More

    ಕನಕಗಿರಿಯ ಕನಕಾಚಲ ದೇವಸ್ಥಾನ, ವೆಂಕಟಪತಿ ಬಾವಿ ವಾಸ್ತುಶಿಲ್ಪಕ್ಕೆ ಮನಸೋತ ಜಿಪಂ ಸಿಇಒ

    ಕನಕಗಿರಿ: ನಾನಾ ಕಾರ್ಯಕ್ರಮಗಳ ಉದ್ಘಾಟನೆಗೆ ಪಟ್ಟಣಕ್ಕೆ ಆಗಮಿಸಿದ್ದ ಜಿಪಂ ಸಿಇಒ ಫೌಜಿಯಾ ತರುನಮ್ ಕಾರ್ಯಕ್ರಮಗಳ ಒತ್ತಡದ ನಡುವೆಯೂ ಸ್ವ ಇಚ್ಛೆಯಿಂದ ಇಲ್ಲಿನ ನಾನಾ ಸ್ಮಾರಕಗಳನ್ನು ವೀಕ್ಷಿಸಿ ವಾಸ್ತುಶಿಲ್ಪಕ್ಕೆ ಬೆರಗಾದರು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಜಿಲ್ಲಾಡಳಿತ ಮುಂದಾಗಿದ್ದು, ಸ್ವತಃ ಡಿಸಿ, ಜಿಪಂ ಸಿಇಒ ಹಾಗೂ ಅಧಿಕಾರಿಗಳು ಬಿಡುವಿನ ಸಮಯದಲ್ಲಿ ಪ್ರವಾಸಿ ತಾಣಗಳಿಗೆ ತೆರಳಿ ಪ್ರವಾಸಿಗರಿಗೆ ಪ್ರೆರೇಪಿಸುತ್ತಿದ್ದಾರೆ.

    ಅದರಂತೆ ವಿಜಯನಗರ ಅರಸರ ಕಾಲದಲ್ಲಿ ಗುಜ್ಜಲ ವಂಶಸ್ಥರಿಂದ ಕನಕಗಿರಿಯಲ್ಲಿ ನಿರ್ಮಾಣವಾದ ಸ್ಮಾರಕಗಳನ್ನು ಜಿಪಂ ಸಿಇಒ ವೀಕ್ಷಣೆ ಮಾಡಿ ಖುಷಿಪಟ್ಟಿದ್ದಾರೆ. ತಾಪಂನಿಂದ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಂಜೀವಿನಿ ಮಾಸಿಕ ಸಂತೆ ಉದ್ಘಾಟನೆಗೆ ಆಗಮಿಸಿದ್ದ ಅವರು, ವೇದಿಕೆ ಕಾರ್ಯಕ್ರಮ ನಡೆಸದೇ ತಹಸೀಲ್ದಾರ್ ಧನಂಜಯ ಮಾಲಗಿತ್ತಿ, ತಾಪಂ ಇಒ ಕಾವ್ಯಾರಾಣಿ ಅವರೊಂದಿಗೆ ನೇರ ಕನಕಾಚಲ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ದೇವಸ್ಥಾನದ ಇತಿಹಾಸ ತಿಳಿದುಕೊಂಡರು. ಹಂಪೆಯಂತೆ ವಾಸ್ತುಶಿಲ್ಪ ಹೊಂದಿರುವ ಕನಕಾಚಲ ದೇವಸ್ಥಾನದಲ್ಲಿನ ದಕ್ಷಿಣ ಭಾಗದ ಗೋಪುರ ತಲೆ ಕೆಳಗಾಗಿ ಕಾಣಿಸುವುದನ್ನು ವೀಕ್ಷಿಸಿ ವೈಜ್ಞಾನಿಕವಾಗಿ ಈ ಹಿಂದೆಯೆ ದೇವಸ್ಥಾನ ನಿರ್ಮಿಸಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ನಂತರ ಎಪಿಎಂಸಿಯಲ್ಲಿನ ವೆಂಕಟಪತಿ ಬಾವಿಗೂ ತೆರಳಿದ ಅವರು, ಇಷ್ಟೊಂದು ಸುಂದರವಾಗಿರುವ ಸ್ಮಾರಕ ಹೆಚ್ಚಿನ ಪ್ರಚಾರಕ್ಕೆ ಬಂದಿಲ್ಲದಂತೆ ಕಾಣುತ್ತೆ ಎಂದರು. ಕಲ್ಲಿನಲ್ಲಿ ನಾದ ಹೊಮ್ಮುವ ಕಂಬಗಳನ್ನು ಬಾರಿಸಿ ಸಂತಸಪಟ್ಟರು. ಎರಡು ಬದಿಯಲ್ಲಿನ ನಾದ ಹೊಮ್ಮುವ ಕಂಬಗಳನ್ನು ಎಣಿಕೆ ಮಾಡಿ ಒಂದೊಂದು ಕಂಬದಲ್ಲಿ ಒಂದೊಂದು ಸ್ವರ ಬರುವಂತೆ ಕೆತ್ತನೆ ಮಾಡಿರಬೇಕು. ಈ ವಿಚಾರ ಸಂಗೀತಗಾರರಿಗೆ ತಿಳಿದಿರುತ್ತದೆ ಎಂದರು. ಬಾವಿಯಲ್ಲಿನ ತಂಪಾದ ವಾತಾವರಣಕ್ಕೆ ಮನಸೋತ ಅವರು, ಬಾವಿಯಲ್ಲಿ ನೀರು ಸಂಗ್ರಹಿಸಿದರೆ ಇನ್ನಷ್ಟು ಆಕರ್ಷಕವಾಗುತ್ತದೆ. ಇದರಿಂದ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಬಹುದು ಎಂದು ತಮ್ಮ ಮೊಬೈಲ್‌ನಲ್ಲಿ ಶಿಲ್ಪಕಲೆಯ ಫೋಟೊ ಕ್ಲಿಕ್ಕಿಸಿಕೊಂಡರು. ವೀಕ್ಷಣಾ ಮಹಡಿಯಲ್ಲಿನ ಶಿಲ್ಪಕಲೆಯನ್ನು ನೋಡಿ ಬೆರಗಾದರು. ಏತ ವ್ಯವಸ್ಥೆಯ ಮೂಲಕ ನೀರನ್ನು ಕೃಷಿ ಜಮೀನಿಗೆ ಹರಿಸುವುದಕ್ಕೆ ಪ್ರಾಶಸ್ತ್ಯ ನೀಡಿರುವ ಅರಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಗೊಂದಲದಲ್ಲಿ ಪುಷ್ಕರಣಿ ವೀಕ್ಷಣೆ
    ಜಿಪಂ ಸಿಇಒ ತರುನಮ್ ಕನಕಾಚಲ ದೇವಸ್ಥಾನದ ಬಳಿಕ ವೆಂಕಟಪತಿ ಬಾವಿ ವೀಕ್ಷಣೆ ಮಾಡಬೇಕಿತ್ತು. ಆದರೆ, ಅಧಿಕಾರಿಗಳಿಗೆ ಮಾಹಿತಿ ಕೊರತೆಯಿಂದ ಪುಷ್ಕರಣಿಗೆ ತೆರಳಬೇಕಾಯಿತು. ಸಿಇಒ ಪುಷ್ಕರಣಿ ವೀಕ್ಷಿಸಿ, ಸುತ್ತಲಿನ ದೇವಸ್ಥಾನಗಳ ಕುರಿತು ತಿಳಿದುಕೊಂಡರು. ಪುಷ್ಕರಣಿ ಸ್ವಚ್ಛತೆ ಕಾಪಾಡಬೇಕಲ್ಲದೇ, ನೀರು ನಿಲ್ಲಿಸಿ ಲಾರ್ವ ಸಮಸ್ಯೆ ಕಾಣಿಸದಂತೆ ಮೀನುಗಳನ್ನು ಬಿಡಬೇಕು. ಪಪಂನಿಂದ ಪುಷ್ಕರಣಿ ಅಭಿವೃದ್ಧಿಗೆ ಅವಕಾಶವಿದ್ದು, ತಹಸೀಲ್ದಾರ್ ಅಗತ್ಯ ಕ್ರಮಕ್ಕೆ ಮುಂದಾಗಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts