕುತ್ತಾರಾ? ಇಲ್ಲವಾ? ಕಾದು ನೋಡಬೇಕು.

  ರಾಜ್ಯಕ್ಕೆ ಮತ್ತಷ್ಟು ಪರಿಚಿತ: ಎರಡನೇ ತಿರುಪತಿ ಖ್ಯಾತಿಯ ಶ್ರೀ ಕನಕಾಚಲ ಲಕ್ಷ್ಮೀನರಸಿಂಹ ಸ್ವಾಮಿ ಜಾತ್ರೆಯಿಂದ ಪ್ರಸಿದ್ಧಿಯಾಗಿದ್ದ ಐತಿಹಾಸಿಕ ಕ್ಷೇತ್ರ ಕನಕಗಿರಿ, ಮೂರು ಬಾರಿಯ ಉತ್ಸವದೊಂದಿಗೆ ರಾಜ್ಯಕ್ಕೆ ಮತ್ತಷ್ಟು ಪರಿಚಿತವಾಗಿತ್ತು. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಆದಿಯಾಗಿ ಸಚಿವರು, ಶಾಸಕರು, ಚಿತ್ರನಟರಾದ ದರ್ಶನ್, ಸುದೀಪ್, ರಾಮಕುಮಾರ್, ಸಂಗೀತ ನಿರ್ದೇಶಕ ಹಂಸಲೇಖ, ಹಿನ್ನೆಲೆ ಗಾಯಕ ವಿಜಯ ಪ್ರಕಾಶ್‌ರಂತಹ ಹಲವು ಕಲಾವಿದರು ಆಗಿನ ಉತ್ಸವಗಳಲ್ಲ್ಲಿ ಪಾಲ್ಗೊಂಡಿದ್ದರು. ಕೊಪ್ಪಳ ಹಾಗೂ ನೆರೆಯ ಜಿಲ್ಲೆಗಳ ಕಲಾವಿದರಿಗೆ ಅವಕಾಶ ದೊರೆತ್ತಿತ್ತು. ಗ್ರಾಮೀಣ ಕ್ರೀಡೆಗಳಲ್ಲಿ ಅವಕಾಶ ದೊರೆತಿದ್ದರಿಂದ ಕ್ರೀಡಾಪಟುಗಳು ಸಂತಸಪಟ್ಟಿದ್ದರು.

  ಐದು ವರ್ಷಗಳ ಹಿಂದೆ (2018-19) ಆನೆಗೊಂದಿ ಉತ್ಸವ ನಡೆಯಿತು. ಆದರೆ, ಒಮ್ಮೆಯೂ ಕನಕಗಿರಿ ಉತ್ಸವ ಆಚರಿಸಿಲ್ಲ. ಇದಕ್ಕೆ ಶಾಸಕ ಬಸವರಾಜ ದಢೇಸುಗೂರು ಉತ್ಸಾಹ ತೋರದಿರುವುದು ಕಾರಣ. ಶಾಸಕರಿಗೆ ಟಿಕೆಟ್ ತರುವುದೇ ದೊಡ್ಡ ಉತ್ಸವವಾಗಿದೆ. ಒಂದು ವೇಳೆ ಟಿಕೆಟ್ ತಂದರೆ ಅವರಿಗೆ ಅದೇ ಕನಕಗಿರಿ ಉತ್ಸವ.
  | ಶಿವರಾಜ ತಂಗಡಗಿ, ಮಾಜಿ ಸಚಿವ

  ಆನೆಗೊಂದಿ ಉತ್ಸವ, ಕಿತ್ತೂರು ಉತ್ಸವ, ಚಿತ್ರದುರ್ಗ ಉತ್ಸವ, ಚಿಕ್ಕಬಳ್ಳಾಪುರ ಉತ್ಸವ, ಈಗ ಹಂಪಿ ಉತ್ಸವ ಕೂಡ ನಡೆಯಲಿದೆ. ಆದರೆ, ಕನಕಗಿರಿ ಉತ್ಸವ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಶಾಸಕರು ಕಾಳಜಿ ವಹಿಸುತ್ತಿಲ್ಲ. ಉತ್ಸವ ಆಚರಣೆಗೆ ಕ್ರಮವಹಿಸಲಿ.
  | ದುರ್ಗಾದಾಸ್ ಯಾದವ್, ಸಾಮಾಜಿಕ ಹೋರಾಟಗಾರ, ಕನಕಗಿರಿ

  See also  ಅವನತಿ ಅಂಚಿನಲ್ಲಿ ಮಂಡಾಳು ಭಟ್ಟಿ ಉದ್ಯಮ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts